ಜಿಎಸ್‌ಟಿಯಿಂದ ಆರ್ಥಿಕ ಅಸಮಾನತೆ: ಶಿವಸುಂದರ್

Update: 2017-11-19 07:01 GMT

ಬೆಂಗಳೂರು, ನ. 18: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಹೇಳಿದ್ದಾರೆ.

ಬಯಲು ಬಳಗವು ಸರಕಾರಿ ಕಲಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 'ಜಿಎಸ್‌ಟಿ ಕುರಿತ ಉಪನ್ಯಾಸ'ದಲ್ಲಿ ಅವರು ಮಾತನಾಡಿದರು.

ತೆರಿಗೆದಾರರ ಸಂಖ್ಯೆಯನ್ನು ಹೆಚ್ಚಿಸಲು ಜಿಎಸ್‌ಟಿ ಪರಿಚಯಿಸಲಾಗಿದೆ. ಈ ಹಿಂದೆ 5 ಕೋಟಿ ವರೆಗೂ ವಹಿವಾಟು ನಡೆಸುವ ಉದ್ಯಮದಾರರು ಎಕ್ಸೈಸ್ ತೆರಿಗೆಯಿಂದ ಹೊರಗಿದ್ದರು. ಈಗ 20 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವವರು ಈ ತೆರಿಗೆ ಕಟ್ಟಬೇಕಾಗಿದೆ ಎಂದರು.

ದೇಶದ ಶೇ.90ರಷ್ಟು ಕೈಗಾರಿಕೆಗಳು ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಲ್ಲಿ ಬರುತ್ತವೆ. ಶೇ.42ರಷ್ಟು ಉದ್ಯೋಗಗಳು ಇವುಗಳಲ್ಲಿ ಸೃಷ್ಟಿಯಾಗುತ್ತವೆ. ಜಿಎಸ್‌ಟಿಯಿಂದಾಗಿ ಈ ಉದ್ಯಮಗಳು ನೆಲಕಚ್ಚಿವೆ. ಇದರಿಂದ ಕೈಗಾರಿಕೆಗಳ ಮಾಲಕರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಜಿಎಸ್‌ಟಿಯಿಂದಾಗಿ ಕೃಷಿಯಂತ್ರೋಪಕರಣಗಳ ಬಿಡಿಭಾಗಗಳ ತೆರಿಗೆ ಹೆಚ್ಚಳವಾಗಿದೆ. ಇದರಿಂದ ರೈತರ ಮೇಲೆ ಹೊರೆ ಬೀಳುತ್ತಿದೆ. ಸಣ್ಣ ವ್ಯಾಪಾರಿಗಳು ಜಿಎಸ್‌ಜಿ ತೆರಿಗೆ ಪಾವತಿಯ ವ್ಯವಸ್ಥೆ ಅಳವಡಿಸಿಕೊಳ್ಳಲು 45 ಸಾವಿರ ರೂ. ವ್ಯಯಿಸಬೇಕಾಗಿದೆ. ಅದಕ್ಕೆ ಬಹುರಾಷ್ಟ್ರೀಯ ಕಂಪೆನಿಗಳು ರೂಪಿಸಿರುವ ಸಾಫ್ಟ್‌ವೇರ್‌ಗಳನ್ನೆ ಬಳಸಬೇಕಿದೆ ಎಂದರು ತಿಳಿಸಿದರು.

ಜನಸಾಮಾನ್ಯರು ಸರಾಸರಿ ಶೇ.18 ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಆದರೆ ಕಾರ್ಪೊರೇಟ್ ಕಂಪೆನಿಗಳ ಮಾಲಕರು ಕಾರ್ಪೊರೇಟ್ ತೆರಿಗೆಯನ್ನು ಶೇ.15ಕ್ಕೆ ಇಳಿಸಲು ಒತ್ತಾಯಿಸುತ್ತಾರೆ ಎಂದರು.

1947ರಲ್ಲಿ ಬಡವನ ಬಳಿ 1ರೂ. ಇದ್ದರೆ, ಶ್ರೀಮಂತನಲ್ಲಿ 50 ರೂ. ಇರುತ್ತಿತ್ತು. ಈ ಅನುಪಾತ ಈಗ 1:3,800 ಕ್ಕೆ ತಲುಪಿದೆ. ಇಂದಿಗೂ ದೇಶದ ಶೇ. 75ರಷ್ಟು ಕುಟುಂಬಗಳ ಮಾಸಿಕ ವರಮಾನ 5 ಸಾವಿರ ರೂ. ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದಕ್ಕೆ ಜಾಗತೀಕರಣ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಒಪ್ಪಂದಗಳೆ ಕಾರಣ ಎಂದು ತಿಳಿಸಿದರು.

ಜಿಎಸ್‌ಟಿ ಮಂಡಳಿಯಲ್ಲಿ ಕೇಂದ್ರ ಸರಕಾರದ ಇಬ್ಬರು ಪ್ರತಿನಿಧಿಗಳಿದ್ದಾರೆ. ಅವರಿಗೆ ಮತದಾನದ ಶೇ.33 ರಷ್ಟು ವೌಲ್ಯ ನೀಡಲಾಗಿದೆ. ಜಿಎಸ್‌ಟಿಯಲ್ಲಿನ ಬದಲಾವಣೆಗೆ ಶೇ.40 ರಷ್ಟು ಬಹುಮತ ಬೇಕು. 17 ರಾಜ್ಯಗಳಲ್ಲಿ ಎನ್‌ಡಿಎ ನೇತೃತ್ವದ ಸರಕಾರಗಳು ಇವೆ. ಹಾಗಾಗಿ ತೆರಿಗೆ ಸುಧಾರಣೆಯಲ್ಲಿ ಕೇಂದ್ರ ಸರಕಾರವೆ ಮೇಲುಗೈ ಸಾಧಿಸುತ್ತಿದೆ. ಹೊಸ ತೆರಿಗೆ ವ್ಯವಸ್ಥೆಯಿಂದ ದೇಶದ ಶತಕೋಟಿಪತಿಗಳ ಸಂಖ್ಯೆ ಹೆಚ್ಚಲಿದೆ ಹೊರತು, ಜನಸಾಮಾನ್ಯನ ಜೀವನ ಸುಧಾರಿಸಲಾರದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News