ಕೆಪಿಎಂಇ ಕಾಯ್ದೆ ಯಥಾವತ್ ಜಾರಿಗೊಳಿಸಲು ಆಗ್ರಹ

Update: 2017-11-20 13:41 GMT

ಬೆಂಗಳೂರು, ನ.20: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ಧುಪಡಿ ಕಾಯ್ದೆ (ಕೆಪಿಎಂಇ)ಯಲ್ಲಿ ಜನಪರ ಅಂಶಗಳನ್ನು ಸಡಿಲಗೊಳಿಸದೆ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಕರ್ನಾಟಕ ಜನಾರೋಗ್ಯ ಚಳವಳಿ ಹಾಗೂ ಇನ್ನಿತರೆ ಸಂಘಟನೆಗಳು ಆಗ್ರಹಿಸಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಾರೋಗ್ಯ ಚಳವಳಿಯ ಮುಖಂಡ ಕ್ಷಿತಿಜ್, ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳ ಗರಿಷ್ಠ ಬೆಲೆ ನಿಗದಿ ಮಾಡುವ ಅಂಶ, ತಪ್ಪು ಎಸಗಿದರೆ ಜೈಲು ಶಿಕ್ಷೆ ಸೇರಿದಂತೆ ಹಲವು ಅಂಶಗಳನ್ನು ಕಾಯ್ದೆಯಿಂದ ಕೈ ಬಿಟ್ಟಿರುವುದು ಸರಿಯಲ್ಲ. ಜಿಲ್ಲಾ ಮಟ್ಟದ ಕುಂದು ಕೊರತೆ ನಿವಾರಣಾ ಸಮಿತಿ ಮತ್ತು ರೋಗಿ ಹಕ್ಕುಗಳ ಸನ್ನದು ಇವರೆಡು ಖಾಸಗಿ ಆಸ್ಪತ್ರೆಗಳ ಉತ್ತರದಾಯಿತ್ವದ ಮೂಲ ಅಂಶವಾಗಿದ್ದು, ಯಾವುದೇ ಕಾರಣಕ್ಕೂ ಇದನ್ನು ಸಡಿಲಗೊಳಿಸಬಾರದು ಎಂದು ಆಗ್ರಹಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜನವಿರೋಧಿಯಾಗಿದ್ದು, ಕೆಪಿಎಂಇ ಕಾಯ್ದೆ ಜಾರಿ ವೇಳೆ ಕಾರ್ಪೊರೇಟ್, ಬಂಡವಾಳಶಾಹಿ ಆಸ್ಪತ್ರೆಗಳ ಪರವಾಗಿ ನಿಂತಿದ್ದು, ನಾಚಿಕೆಗೇಡಿನ ಸಂಗತಿ. ಖಾಸಗಿ ಆಸ್ಪತ್ರೆಗಳು ಬಡವರನ್ನು ಸುಲಿಗೆ ಮಾಡುತ್ತಿವೆ. ಆದರೆ, ಈ ಕುರಿತು ಒಂದು ಮಾತು ಮಾತಾಡದ ಯಡಿಯೂರಪ್ಪ, ಕುಮಾರಸ್ವಾಮಿ, ಕಾಯ್ದೆ ಜಾರಿ ಮಾಡುವ ವೇಳೆಗೆ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಸ್ಲಂ ಜನಾಂದೋಲನ ಸಂಘಟನೆ ಮುಖಂಡ ಎ.ನರಸಿಂಹಮೂರ್ತಿ ಮಾತನಾಡಿ, ಸುಳ್ಳು ಮತ್ತು ಅಪಪ್ರಚಾರವನ್ನು ಆಧರಿಸಿ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ 30 ಕ್ಕೂ ಅಧಿಕ ಜನರು ಬಲಿಯಾದರು. ಆದರೆ, ವಿರೋಧ ಪಕ್ಷಗಳು ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದಾರೆ. ಮುಷ್ಕರದಿಂದ ಮೃತರಾದ ರೋಗಿಗಳ ಪರವಾಗಿ ಒಂದು ವಿಷಾದ ಹೇಳಿಕೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಎಂಇ ತಿದ್ದುಪಡಿ ಕಾಯ್ದೆಗೆ ಕಾಂಗ್ರೆಸ್ ಪಕ್ಷದೊಳಗೆ ವಿರೋಧವಿದ್ದಂತೆ ಕಾಣುತ್ತಿದೆ. ಇಲ್ಲದಿದ್ದರೆ, ಖಾಸಗಿ ಆಸ್ಪತ್ರೆಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುತ್ತಿರುವ ವೇಳೆ ಪಕ್ಷದ ಐಟಿ ಮತ್ತು ಸಂವಹನ ಕೋಶ ಸ್ಪಷ್ಟನೆ, ಸಮರ್ಥನೆ ಹಾಗೂ ಪ್ರತಿಕ್ರಿಯೆ ಯಾಕೆ ನೀಡಲಿಲ್ಲ ಎಂದು ಪ್ರಶ್ನಿಸಿದ ಅವರು, ಕಾಯ್ದೆ ಜಾರಿಗಾಗಿ ಕೆಲಸ ಮಾಡಿದ ಸಂಘಟನೆಗಳನ್ನು ಒಳಗೊಳ್ಳದೆ ಏಕಾಏಕಿ ಆಸ್ಪತ್ರೆಗಳ ವೈದ್ಯರೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಿದ್ದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನಮ್ಮ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಈ ಕಾಯ್ದೆ ರದ್ದು ಮಾಡುತ್ತೇನೆ ಎಂದು ಹೇಳಿಕೆ ನೀಡುತ್ತಾರೆ. ಮತ್ತೊಂದು ಕಡೆ ಜೆಡಿಎಸ್ ಅಧ್ಯಕ್ಷ ಪದೇ ಪದೇ ಖಾಸಗಿ ಆಸ್ಪತ್ರೆಗಳಿಗೆ ಬೆಂಬಲ ಸೂಚಿಸುತ್ತಾರೆ. ಅಲ್ಲದೆ, ಹಣ ಕಟ್ಟಲು ಸಾಧ್ಯವಿಲ್ಲದವರು ಖಾಸಗಿ ಆಸ್ಪತ್ರೆಗೆ ಯಾಕೆ ಹೋಗಬೇಕು ಎಂದು ದೂಷಿಸುತ್ತಾರೆ. ಒಟ್ಟಾರೆಯಾಗಿ ಈ ಎರಡೂ ಪಕ್ಷಗಳು ಬಡವರ ಪರವಾ ಅಥವಾ ಬಂಡವಾಳಶಾಹಿ, ಉಳ್ಳವರ ಪರವಾ ಎಂಬ ಅನುಮಾನ ಕಾಡುತ್ತಿದೆ ಎಂದರು.

ಈ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಧೇಯಕವನ್ನು ಯಥಾವತ್ತಾಗಿ ಮಂಡಿಸಿ, ಅನುಮೋದನೆ ಪಡೆದುಕೊಳ್ಳಬೇಕು. ಹಾಗೂ ಮುಷ್ಕರದ ವೇಳೆ ಚಿಕಿತ್ಸೆ ಸಿಗದೆ ಮರಣ ಹೊಂದಿದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ತಮ್ಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬಾರದು ಎಂದು ಆದೇಶ ನೀಡಿರುವ ಆಸ್ಪತ್ರೆಗಳ ಮಾಲಕರ, ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News