ಸೊಹ್ರಾಬುದ್ದೀನ್ ಎನ್ ಕೌಂಟರ್ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ಸಾವಿನ ಸುತ್ತ ಸಂಶಯದ ಹುತ್ತ

Update: 2017-11-20 10:03 GMT

ಹೊಸದಿಲ್ಲಿ, ನ.20: ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಬ್ರಿಜ್ ಗೋಪಾಲ್ ಹರ್ ಕಿಷನ್ ಲೋಯಾ ಅವರ ಸಾವಿನ ಬಗ್ಗೆ ಸಂಶಯವಿರುವುದಾಗಿ ಕುಟುಂಬದ ಸದಸ್ಯರು ನೀಡಿರುವ ಹೇಳಿಕೆ ಈ ಪ್ರಕರಣ ಮತ್ತೊಂದು ಹೊಸ ತಿರುವನ್ನು ಪಡೆದುಕೊಳ್ಳುವಂತೆ ಮಾಡಿದೆ.

ನ್ಯಾಯಾಧೀಶರ ಸಾವಿನ ಬಗ್ಗೆ ಕೊನೆಗೂ ಕುಟುಂಬಸ್ಥರು ಮೌನ ಮುರಿದಿದ್ದು. ಈ ಪ್ರಕರಣದಲ್ಲಿ ಹಲವು ಅನುಮಾನಾಸ್ಪದ ವಿಚಾರಗಳಿವೆ ಎಂದಿದ್ದಾರೆ.

ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಬ್ರಿಜ್ ಗೋಪಾಲ್ 2014ರಲ್ಲಿ ಸಾವನ್ನಪ್ಪಿದ್ದರು. ವೈದ್ಯಕೀಯ ಸೇರಿದಂತೆ ಎಲ್ಲಾ ವರದಿಗಳು ಬ್ರಿಜ್ ಗೋಪಾಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದಿತ್ತು. ಆದರೆ ನ್ಯಾಯಾಧೀಶರ ಸಾವು ಹಾಗು ಆನಂತರದ ಬೆಳವಣಿಗೆಗಳಲ್ಲಿ ಹಲವು ಅನುಮಾನಗಳಿವೆ ಎಂದು ಲೋಯಾ ಕುಟುಂಬಸ್ಥರು caravanmagazine.in ಗೆ ತಿಳಿಸಿದ್ದಾರೆ. ಸಾವಿನ ಸುದ್ದಿ ತಿಳಿದ ನಂತರದ ಘಟನೆಗಳು, ಮೃತದೇಹ ಕಂಡುಬಂದ ಸ್ಥಿತಿ ಹಾಗು ಆನಂತರ ಮೃತದೇಹವನ್ನು ಸಾಗಿಸಿದ್ದು ಸೇರಿದಂತೆ ಹಲವು ವಿಚಾರಗಳು ಅನುಮಾನಾಸ್ಪದವಾಗಿ ತೋರುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನ್ಯಾಯಾಧೀಶರೊಬ್ಬರ ವರ್ಗಾವಣೆಯ ನಂತರ ಲೋಯಾ ಮುಂಬೈಯ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದು. ಅವರು ಸಾವನ್ನಪ್ಪಿದ ಸಂದರ್ಭ ಲೋಯಾ ವಿಚಾರಣೆ ನಡೆಸುತ್ತಿದ್ದ ಏಕೈಕ ಪ್ರಕರಣ ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣವಾಗಿತ್ತು. ಈ ಪ್ರಕರಣದಲ್ಲಿ ಆ ಸಂದರ್ಭ ಗುಜರಾತ್ ಗೃಹಸಚಿವರಾಗಿದ್ದ ಅಮಿತ್ ಶಾ ಪ್ರಧಾನ ಆರೋಪಿಯಾಗಿದ್ದರು. ಲೋಯಾ ಮೃತಪಟ್ಟಾಗ ಶಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. 2015ರಲ್ಲಿ ಅಮಿತ್ ಶಾ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದರು.

ತನ್ನ ಸಹೋದ್ಯೋಗಿಯ ಪುತ್ರಿಯ ಮದುವೆ ಸಮಾರಂಭಕ್ಕೆ ತೆರಳಿದ್ದ ಸಂದರ್ಭ ಲೋಯಾ ಸಾವನ್ನಪ್ಪಿದ್ದರು. ಆದರೆ ಲೋಯಾ ಸಾವನ್ನಪ್ಪಿರುವ ವಿಷಯ ತಿಳಿಸಿದ್ದು ಹಾಗು ಮೃತದೇಹವನ್ನು ಸ್ಥಳೀಯ ಗ್ರಾಮವೊಂದಕ್ಕೆ ಸಾಗಿಸಿದ್ದು ಆರೆಸ್ಸೆಸ್ ಕಾರ್ಯಕರ್ತ ಈಶ್ವರ್ ಬಹೇಟಿ ಎಂಬಾತ. "ಲೋಯಾ ಮೃತಪಟ್ಟಿರುವ ವಿಚಾರ ಈತನಿಗೆ ತಿಳಿದದ್ದಾದರೂ ಹೇಗೆ? ಹಾಗು ಲೋಯಾ ಮೃತಪಟ್ಟ ನಂತರ ಎಲ್ಲಾ ಕೆಲಸಗಳಲ್ಲಿ ಆತ ಪಾಲ್ಗೊಂಡದ್ದು ಯಾಕೆ" ಎಂದು ಲೋಯಾ ಕುಟುಂಬಸ್ಥರು ಪ್ರಶ್ನಿಸುತ್ತಿದ್ದಾರೆ ಎಂದು caravanmagazine.in ವರದಿ ಮಾಡಿದೆ.

ಮತ್ತೊಂದು ವಿಚಾರವೆಂದರೆ ಸಿಬಿಐ ನ್ಯಾಯಾಧೀಶ ಲೋಯಾರ ಮೃತದೇಹದ ಜೊತೆಗಿದ್ದದ್ದು ಆ್ಯಂಬುಲೆನ್ಸ್ ಚಾಲಕ ಮಾತ್ರ.  ಯಾರೊಬ್ಬರೂ ಅವರ ಮೃತದೇಹದ ಜೊತೆ ಇರಲಿಲ್ಲ. ಸಿಬಿಐ ನ್ಯಾಯಾಧೀಶರಂತಹ ಉನ್ನತ ಹುದ್ದೆಯಲ್ಲಿದ್ದರೂ ಯಾವೊಬ್ಬ ಸಹೋದ್ಯೋಗಿಯೂ, ಸಂಬಂಧಪಟ್ಟವರೂ ಅವರ ಜೊತೆಗಿರಲಿಲ್ಲ!. 

ಲೋಯಾರ ಶರ್ಟ್ ನ ಕಾಲರ್ ನಲ್ಲಿ ರಕ್ತ ಇತ್ತು. ಬೆಲ್ಟ್ ತಿರುವಿ ಹಾಕಿದ ಸ್ಥಿತಿಯಲ್ಲಿತ್ತು ಹಾಗು ಪ್ಯಾಂಟ್ ನ ಕ್ಲಿಪ್ ತುಂಡಾಗಿತ್ತು ಎಂದು ಅವರ ಸಹೋದರಿ ಅನುರಾಧಾ ಬಿಯಾನಿ ಹೇಳುತ್ತಾರೆ. ಆದರೆ ಬಟ್ಟೆಗಳು ಒಣಗಿತ್ತು ಹಾಗು ಲೋಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಗಳು ಹೇಳಿತ್ತು.

ಆಘಾತಕಾರಿ ಅಂಶವೆಂದರೆ ಮರಣೋತ್ತರ ಪರೀಕ್ಷೆ ವರದಿಗೆ ಲೋಯಾರ ತಂದೆಯ ಸೋದರ ಸಂಬಂಧಿ ಎಂಬ ವ್ಯಕ್ತಿಯೊಬ್ಬರು ಸಹಿ ಹಾಕಿದ್ದರು. ಆದರೆ ಅಂತಹ ಸಂಬಂಧಿಕರೇ ಇಲ್ಲ. ಸಹಿ ಹಾಕಿದ್ದು ಯಾರೆಂದು ಕೂಡ ನಮಗೆ ತಿಳಿದಿಲ್ಲ ಎಂದು ಲೋಯಾರ ತಂದೆ ಹೇಳುತ್ತಾರೆ. ಮೃತಪಟ್ಟ ಸಮಯ ಕೂಡ ಇತರ ದಾಖಲೆಗಳೊಂದಿಗೆ ತಾಳೆಯಾಗುತ್ತಿಲ್ಲ. ಕೆಲದಿನಗಳ ನಂತರವಷ್ಟೇ ಲೋಯಾರ ಫೋನನ್ನು ಹಿಂದಿರುಗಿಸಲಾಯಿತು. ಆದರೆ ಅದನ್ನು ಹಿಂದಿರುಗಿಸಿದ್ದು ಪೊಲೀಸರಲ್ಲ. ಬದಲಾಗಿ, ಆರೆಸ್ಸೆಸ್ ಕಾರ್ಯಕರ್ತ ಬಹೇಟಿ ಎಂದು ಸಂಬಂಧಿಕರು ಹೇಳಿರುವುದಾಗಿ caravanmagazine.in ವರದಿ ಮಾಡಿದೆ.

ಲೋಯಾ ಸಾವಿನ ಪ್ರಕರಣದ ತನಿಖೆ ನಡೆಸಲು ವಿಚಾರಣಾ ಆಯೋಗವನ್ನು ರಚಿಸಲು ಲೋಯಾ ಕುಟುಂಬಸ್ಥರು ಕೋರಿದ್ದಾರೆ. ಆದರೆ ಈವರೆಗೂ ಯಾವುದೇ ಬೆಳವಣಿಗೆಗಳಾಗಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News