ಜಿಎಸ್‌ಟಿ ಲಾಭಾಂಶ ಗ್ರಾಹಕರಿಗೆ ವರ್ಗಾಯಿಸದಿದ್ದರೆ ಕ್ರಮ: ಸುಶೀಲ್ ಕುಮಾರ್ ಮೋದಿ

Update: 2017-11-18 17:16 GMT

ಬೆಂಗಳೂರು, ನ.18: ಸರಕು ಮತ್ತು ಸೇವಾ ತೆರಿಗೆ ಪದ್ಧತಿ(ಜಿಎಸ್‌ಟಿ)ಯಿಂದ ಬರುವ ಲಾಭವನ್ನು ಉತ್ಪಾದಕರು ಮತ್ತು ಡೀಲರ್‌ಗಳು ಗ್ರಾಹಕರಿಗೆ ವರ್ಗಾಯಿಸದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಎಸ್‌ಟಿ ರಾಜ್ಯ ಹಣಕಾಸು ಸಚಿವ ಸಮಿತಿ ಅಧ್ಯಕ್ಷ ಸುಶೀಲ್ ಕುಮಾರ್ ಮೋದಿ ಇಂದಿಲ್ಲಿ ಹೇಳಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆ ಹಾದಿಯಲ್ಲಿದೆ. ಹಂತ-ಹಂತವಾಗಿ ಜನತೆ ಜಿಎಸ್‌ಟಿ ವ್ಯವಸ್ಥೆಗೆ ಹೊಂದಿಕೊಳ್ಳಲು ಆರಂಭಿಸಿದ್ದು, ಜಿಎಸ್‌ಟಿ ವ್ಯವಸ್ಥೆ ದೇಶಾದ್ಯಂತ ಸುಧಾರಣೆಯತ್ತ ಸಾಗುತ್ತಿದೆ ಎಂದರು.

ಕಳೆದ ಸೆಪ್ಟೆಂಬರ್ ಅಂತ್ಯಕ್ಕೆ ಜಿಎಸ್‌ಟಿಯಿಂದ ದೇಶದಲ್ಲಿ 93,141 ಸಾವಿರ ಕೋಟಿ ಹಾಗೂ ಅಕ್ಟೋಬರ್‌ನಲ್ಲಿ 95,133 ಸಾವಿರ ಕೋಟಿ ರೂಪಾಯಿ ಬಂದಿದೆ. ದೇಶದ ಆರ್ಥಿಕ ಕುಸಿತ ಪ್ರಮಾಣ ಶೇ.28.4ರಿಂದ 17.6ಕ್ಕೆ ಇಳಿದಿದೆ. ರೂಪಾಯಿ ಲೆಕ್ಕಾಚಾರದಂತೆ ಕಳೆದ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೂ 12,208 ಸಾವಿರ ಕೋಟಿಯಿಂದ 7,560 ಕೋಟಿ ರೂ. ಇಳಿದಿರುವುದು ಜಿಎಸ್‌ಟಿ ಸುಧಾರಣೆ ಹಾದಿಯಾಗಿದೆ ಎಂದು ವಿವರಿಸಿದರು.

ದೇಶದ 17 ರಾಜ್ಯಗಳಲ್ಲಿ ಗರಿಷ್ಠ ತೆರಿಗೆ ಆದಾಯ ಕೊರತೆ ಹೆಚ್ಚಾಗಿದ್ದರೆ, ಉಳಿದ 9 ರಾಜ್ಯಗಳಲ್ಲಿ ತೆರಿಗೆ ಆದಾಯ ಕೊರತೆ ಕಡಿಮೆಯಾಗಿದೆ. ದೇಶದ ಎಲ್ಲಾ ರಾಜ್ಯಗಳ ಜಿಎಸ್‌ಟಿ ಸರಾಸರಿ ತೆರಿಗೆ ಕೊರತೆ ಆದಾಯ ಇಳಿಕೆಯಾಗಿದೆ. 2016-17ನೆ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯಗಳ ಎಲ್ಲಾ ತೆರಿಗೆಗಳಿಂದ ಒಟ್ಟು 8.8 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. 2017-18ನೆ ಸಾಲಿನಲ್ಲಿ ಜಿಎಸ್‌ಟಿಯಿಂದ ಶೇ.14ರಷ್ಟು ಪ್ರಗತಿ ನಿರೀಕ್ಷೆ ಮಾಡಿದರೂ 11.5 ಲಕ್ಷ ಕೋಟಿ ರೂ. ತೆರಿಗೆ ಬರಬೇಕಿದೆ. ಈ ನಿಟ್ಟಿನಲ್ಲಿ ತಿಂಗಳಿಗೆ 96 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಬೇಕಿದ್ದು, ಪ್ರಸ್ತುತ 92 ಸಾವಿರ ಕೊಟ ತೆರಿಗೆ ಸಂಗ್ರಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ತಂತ್ರಾಂಶದ ಸಮಸ್ಯೆ ಬಗೆಹರಿಯಲಿದೆ: ಇನ್‌ಫೋಸಿಸ್ ಸಂಸ್ಥೆಯು ಜಿಎಸ್‌ಟಿ ನೆಟ್‌ವರ್ಕ್ ಸ್‌ಟಾವೇರ್ ಸಿದ್ಧಪಡಿಸಿದೆ. ಆರಂಭದಲ್ಲಿ ತಂತ್ರಾಂಶದಲ್ಲಿ ತಾಂತ್ರಿಕ ಅಡಚಣೆ ಕಂಡು ಬಂದಿತ್ತು. ಪ್ರಸ್ತುತ ಎಲ್ಲಾ ನ್ಯೂನತೆ ಸರಿಪಡಿಸಿಕೊಂಡಿದೆ. ಜಿಎಸ್‌ಟಿ ನೆಟ್‌ವರ್ಕ್ ಸರಕು ಸೇವಾ ತೆರಿಗೆಯ ಬೆನ್ನಲುಬು ಇದ್ದಂತೆ. ನೆಟ್‌ವರ್ಕ್ ಸುಧಾರಿಸುವ ನಿಟ್ಟಿನಲ್ಲಿ ನುರಿತ ಮತ್ತು ಅನುಭವಿ ಇಂಜಿನಿಯರ್‌ಗಳ ನಿಯೋಜಿಸುವಂತೆ ಇನ್‌ಫೋಸಿಸ್‌ಗೆ ಸೂಚಿಸಲಾಗಿದ್ದು ಈಗಾಗಲೇ 100 ಇಂಜಿನಿಯರ್ ನೇಮಿಸಲಾಗಿದೆ ಎಂದು ಅವರು ಹೇಳಿದರು.

 
ಸಮಿತಿಗೆ ದೂರು ನೀಡಿ
ರಾಜ್ಯದಲ್ಲಿ 34 ವಿವಿಧ ರೀತಿಯ ತೆರಿಗೆ ಪದ್ಧತಿಯನ್ನು ಜಿಎಸ್‌ಟಿ ಮೂಲಕ ಒಂದೇ ಪದ್ಧತಿ ಅಡಿ ತರಲಾಗಿದೆ. ಜಿಎಸ್‌ಟಿಗೆ ಜನರು ಕಾಲಕ್ರಮೇಣ ಹೊಂದುಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ದೂರುಗಳ ಸಂಖ್ಯೆ ಕಡಿಮೆಯಾಗಿದೆ. ಜಿಎಸ್‌ಟಿ ದರ ಇಳಿಕೆಯ ಲಾಭ ಗ್ರಾಹಕರಿಗೆ ತಲುಪಿಸದಿದ್ದರೆ ಸಾರ್ವಜನಿಕರು ರಾಜ್ಯದ ಜಿಎಸ್‌ಟಿ ಪರಿಶೀಲನಾ ಸಮಿತಿಗೆ ದೂರು ನೀಡಬೇಕು.

-ಸುಶೀಲ್ ಕುಮಾರ್ ಮೋದಿ, ಅಧ್ಯಕ್ಷ, ಜಿಎಸ್‌ಟಿ ರಾಜ್ಯ ಹಣಕಾಸು ಸಚಿವ ಸಮಿತಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News