ಡೆಂಗ್ ನಿಂದ ಮೃತಪಟ್ಟ ಬಾಲಕಿಯ 15 ದಿನಗಳ ಚಿಕಿತ್ಸೆಗೆ 16 ಲಕ್ಷ ರೂ. ಬಿಲ್ ನೀಡಿದ ಆಸ್ಪತ್ರೆ!

Update: 2017-11-21 09:29 GMT

ಹೊಸದಿಲ್ಲಿ, ನ.21: ಡೆಂಗ್ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು 15 ದಿನಗಳ ಕಾಲ ಐಸಿಯುನಲ್ಲಿಟ್ಟದ್ದಕ್ಕಾಗಿ ಆಸ್ಪತ್ರೆಯೊಂದು 16 ಲಕ್ಷ ರೂ. ಬಿಲ್ ನೀಡಿದ ಘಟನೆ ಗುರ್ಗಾಂವ್ ನಲ್ಲಿ ನಡೆದಿದೆ. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಇಲ್ಲಿನ ಫೋರ್ಟಿಸ್ ಮೆಮೊರಿಯಲ್ ರಿಸರ್ಚ್ ಇನ್ ಸ್ಟಿಟ್ಯೂಟ್ ಈ ಶುಲ್ಕ ವಿಧಿಸಿದ್ದು, ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಯಾವುದೇ ತಪ್ಪು ಸಂಭವಿಸಿಲ್ಲ ಎಂದು ಫೋರ್ಟಿಸ್ ಹೇಳಿದೆ. ಎಲ್ಲಾ ವೈದ್ಯಕೀಯ ಪ್ರೋಟೊಕಾಲ್ ಗಳನ್ನು ಪಾಲಿಸಲಾಗಿದೆ. ಎಲ್ಲಾ ವೈದ್ಯಕೀಯ ಮಾರ್ಗದರ್ಶನವನ್ನು ನೀಡಲಾಗಿದೆ ಎಂದು ತಿಳಿಸಿದೆ. ಈ ಬಗ್ಗೆ ವಿವರವಾದ ವಿವರವಾದ ಸ್ಪಷ್ಟೀಕರಣವನ್ನು ಆರೋಗ್ಯ ಸಚಿವರಿಗೆ ನೀಡಿದ್ದು, 15.79 ಲಕ್ಷ ರೂ.ನ ಬಿಲ್ ನೀಡಲಾಗಿದೆ ಎಂದು ತಿಳಿಸಿದೆ.

ಮೃತ ಬಾಲಕಿಯ ತಂದೆಯ ಸ್ನೇಹಿತರೊಬ್ಬರು ಮಾಡಿದ್ದ “ಡೆಂಗ್ ಚಿಕಿತ್ಸೆಗಾಗಿ ನನ್ನ ಗೆಳೆಯನ ಪುತ್ರಿ 15 ದಿನಗಳ ಕಾಲ ಫೋರ್ಟಿಸ್ ಆಸ್ಪತ್ರೆಯಲ್ಲಿದ್ದಳು. 2700 ಗ್ಲೌಸ್ ಗಳಿಗೆ ಸೇರಿದಂತೆ 18 ಲಕ್ಷ ರೂ. ಬಿಲ್ ಮಾಡಲಾಗಿದೆ” ಎಂಬ ಟ್ವೀಟ್ ನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

4  ದಿವಸಗಳಲ್ಲಿ ಈ ಟ್ವೀಟ್ 9,000 ಬಾರಿ ರಿಟ್ವೀಟ್ ಆಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಬಾಲಕಿಯ ತಂದೆ ಆಗ್ರಹಿಸಿದ್ದಾರೆ. 600 ಸಿರಿಂಜ್ ಗಳು, 2700 ಗ್ಲೌಸ್ ಸೇರಿದಂತೆ ಚಿಕಿತ್ಸೆಯ ವೆಚ್ಚವಾಗಿ 16 ಲಕ್ಷ ರೂ.ಗಳನ್ನು ಬಿಲ್ ಮಾಡಲಾಗಿದೆ.

ಟ್ವೀಟ್ ವೈರಲ್ ಆಗುತ್ತಲೇ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News