ದೇಶದ್ರೋಹದ ಕಾನೂನುಗಳು ರದ್ದಾಗಬೇಕು: ನಿವೃತ್ತ ನ್ಯಾ. ನಾಗಮೋಹನ್‌ದಾಸ್

Update: 2017-11-18 17:03 GMT

ಬೆಂಗಳೂರು, ನ.18: ಇಂದಿನ ಜೈಲುಗಳಲ್ಲಿ ಮೂರನೆ ಎರಡರಷ್ಟು ವಿಚಾರಣಾಧೀನ ಖೈದಿಗಳಿದ್ದಾರೆ. ಅದರಲ್ಲಿ ಶೇ.65 ರಷ್ಟು ಜನರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದವರು. ಅವರಲ್ಲಿ ಸಾಕ್ಷರತೆ ಮತ್ತು ಕಾನೂನಿನ ಅರಿವು ಕಡಿಮೆ ಇದ್ದು, ಸ್ವಯಂ ಸೇವಾ ಸಂಸ್ಥೆಗಳು ಖೈದಿಗಳ ಹಕ್ಕುಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಸಲಹೆ ನೀಡಿದ್ದಾರೆ.

ಪೀಪಲ್ಸ್ ಫೋರಮ್ ಫಾರ್ ಜಸ್ಟೀಸ್ ಸಂಘಟನೆಯು ನಗರದ ಎಸ್‌ಸಿಎಂ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾನವ ಹಕ್ಕುಗಳು ಕುರಿತಾದ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಅಸಮಾನತೆ, ಆರ್ಥಿಕ ಪರಿಸ್ಥಿತಿಗಳು ಅಪರಾಧಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ನಿರುದ್ಯೋಗ ಹಾಗೂ ಅಪರಾಧ, ವೇಶ್ಯಾವಾಟಿಕೆ, ಭಯೋತ್ಪಾದನೆ, ಆತ್ಮಹತ್ಯೆ, ಕೋಮುವಾದಗಳಿಗೆ ನೇರ ಸಂಬಂಧವಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಿದೆ ಎಂದು ತಿಳಿಸಿದರು.

ಜೈಲುಗಳು ಅಪರಾಧಿಗಳ ಮನಃಪರಿವರ್ತನೆಯ ಕೇಂದ್ರಗಳಾಗಬೇಕು. ಆದರೆ, ಅವುಗಳು ಇಂದು ಅಸಮಾನತೆಯ ತಾಣಗಳಾಗಿವೆ. ಅಲ್ಲಿ ಪ್ರಭಾವಿ ಅಪರಾಧಿಗಳಿಗೆ ಬಿರಿಯಾನಿ ಸಿಗುತ್ತದೆ. ವಿಚಾರಣಾಧೀನ ಮುಗ್ಧ ಆರೋಪಿಗಳಿಗೆ ಹುಳುಬಿದ್ದ ಅನ್ನ ಸಿಗುತ್ತದೆ. ಅಪರಾಧಿಗಳು ಮನಃಪರಿವರ್ತನೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಜೈಲು ಶಾಸನಗಳು ಸುಧಾರಿಸಬೇಕು. ಕೇಂದ್ರ ಸರಕಾರ 2016ರಲ್ಲಿ ರೂಪಿಸಿರುವ ಬಂದಿಖಾನೆ ಸುಧಾರಣೆಯ ನಿಯಮಗಳನ್ನು ರಾಜ್ಯ ಸರಕಾರಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು.

ಕ್ರಿಮಿನಲ್ ನ್ಯಾಯಂಗ ನಿಂದನೆ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಗೂ ದೇಶದ್ರೋಹದ ಕಾನೂನುಗಳನ್ನು ಬ್ರಿಟಿಷರು ರೂಪಿಸಿದರು. ಇಂದಿನ ಕಾಲಕ್ಕೆ ಅಪ್ರಸ್ತುತವಾಗಿರುವ ಅವುಗಳನ್ನು ತೆಗೆದು ಹಾಕಬೇಕು. ನ್ಯಾಯಾಂಗದ ತೀರ್ಪುಗಳನ್ನು ಆರೋಗ್ಯಕರ ಹಾಗೂ ರಚನಾತ್ಮಕ ದೃಷ್ಟಿಯಿಂದ ವಿಮರ್ಶೆ ಮಾಡುವ ಅವಕಾಶ ಸಂವಿಧಾನದಲ್ಲಿದೆ ಎಂದು ವಿವರಿಸಿದರು.

ಸಾಮಾಜಿಕ ಕಾರ್ಯಕರ್ತ ಮನೋಹರ ಚಂದ್ರ ಪ್ರಸಾದ್ ಮಾತನಾಡಿ, ಎಲ್ಲ ರಂಗದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸಿದಾಗಲೇ ಸಾಮಾಜಿಕ ಸುಧಾರಣೆ ಆಗುತ್ತದೆ. ಇಲ್ಲದಿದ್ದರೆ ಜೈಲುಗಳು ತುಂಬಿ ತುಳುಕುತ್ತವೆ. ಸರಕಾರದ ಆಡಳಿತದಲ್ಲಿ ಮಾನವೀಯತೆ ಮತ್ತು ಸೂಕ್ಷ್ಮತೆ ಬಂದಾಗ ಜೈಲುಗಳು ಬರಿದಾಗುತ್ತವೆ ಎಂದ ಅವರು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಬಿಕ್ಕಟ್ಟುಗಳು ಸಂಘರ್ಷಗಳನ್ನು ಸೃಷ್ಟಿಸುತ್ತಿವೆ. ಆ ಸಂಘರ್ಷಗಳ ಬಲಿಪಶುಗಳಾದ ಜನಸಾಮಾನ್ಯರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಆಡಳಿತ ವರ್ಗ ಮಾಡಬೇಕು ಎಂದು ಮನವಿ ಮಾಡಿದರು.

ಸಾಮಾಜಿಕ ಕಾರ್ಯಕರ್ತ ಶಫಿವುಲ್ಲಾ ಶೇಖ್ ಮಾತನಾಡಿ, ಜೈಲುಗಳಲ್ಲಿ ಕ್ರಿಮಿನಲ್ ಖೈದಿಗಳೊಂದಿಗೆ ವಿಚಾರಣಾಧೀನ ಆರೋಪಿಗಳನ್ನು ಇರಿಸಲಾಗುತ್ತಿದೆ. ಇದರಿಂದ ಆರೋಪಿಗಳ ಮೇಲೆ ದೈಹಿಕ ಹಲ್ಲೆಗಳು ಹಾಗೂ ಮಾನಸಿಕ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಮೊಹಮ್ಮದ್ ಕಕ್ಕಿಂಜೆ, ನಗರಗೆರೆ ರಮೇಶ್ ಹಾಗೂ ಯುವ ವಕೀಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News