ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟವೇ ಇಂದಿರಾ ಗಾಂಧಿಗೆ ಸಲ್ಲಿಸುವ ಗೌರವ: ಸಿದ್ದರಾಮಯ್ಯ

Update: 2017-11-19 07:30 GMT

ಬೆಂಗಳೂರು, ನ.19: ದೇಶದ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟ ಮಾಡುವುದೇ ದೇಶದ ಏಕತೆ, ಸಮಗ್ರತೆ ಹಾಗೂ ಭಾವೈಕ್ಯಕ್ಕಾಗಿ ಹೋರಾಟ ಮಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಇಂದಿರಾ ಗಾಂಧಿಯವರಿಗೆ ಅರ್ಪಿಸುವ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಇಂದಿರಾ ಗಾಂಧಿಯವರ ನೂರನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ನೋಟು ಅಮಾನ್ಯ ಮಾಡಿ ಬಡವರ ಪಾಲಿಗೆ ಬ್ಯಾಂಕ್ ಬಾಗಿಲುಗಳನ್ನು ಮುಚ್ಚಿದರು. ಆದರೆ  ಇಂದಿರಾ ಗಾಂಧಿ  ದೇಶದಲ್ಲಿ ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಿ ಬಡವರಿಗೆ  ಬಾಗಿಲು ತೆರೆದವರಾಗಿದ್ದರೆ. ದೇಶಕ್ಕಾಗಿ ಪ್ರಾಣತೆತ್ತ ಇಂದಿರಾ ಗಾಂಧಿಯವರು ಮಹಾನ್ ನಾಯಕಿ. ಅವರ ಹೆಸರಿನಲ್ಲಿ ಅವರಿಗೆ ಪ್ರಿಯವಾದ ಬಡವರ ಹಸಿವು ನೀಗಿಸುವ ಹಸಿವು ಮುಕ್ತ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 500 ಇಂದಿರಾ ಕ್ಯಾಂಟೀನ್ ಗಳನ್ನು ಜನವರಿ ಒಂದರಿಂದ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಸರ್ವರಿಗೂ ಆರೋಗ್ಯ ಭಾಗ್ಯ ನೀಡಲಿದೆ. ಇದಕ್ಕಾಗಿ ಸಾರ್ವತ್ರಿಕ ಆರೋಗ್ಯ ಯೋಜನೆ ರೂಪುಗೊಂಡಿದೆ ಎಂದವರು ವಿವರಿಸಿದರು.

ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿ ಕೋಮು ಗಲಭೆಗಳ ಸೃಷ್ಟಿ ಸೇರಿದಂತೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್ ಕಾರ್ಯಕರ್ತರು ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಬಿಜೆಪಿ ಸುಳ್ಳು ಹೇಳಿ ತಿರುಗಿದರೆ ನಾವು ಜನರಿಗೆ ಸತ್ಯದ ಅರಿವು ಮೂಡಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅನಂತಕುಮಾರ್ ಹೆಗಡೆ, ಈಶ್ವರಪ್ಪ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಇವರಿಗೆ ರಾಜಕೀಯದಲ್ಲಿ ಇರಲು ಅರ್ಹತೆಯಿಲ್ಲ. ಬಿಜೆಪಿಯವರು ಮನುಷ್ಯತ್ವ ಇಲ್ಲದವರು. ಬಿಜೆಪಿಯದ್ದು ಢೋಂಗೀತನ. ಕೋಮು ಸಾಮರಸ್ಯ ನಿರ್ಮಾಣ ಮಾಡೋದು ನಮ್ಮ ಕೆಲಸ. ಸಮಾಜ ಒಡೆಯುವವರು ಬಿಜೆಪಿಯವರು ಎಂದು ಮುಖ್ಯಮಂತ್ರಿ ಯವರು ಹೇಳಿದರು.

 ಗರೀಬಿ ಹಠಾವೋ ಘೋಷಣೆಯನ್ನು ದೇಶಕ್ಕೆ ಮೊದಲು ಕೊಟ್ಟ ನಾಯಕಿ. ಸಮಸಮಾಜದ ನಿರ್ಮಾಣದ ಕನಸು, ಅಲ್ಪಸಂಖ್ಯಾತರಿಗೆ ೧೫ ಅಂಶದ ಕಾರ್ಯಕ್ರಮ ನೀಡಿದವರು ಅವರು. ನಮ್ಮ ಸರ್ಕಾರ ಕೂಡ ಇಂದಿರಾ ಗಾಂಧಿಯವರ ಗರೀಬಿ ಹಠಾವೋ ಘೋಷಣೆಯಿಂದ ಸ್ಫೂರ್ತಿ ಪಡೆದಿದೆ. ಇದು ಹಸಿವುಮುಕ್ತ ಕರ್ನಾಟಕ ಪರಿಕಲ್ಪನೆಗೆ ಸ್ಫೂರ್ತಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News