ಬಿಎಸ್ ಪಿಗೆ ನೀಡಿದ ಮತಗಳು ಬಿಜೆಪಿಗೆ!: ಮೀರತ್ ಮತಗಟ್ಟೆಯಲ್ಲಿ ಮತದಾರರ ಪ್ರತಿಭಟನೆ.

Update: 2017-11-27 06:18 GMT

ಮೀರತ್, ನ.23: ಬೇರೆ ಪಕ್ಷದ ಚಿಹ್ನೆಯನ್ನು ಒತ್ತಿದರೂ ಬಿಜೆಪಿಗೆ ಮತ ಬಿದ್ದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೀರತ್ ನ ಮತದಾನ ಕೇಂದ್ರದ ಹೊರಭಾಗದಲ್ಲಿ ಮತದಾರರು ಪ್ರತಿಭಟನೆ ನಡೆಸಿದ್ದಾರೆ.

ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಜಯಿಸಿದ ಎಂಟು ತಿಂಗಳ ನಂತರ ನಡೆದ ಸ್ಥಳೀಯಾಡಳಿತ ಚುನಾವಣೆ ಬುಧವಾರ ಆರಂಭವಾಗಿದೆ.

ಮತಯಂತ್ರ ಸರಿ ಇರಲಿಲ್ಲ ಎಂದು ತಿಳಿಸಿರುವ ಅಧಿಕಾರಿಗಳು ಬೇರೆ ಮತಯಂತ್ರವನ್ನು ನೀಡಿದ್ದಾರೆ. ಆದರೆ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಇತರ ಪಕ್ಷಗಳು ಆರೋಪಿಸಿವೆ.

ತನ್ನ ಅಭ್ಯರ್ಥಿಗೆ ಮತದಾರನೊಬ್ಬ ಮತ ಹಾಕಲು ಸಾಧ್ಯವಾಗದೆ ಮತ್ತೆ ಮತ್ತೆ ಪ್ರಯತ್ನಿಸುತ್ತಿರುವ ವಿಡಿಯೋವೊಂದು ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದೆ. ತಸ್ಲೀಮ್ ಅಹ್ಮದ್ ಎಂಬ  ಮತದಾರ ಬಿಎಸ್ ಪಿ ಅಭ್ಯರ್ಥಿಗೆ ಮತ ನೀಡಿದ್ದರು.

“ನಾನು ಬಿಎಸ್ಪಿ ಅಭ್ಯರ್ಥಿಗೆ ಮತ ನೀಡಿದ್ದೆ. ನಾನು ಮತಯಂತ್ರದ ಗುಂಡಿಯನ್ನು ಒತ್ತಿದಾಗ ಮತ ಬಿಜೆಪಿಗೆ ಹೋಗುತ್ತಿತ್ತು. ಇಲ್ಲಿ ನಾನು ಒಂದು ಗಂಟೆಯಿಂದ ಕಾಯುತ್ತಿದ್ದೇನೆ. ಆದರೆ ಇದುವರೆಗು ಪರಿಹಾರ ಸಿಕ್ಕಿಲ್ಲ" ಎಂದು ಅಹ್ಮದ್ ಹೇಳುತ್ತಿರುವುದು ವಿಡಿಯೋದಲ್ಲಿದೆ.

ಈ ವಿಷಯ ತಿಳಿಯುತ್ತಲೇ ಬಿಎಸ್ ಪಿ ಬೆಂಬಲಿಗರು ಹಾಗು ಸದಸ್ಯರು ಮತಗಟ್ಟೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. “ಅಲ್ಪಸಂಖ್ಯಾತ ಸಮುದಾಯದ ಮಂದಿ ಹೆಚ್ಚಾಗಿ ಇರುವ ಪ್ರದೇಶದಲ್ಲೇ ಈ ಸಮಸ್ಯೆಯಾಗಿದೆ. ನಮಗೆ ಇಲ್ಲಿ ವ್ಯಾಪಕ ಬೆಂಬಲ ಇದೆ. ಅಧಿಕಾರಿಗಳು ತಕ್ಷಣ ಮತಯಂತ್ರವನ್ನು ಬದಲಾಯಿಸಿದ್ದಾರೆ. ಆದರೆ ಎಲ್ಲಾ ಮತಗಳು  ಬಿಜೆಪಿಗೆ ಹೋಗಿದೆ ಎನ್ನುವುದನ್ನು ತಿಳಿದರೆ ಆಘಾತವಾಗುತ್ತಿದೆ” ಎಂದು ಬಿಎಸ್ ಪಿಯ ಮಾಜಿ ಶಾಸಕ ಯೋಗೇಶ್ ವರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News