ದಿಲೀಪ್ ಅನೈತಿಕ ಸಂಬಂಧವೇ ನಟಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣ: ಎಸ್‍ಐಟಿ

Update: 2017-11-23 12:06 GMT

ಕೊಚ್ಚಿ, ನ.23: ಮಲಯಾಳಂ ನಟಿಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ  ಬುಧವಾರ ಆರೋಪ ಪಟ್ಟಿ ಸಲ್ಲಿಸಿದೆ. ಎಂಟನೇ ಆರೋಪಿ, ನಟ ದಿಲೀಪ್ ಅವರು ಮೊದಲನೇ ಆರೋಪಿ ಪಲ್ಸರ್ ಸುನಿ ಅಲಿಯಾಸ್ ಸುನಿಲ್ ಕುಮಾರ್ ಸುರೇಂದ್ರನ್ ಜತೆ  ಸಂಚು ಹೂಡಿ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬುದಕ್ಕೆ ಸಾಂದರ್ಭಿಕ ಸಾಕ್ಷ್ಯಗಳನ್ನು ತನಿಖಾ ತಂಡ ಅವಲಂಬಿಸಿದೆ.

ಸಂತ್ರಸ್ತೆಯನ್ನು ಮೊದಲ ಸಾಕ್ಷಿ ಎಂದು ಪರಿಗಣಿಸಲಾಗಿದ್ದು, ದಿಲೀಪ್ ಮಾಜಿ ಪತ್ನಿ ಮಂಜು ವಾರಿಯರ್ ಅವರನ್ನು 11ನೇ ಸಾಕ್ಷಿ ಹಾಗೂ ಈಗಿನ ಪತ್ನಿ ಕಾವ್ಯ ಮಾಧವನ್ ಅವರನ್ನು 34ನೇ ಸಾಕ್ಷಿ ಎಂದು ಪರಿಗಣಿಸಲಾಗಿದೆ. ಚಿತ್ರರಂಗದ 50 ಮಂದಿ ಇತರರನ್ನು ಸಾಕ್ಷಿಗಳೆಂದು ಹೆಸರಿಸಲಾಗಿದೆ.
ಸಂತ್ರಸ್ತೆಯು ದಿಲೀಪ್ ಅವರು ಕಾವ್ಯಾ ಮಾಧವನ್ ಜತೆ ಹೊಂದಿದ್ದ ಅನೈತಿಕ ಸಂಬಂಧದ ಬಗ್ಗೆ ಡಿಜಿಟಲ್ ಸಾಕ್ಷ್ಯವನ್ನು  ಅವರ ಆಗಿನ ಪತ್ನಿ ಮಂಜು ವಾರಿಯರ್ ಗೆ ನೀಡಿದ್ದರಿಂದ ದಿಲೀಪ್ ಆಕೆಯ ವಿರುದ್ಧ ಹಗೆ ಸಾಧಿಸಿದ್ದರು ಎಂದು ಅಂಗಮಾಲಿ ಜುಡಿಶಿಯಲ್ ಮೊದಲನೇ ದರ್ಜೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಂತಿಮ ವರದಿಯಲ್ಲಿ ತಿಳಿಸಲಾಗಿದೆ.

ಒಟ್ಟು 1,652 ಪುಟಗಳ ಆರೋಪಪಟ್ಟಿಯಲ್ಲಿ 355 ಮಂದಿಯನ್ನು ಸಾಕ್ಷಿಗಳನ್ನಾಗಿ ಹಾಗೂ ಅಪ್ರೂವರ್ ಗಳನ್ನಾಗಿ ಹೆಸರಿಸಲಾಗಿದೆ. "ಚಿತ್ರರಂಗದ ಇತರರಲ್ಲೂ ಆರೋಪಿ ನಟ ತಾನು ಆ ನಿರ್ದಿಷ್ಟ ನಟಿ (ಸಂತ್ರಸ್ತೆ)ಯ ವಿರುದ್ಧ ಹೊಂದಿದ ದ್ವೇಷದ ಬಗ್ಗೆ ಹೇಳಿಕೊಂಡಿದ್ದರು'' ಎಂಬುದನ್ನೂ ಉಲ್ಲೇಖಿಸಲಾಗಿದೆ. ಸಂತ್ರಸ್ತೆಯ ಚಿತ್ರಜೀವನವನ್ನು ಹಾಳುಗೆಡಹಲೂ ನಟ ದಿಲೀಪ್ ಯತ್ನಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಸಂತ್ರಸ್ತೆಯ ವಿರುದ್ಧ ಬಹಳ ಕಾಲದಿಂದ ಸಂಚು ನಡೆದಿತ್ತೆಂಬುದು ಪ್ರಕರಣದ ಪ್ರಮುಖ ಸಾಕ್ಷಿ  ಹಾಗೂ ದಿಲೀಪ್ ಜತೆ  ಜೈಲಿನಲ್ಲಿದ್ದ ಜಿನ್ಸನ್ ಮುಖಾಂತರ ತನಿಖಾ ತಂಡಕ್ಕೆ ತಿಳಿದು ಬಂದಿತ್ತು.

ಪಲ್ಸರ್ ಸುನಿ ಹಾಗೂ ದಿಲೀಪ್ ಹೊರತಾಗಿ ಮಾರ್ಟಿನ್, ಮಣಿಕಂಠನ್, ವಿಘ್ನೇಶ್, ಸಲೀಂ, ಪ್ರದೀಪ್, ಚಾರ್ಲಿ ಥಾಮಸ್, ರಾಜು ಜೋಸೆಫ್, ಪ್ರತೀಶ್ ಚಾಕೋ ಹಾಗೂ ಸುನಿ ಜತೆ ಜೈಲಿನಲ್ಲಿದ್ದ ವಿಷ್ಣು ಹಾಗೂ ಮಸ್ತ್ರಿ ಸುನಿಲ್ ಸೇರಿದ್ದಾರೆ. ಇತರ ಇಬ್ಬರು ಆರೋಪಿಗಳಾದ ವಿಪಿನ್ ಲಾಲ್ ಹಾಗೂ  ಪಿ ಕೆ ಅನೀಶ್ ಅಪ್ರೂವರ್ ಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News