ಮಹಾಪ್ರಾಣಗಳು ಇಲ್ಲವಾದರೆ ಕನ್ನಡ ಭಾಷೆಗೆ ಅನುಕೂಲ: ಎಸ್.ದಿವಾಕರ್

Update: 2017-11-19 17:16 GMT

ಬೆಂಗಳೂರು, ನ.18: ಕನ್ನಡ ವ್ಯಾಕರಣದಲ್ಲಿರುವ ಮಹಾಪ್ರಾಣಗಳು ಇಲ್ಲವಾದರೆ ಕನ್ನಡ ಭಾಷೆಯ ಬೆಳವಣಿಗೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹಿರಿಯ ಕತೆಗಾರ ಎಸ್.ದಿವಾಕರ್ ಅಭಿಪ್ರಾಯಿಸಿದ್ದಾರೆ.

ರವಿವಾರ ನವಕರ್ನಾಟಕ ಪ್ರಕಾಶನ ಹಾಗೂ ಇಜ್ಞಾನ ಟ್ರಸ್ಟ್ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಕನ್ನಡ: ನಿನ್ನೆ, ಇಂದು ಮತ್ತು ನಾಳೆ’ ವಿಚಾರ ಸಂಕಿರಣ ಹಾಗೂ ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆ’ ಪುಸ್ತಕಗಳ ಅನಾವರಣಗೊಳಿಸಿ ಅವರು ಮಾತನಾಡಿದರು.

ಈಗಲೂ ಹಳ್ಳಿಯ ಜನತೆ ಮಹಾಪ್ರಾಣಗಳನ್ನು ಬಳಸುವುದಿಲ್ಲ. ಹೀಗಾಗಿ ನಗರ ವಾಸಿಗಳು ಹಳ್ಳಿ ಜನರ ಭಾಷೆಯನ್ನು ಹಾಸ್ಯವಾಗಿ ತೆಗೆದುಕೊಂಡು ನಗಾಡುತ್ತಾರೆ. ಇದರಿಂದ ಹಳ್ಳಿಜನತೆ ತಾವಾಡುವ ಭಾಷೆಯ ಬಗೆಗೆ ಕೀಳರಿಮೆ ತಾಳುವಂತಾಗಿದೆ. ಆದರೆ, ಹಳ್ಳಿ ಜನರಿಂದಾಗಿಯೇ ಕನ್ನಡ ಭಾಷೆ ಇನ್ನೂ ಉಳಿದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕನ್ನಡ ಭಾಷೆ ಮತ್ತಷ್ಟು ಜೀವಂತಿಕೆ ಪಡೆಯಬೇಕಾದರೆ ಮಹಾಪ್ರಾಣಗಳು ಇಲ್ಲವಾಗಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಭಾಷಾ ತಜ್ಞ ಡಿ.ಎನ್.ಶಂಕರಭಟ್ಟರು ಕನ್ನಡ ಭಾಷೆಗೆ ಮಹಾಪ್ರಾಣಗಳು ಅಗತ್ಯವಿಲ್ಲ ಎಂಬ ಪ್ರಬಲವಾದ ವಾದವನ್ನು ಮಂಡಿಸುತ್ತಿದ್ದಾರೆ. ಹಾಗೂ ತಮ್ಮ ಬರವಣಿಗೆಯನ್ನು ಮಹಾಪ್ರಾಣಗಳಿಲ್ಲದೆ ಬರೆಯುವ ಮೂಲಕ ಈಗಾಗಲೆ ತಮ್ಮ ವಾದಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಇವತ್ತಿನ ಆಧುನಿಕ ಜಗತ್ತಿನಲ್ಲಿ ಈ ರೀತಿಯ ಭಾಷಾ ಪ್ರಯೋಗಗಳು ತೀರ ಅಗತ್ಯವಿದೆ ಎಂದು ಅವರು ಹೇಳಿದರು.

 ಕ್ಷೀಣಿಸುತ್ತಿರುವ ಭಾಷಾ ಸಂಪತ್ತು: ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡದ ಭಾಷಾ ಸಂಪತ್ತು ಅನನ್ಯವಾದದು. ಇದು ಜಾನಪದರಲ್ಲಿ, ಸಾಹಿತ್ಯ ಕೃತಿಗಳಲ್ಲಿ ಹೇರಳವಾಗಿ ಬಳಕೆಯಾಗುತ್ತಿತ್ತು. ಆದರೆ, ಇತ್ತೀಚಿನ ಆಧುನಿಕ ಯುಗದಲ್ಲಿ ಇದರ ಬಳಕೆ ತೀರ ಕಡಿಮೆಯಾಗುತ್ತಿದೆ ಎಂದು ಅವರು ವಿಷಾದಿಸಿದರು.

ನಮ್ಮ ದಿನ ಪತ್ರಿಕೆಯಲ್ಲಿ 900 ಕನ್ನಡ ಪದಗಳು ಬಳಕೆಯಾದರೆ, ರೇಡಿಯೋದಲ್ಲಿ 600, ಟಿವಿಯಲ್ಲಿ 350 ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ 110 ಕನ್ನಡ ಪದಗಳು ಬಳಕೆಯಾಗುತ್ತಿವೆ. ಭಾಷಾ ಸಂಪತ್ತು ಕಡಿವೆುಯಾದರೆ ಅಷ್ಟರ ಮಟ್ಟಿಗೆ ನಮ್ಮ ಚಿಂತನೆಗಳು, ಅನುಭವಗಳು ಕಿರಿದಾಗಲಿದೆ. ಹೀಗಾಗಿ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕತೆಗಾರ ವಸುಧೇಂದ್ರ ಮಾತನಾಡಿ, ಬದುಕಿಗೆ ಭಾಷೆ ಬಹುಮುಖ್ಯ. ಪ್ರಸ್ತುತ ದಿನಗಳಲ್ಲಿ ಭಾರತೀಯ ಸಮಾಜ ಭಾಷೆಯ ಮಹತ್ವವನ್ನು ಮರೆಯುತ್ತಿದೆ. ಭಾಷೆ ಮೇಲೆ ಪ್ರೀತಿಯನ್ನು ಬೆಳೆಸುವ ಕೆಲಸಗಳು ನಡೆಯುತ್ತಿಲ್ಲ. ಶಿಕ್ಷಣ ಕೇವಲ ಉದ್ಯೋಗಕ್ಕೆ ಸೀಮಿತಪಟ್ಟಿದ್ದು ಎಂಬ ಭಾವನೆಯೇ ಭಾಷೆಗಳ ನಶಿಸುವಿಕೆಗೆ ಕಾರಣವಾಗಿದೆ ಎಂದು ವಿಷಾದಿಸಿದರು. ಭಾಷೆಗಿಂತ ವಿಜ್ಞಾನ ಹಾಗೂ ತಂತ್ರಜ್ಞಾನವೇ ಮುಖ್ಯ ಎಂಬ ಭಾವನೆ ಯುವ ಜನತೆಯಲ್ಲಿ ಮೂಡುತ್ತಿದೆ. ಆದರೆ, ತಂತ್ರಜ್ಞಾನ ಬದುಕನ್ನು ಕಟ್ಟಿಕೊಡುವುದಿಲ್ಲ ಎಂಬ ಅರಿವನ್ನು ತಿಳಿಸುವ ಅಗತ್ಯವಿದೆ. ನಮ್ಮ ಬದುಕುಗಳನ್ನು ಜನಪರವಾಗಿ, ಸೃಜನಾತ್ಮಕವಾಗಿ ಕಟ್ಟಿಕೊಳ್ಳಲು ಮಾತೃಭಾಷೆ ಅತ್ಯಗತ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯದ ಪುಸ್ತಕಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸಬೇಕು, ಅನುವಾದಿಸಬೇಕು. ನಮ್ಮಲ್ಲಿ ಅನುವಾದಕರಿಲ್ಲದೆ ಇತರೆ ಭಾಷಿಕರಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ತಲುಪಿಸುವಲ್ಲಿ ಸೋತಿದ್ದೇವೆ. ಬೇರೆ ಭಾಷೆಗಳ ಸಾಹಿತ್ಯದಂತೆ ಕನ್ನಡ ಸಾಹಿತ್ಯದ ಕಂಪು ಪ್ರಪಂಚದ ಮೂಲೆ ಮೂಲೆಗೆ ತಲುಪಬೇಕು. ಅನುವಾದದಿಂದ ಭಾಷೆಯ ವ್ಯಾಪ್ತಿ ಮೀರಲು ಸಾಧ್ಯ. ಹಾಗೆಯೇ ಇಂಗ್ಲಿಷ್‌ನ್ನು ದ್ವೇಷಿಸುವುದಕ್ಕಿಂತಲೂ ಅದರಿಂದಾಗುವ ಉಪಯೋಗಗಳ ಬಗ್ಗೆ ಚಿಂತಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲಿಕೆಗೆ ಕೊಡುಗೆ ಯೋಜನೆಯಡಿ ಶಾಲೆಗಳಿಗೆ ‘ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆ’ ಪುಸ್ತಕಗಳನ್ನು ವಿತರಿಸಲಾಯಿತು. ಈ ವೇಳೆ ಹಿರಿಯ ಭಾಷಾ ತಜ್ಞ ಟಿ.ವಿ.ವೆಂಕಟಾಚಲ ಶಾಸ್ತ್ರೀ, ಜೆ.ಎಂ.ಕೃಷ್ಣಮೂರ್ತಿ, ಮಂಜುನಾಥ ಕೊಳ್ಳೇಗಾಲ ಹಾಗೂ ನವ ಕರ್ನಾಟಕದ ಎ.ರಮೇಶ ಉಡುಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News