ಉತ್ಸವಗಳಿಂದ ಕಲೆಗಳಿಗೆ ಉಳಿವು: ದಿನೇಶ್ ಗುಂಡೂರಾವ್

Update: 2017-11-20 14:34 GMT

ಬೆಂಗಳೂರು, ನ.20: ಕರಕುಶಲ ಕಲೆಗಳ ಉತ್ಸವ ಹಾಗೂ ಮೇಳಗಳಿಂದ ಪಾರಂಪರಿಕ ಕಲೆಗಳು ಉಳಿಯುತ್ತವೆ ಎಂದು ಶಾಸಕ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

ಗ್ರಾಂಡ್ ಫ್ಲೀ ಮಾರ್ಕೆಟ್ ಸಂಸ್ಥೆಯು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ‘ಬೆಂಗಳೂರು ಉತ್ಸವ’ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಉತ್ಸವ ಯುವ ಕಲಾವಿದರ ಪ್ರತಿಭೆಗಳಿಗೆ ಉತ್ತೇಜನ ನೀಡುವ ವೇದಿಕೆಯಾಗಿದೆ. ಇಲ್ಲಿ ಅಸ್ಸಾಂನಿಂದ ತಮಿಳುನಾಡಿನವರೆಗಿನ ಹತ್ತಾರು ರಾಜ್ಯಗಳ ಕಲಾವಿದರು ತಯಾರಿಸಿದ ಕರಕುಶಲ ವಸ್ತುಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಆಸಕ್ತರು ಭೇಟಿ ನೀಡಬಹುದು ಎಂದು ಹೇಳಿದರು.

ಉತ್ಸವದಲ್ಲಿ ಕರಕುಶಲತೆಯ ಕಂತೆ: ಬೆಂಗಳೂರು ಉತ್ಸವದಲ್ಲಿ ವಿಶಿಷ್ಟ ಉಣ್ಣೆಯಿಂದ ತಯಾರಾದ ಕಾಶ್ಮೀರದ ಪಸ್ಮಿನಾ ಶಾಲು, ಸೀರೆ, ಕುರ್ತಾಗಳು, ರಾಜಸ್ತಾನದ ಕಲಂಕಾರಿ ಕಲೆಯ ಕೈಚೀಲಗಳು, ಒಡಿಸ್ಸಾ ಬುಡಕಟ್ಟುಗಳ ಆಭರಣಗಳು, ಪಶ್ಚಿಮ ಬಂಗಾಳದ ವಿಷ್ಣುಪುರಿ ರೇಷ್ಮೆಯ ಸೀರೆಗಳು, ಇಳಕಲ್‌ನ ಕೈಮಗ್ಗದ ಸೀರೆಗಳು, ಆಂಧ್ರ ಪ್ರದೇಶದ ಕಲಂಕಾರಿ ಶೈಲಿಯ ಶಾಲುಗಳು, ಮಧ್ಯಪ್ರದೇಶದ ಚಂದೇರಿಯ ರೇಷ್ಮೆ ವಸ್ತ್ರಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇವೆ. ಉತ್ಸವದ ಪ್ರವೇಶ ದ್ವಾರದಲ್ಲಿನ ತಂಜಾವೂರಿನ ಚಿನ್ನಲೇಪಿತ ಚಿತ್ರಕಲೆಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹಾಗೆ ಮುಂದುವರಿದರೆ ಬಂಗಾಳದ ಮಿಡ್ನಾಪುರದಲ್ಲಿ ಬೆಳೆಯುವ ವಿಶಿಷ್ಟ ಮೃದು ಹುಲ್ಲಿನಿಂದ ತಯಾರಾದ ನೆಲಹಾಸು, ಟಸ್ಸರ್ ರೇಷ್ಮೆ ಸೀರೆಗಳು ಹಾಗೂ ಮಕ್ಕಳ ಗ್ರಾಮೀಣ ಆಟಗಳ ಪರಿಕರಗಳು ಕಣ್ಣಿಗೆ ಬೀಳುತ್ತವೆ. ಆಸಕ್ತರು ಇವುಗಳನ್ನು ಕುತೂಹಲದಿಂದ ನೋಡುತ್ತ, ಅವುಗಳ ವಿಶೇಷತೆಗಳನ್ನು ವಿಚಾರಿಸುತ್ತಿದ್ದಾರೆ. ಕೆಲವರು ಅವುಗಳನ್ನು ಕೊಳ್ಳುತ್ತಲಿದ್ದಾರೆ.

ಪ್ಯಾಟಿ ಜನರಿಗೆ ಹಳ್ಳಿ ಸಂಸ್ಕೃತಿ ಅಂದ್ರೆ ಇಷ್ಟ. ಹಾಗಾಗಿ ಇಳಕಲ್ ಸೀರೆಗಳಿಗೂ ಸಿಟಿಯಲ್ಲಿ ಬೇಡಿಕೆ ಇದೆ. ನಮ್ಮಲ್ಲಿ ಸಾಂಪ್ರದಾಯಿಕ ಹಾಗೂ ಹೊಸ ಶೈಲಿಯ ಇಳಕಲ್ ಸೀರೆಗಳು ಇವೆ ಎಂದು ಬಾಗಲಕೋಟೆಯ ವಿಜಯಲಕ್ಷ್ಮಿ ತಿಳಿಸಿದರು.

ಹೂ ಮತ್ತು ತರಕಾರಿಗಳ ನೈಸರ್ಗಿಕ ಬಣ್ಣಗಳಿಂದ ರಚಿಸಲಾಗಿರುವ ಮಧುಬನಿ ಚಿತ್ರಗಳು ಸಹ ಜನರ ಆಕರ್ಷಣೆ ಆಗಿವೆ. ಇವುಗಳ ಬೆಲೆ ಕನಿಷ್ಟ 500 ರೂ. ನಿಂದ ಗರಿಷ್ಠ 20 ಸಾವಿರದ ವರೆಗೂ ಇದೆ. ಆಸಕ್ತರು ತಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಇವುಗಳನ್ನು ಕೊಳ್ಳುತ್ತಿದ್ದಾರೆ ಎಂದು ಬಿಹಾರದಿಂದ ಬಂದಿರುವ ಚಿತ್ರಕಲಾವಿದ ಅಶೋಕ್ ಕುಮಾರ್ ತಿಳಿಸಿದರು.

ಕರಕುಶಲ ವಸ್ತುಗಳೊಂದಿಗೆ ಕೈಮಗ್ಗದಲ್ಲಿ ತಯಾರಾದ ಬೆಡ್‌ಶೀಟ್, ಖಾದಿ ಕುರ್ತಾಗಳು, ಕರ್ಟನ್‌ಗಳು ಹಾಗೂ ವಿವಿಧ ವಿನ್ಯಾಸದ ದಿಂಬುಗಳನ್ನು ಇಲ್ಲಿ ಕಾಣಬಹುದು, ಜತೆಗೆ ಕೊಳ್ಳಬಹುದು. ಯುವತಿಯರು ಒಡಿಸ್ಸಾ ಬುಡಕಟ್ಟುಗಳ ಲೋಹದ ಓಲೆ, ಸರ, ಬಳೆ ಹಾಗೂ ಉಂಗುರಗಳ ಕುರಿತು ವಿಚಾರಿುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಉತ್ಸವದಲ್ಲಿ ಸವಿ ತಿನಿಸುಗಳ ಅಂಗಡಿಯೂ ಇದೆ. ಇಲ್ಲಿ ನಿಮಗೆ ಬೆಟ್ಟದ ನೆಲ್ಲಿಕಾಯಿ, ಹುಣಸೆ, ವೀಳ್ಯದೆಲೆ, ಅಡಕೆ, ಸೋಂಪಿನಿಂದ ತಯಾರಾದ ತರಹೇವಾರಿ ತಿನಿಸುಗಳು ಸಿಗುತ್ತವೆ. ನಿಮ್ಮ ಮನ ಬೇಡುವ ಖಾದ್ಯವನ್ನು ನಾಲಿಗೆಗೆ ಹಚ್ಚಬಹುದು.

ಇದಲ್ಲದೆ, ಬಿದರಿನಿಂದ ರೂಪಿಸಿರುವ ಬುಟ್ಟಿಗಳು, ಕೈಚೀಲಗಳು, ವಿವಿಧ ಲೋಹಗಳಿಂದ ತಯಾರಿಸಿದ ಆಲಂಕಾರಿಕ ವಸ್ತುಗಳು, ಕಟ್ಟಿಗೆಯ ಕಾಷ್ಠಶಿಲ್ಪಗಳು, ಆಕರ್ಷಕವಾದ ಕನ್ನಡಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಉತ್ಸವ ನ.26ರ ವರೆಗೆ ನಡೆಯಲಿದೆ. ಆಸಕ್ತರು ಬೆಳಿಗ್ಗೆ 11 ರಿಂದ ಸಂಜೆ 7 ರೊಳಗೆ ಭೇಟಿ ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News