'ಬಿಜೆಪಿ ನಾಯಕರು ಹಿಂದೂ ಧರ್ಮಕ್ಕೆ ಅಪಚಾರ ಎಸಗುತ್ತಿದ್ದಾರೆ'

Update: 2017-11-18 16:57 GMT

ಬೆಂಗಳೂರು, ನ.18: ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನೀಡಿರುವ ಹೇಳಿಕೆಗಳು ಅವರ ಸಂಸ್ಕೃತಿಯನ್ನು ಬಿಂಬಿಸುತ್ತಿವೆ. ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಅವರು ಸಂಸ್ಕೃತಿಯನ್ನೇ ಮರೆತು ಮಾತನಾಡುತ್ತಿದ್ದಾರೆ. ಇಂತಹ ಕೀಳುಮಟ್ಟದ ಮಾತುಗಳನ್ನಾಡಲು ಅವರಿಗೆ ಕೇಂದ್ರ ಸರಕಾರ ಸಚಿವ ಸ್ಥಾನ ನೀಡಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ತಿರುಗೇಟು ನೀಡಿದ್ದಾರೆ.

ಶನಿವಾರ ನಗರದ ಯಲಹಂಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೀಳುಮಟ್ಟದಲ್ಲಿ ಮಾತನಾಡುವ ಮೂಲಕ ಅನಂತಕುಮಾರ್ ಹೆಗ್ಡೆ ಬಿಜೆಪಿಯ ಅನಾಗರಿಕ ಸಂಸ್ಕೃತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ಕಿಡಿಕಾರಿದರು.

ಹಿಂದೂ ಧರ್ಮದ ಪ್ರತಿಪಾದಕರೆಂದು ಬೊಗಳೆ ಬಿಡುವ ಬಿಜೆಪಿ ನಾಯಕರು ಹಿಂದೂ ಧರ್ಮಕ್ಕೆ ಅಪಚಾರ ಎಸಗುತ್ತಿದ್ದಾರೆ. ಕೇವಲ ಓಟಿನ ರಾಜಕಾರಣಕ್ಕಾಗಿ ಹಿಂದೂ ಧರ್ಮದ ಹೆಸರನ್ನು ಹೇಳುವ ಬಿಜೆಪಿ ನಡುವಳಿಕೆ ಜನವಿರೋಧಿಯಾಗಿದೆ. ಇಂತಹವರು ಹಿಂದೂ ಧರ್ಮದ ಹೆಸರನ್ನು ಹೇಳುವುದಕ್ಕೂ ಯೋಗ್ಯತೆಯಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮ, ಜಾತಿ ಸೇರಿದಂತೆ ಎಲ್ಲ ಕಂದಾಚಾರಗಳನ್ನು ಮೀರಿ ಎಲ್ಲರನ್ನು ಗೌರವಿಸುವಂತೆ ಹಿಂದೂ ಧರ್ಮ ತತ್ವಗಳು ಬೋಧಿಸುತ್ತವೆ. ಆದರೆ, ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ಮಾತನಾಡುವ ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಎಲ್ಲರನ್ನು ತೆಗಳುತ್ತಾ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಬಿಜೆಪಿಯ ಜನವಿರೋಧಿ, ಧರ್ಮವಿರೋಧಿ ನೀತಿಗಳನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈಗಾಗಲೇ ಬಿಜೆಪಿ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ತಿಳಿಸಿದರು.

ಈ ಹಿಂದೆ ಬೆಳಗಾವಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, "ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ಕರ್ನಾಟಕ ದೇಶದ್ರೋಹಿಗಳ ನಾಡಾಗುತ್ತಿದೆ. ಬೆಂಗಳೂರಿನಲ್ಲಿ ಸುಮಾರು 4 ಲಕ್ಷ ಜನ ಅಕ್ರಮ ಬಾಂಗ್ಲಾ ನಿವಾಸಿಗಳಿದ್ದಾರೆ. ಕೇವಲ ಬೆಂಗಳೂರು ಮಾತ್ರವಲ್ಲದೇ ಬೆಳಗಾವಿ, ಬಿಜಾಪುರ, ಹುಬ್ಬಳ್ಳಿ, ಧಾರವಾಡ ಮತ್ತು ಕಿತ್ತೂರಿನಲ್ಲಿ ಕೂಡ ನೀವು ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಕಾಣಬಹುದು. ಕೆಲ ಸಮುದಾಯದವರ ಓಲೈಕೆಗಾಗಿ ಸಿಎಂ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದು, ಓಟಿನ ಆಸೆಗೆ ಮತ್ತು ಅಧಿಕಾರಕ್ಕಾಗಿ ಯಾರ ಬೂಟನ್ನಾದರೂ ನೆಕ್ಕುತ್ತಾರೆ. ಟಿಪ್ಪುಜಯಂತಿ ಆಚರಿಸುವ ಸಿದ್ದರಾಮಯ್ಯ ಕರ್ನಾಟಕದ ಹೆಮೆಯ್ಮ ರಾಣಿ ಚೆನ್ನಮ್ಮರನ್ನು ಮರೆತಿದ್ದಾರೆ. ರಾಣಿ ಚೆನ್ನಮ್ಮರಷ್ಟೇ ಅಲ್ಲ, ಕರ್ನಾಟಕ ಏಕೀಕರಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಆಲೂರು ವೆಂಕಟರಾಯರು, ಕನ್ನಡಕ್ಕಾಗಿ ಶ್ರಮಿಸಿದ ರನ್ನ, ಜನ್ನ, ಪಂಪ, ಕುವೆಂಪು ಮತ್ತು ಬೇಂದ್ರೆ ಅವರನ್ನೂ ಕೂಡ ಮರೆತಿದ್ದಾರೆ ಎಂದು ಕಿಡಿಕಾರಿದ್ದರು."

'ಕನ್ನಡಿಗರಿಗೆ ಅಗೌರವ'

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೀಳು ಮಟ್ಟದಲ್ಲಿ ಮಾತನಾಡಿರುವ ಅನಂತಕುಮಾರ್ ಹೆಗಡೆ ಪ್ರತಿಯೊಬ್ಬ ಕನ್ನಡಿಗರಿಗೂ ಅವಮಾನ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಆದರೆ, ವೈಯಕ್ತಿಕವಾಗಿ ನಿಂದಿಸುವಂತಹ ಹಂತಕ್ಕೆ ಬಿಜೆಪಿ ನಾಯಕರು ಹೋಗಿರುವುದು ಸರಿಯಲ್ಲ. ಹೀಗಾಗಿ ಬಿಜೆಪಿ ನಾಯಕರಿಗೆ ಕನ್ನಡಿಗರು ಸೂಕ್ತ ಪಾಠ ಕಲಿಸಲಿದ್ದಾರೆ.
-ಕೃಷ್ಣಬೈರೇಗೌಡ ಕೃಷಿ, ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News