ಗುಜರಾತ್ ಸಿಎಂ ಕಚೇರಿ ನಿರಾಕರಿಸಿದ ತ್ರಿವರ್ಣ ಧ್ವಜ ಸ್ವೀಕರಿಸಲಿರುವ ರಾಹುಲ್

Update: 2017-11-23 12:26 GMT

ಅಹ್ಮದಾಬಾದ್, ನ.23: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯವರ ಕಚೇರಿ ನಿರಾಕರಿಸಿದ್ದ ದಲಿತರು ತಯಾರಿಸಿದ್ದ ಬೃಹತ್ ರಾಷ್ಟ್ರಧ್ವಜವೊಂದನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ವೀಕರಿಸಲಿದ್ದಾರೆ. 

ಮೊದಲು ಈ ಧ್ವಜವನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯವರಿಗೆ ಹಸ್ತಾಂತರಿಸುವ ಪ್ರಸ್ತಾಪವಿತ್ತಾದರೂ ಅದನ್ನಿಡಲು ಜಾಗವಿಲ್ಲ ಎಂದು ಅಧಿಕಾರಿಗಳು ನಿರಾಕರಿಸಿದ್ದರು. ಹಾಗಾಗಿ ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ಬೃಹತ್ ರಾಷ್ಟ್ರಧ್ವಜವನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ. ಸನಂದ್ ಸಮೀಪದ ದಲಿತ ಶಕ್ತಿ ಕೇಂದ್ರಕ್ಕೆ ರಾಹುಲ್ ಭೇಟಿ ನೀಡುವ ಸಂದರ್ಭ ಅವರು 125 ಅಡಿ ಅಗಲ ಹಾಗೂ 83.3 ಅಡಿ ಉದ್ದದ ರಾಷ್ಟ್ರಧ್ವಜವನ್ನು ಸ್ವೀಕರಿಸಲಿದ್ದಾರೆ.

ಇದನ್ನು ಭಾರತದ ಅತಿ ದೊಡ್ಡ ರಾಷ್ಟ್ರಧ್ವಜವೆಂದು ಬಣ್ಣಿಸಲಾಗಿದ್ದು, ಮುಖ್ಯಮಂತ್ರಿಗೆ ಹಸ್ತಾಂತರಿಸಿ ರಾಜ್ಯದಲ್ಲಿ ಅಸ್ಪೃಶ್ಯತೆಯನ್ನು ಅಂತ್ಯಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ಅವರಿಂದ ಪಡೆಯಬೇಕೆಂದು ನಿರೀಕ್ಷಿಸಲಾಗಿತ್ತು. ಆದರೆ ಮುಖ್ಯಮಂತ್ರಿಯ ಪರವಾಗಿ ಸ್ವೀಕರಿಸಬೇಕಿದ್ದ ಅಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ ಎಂದು ದಲಿತ ನಾಯಕ ಮಾರ್ಟಿನ್ ಮಕ್ವನ್ ಹೇಳಿದ್ದಾರೆ.

ಇದು ರಾಷ್ಟ್ರಧ್ವಜಕ್ಕೆ ಮಾತ್ರವಲ್ಲದೆ ಈ ರಾಷ್ಟ್ರಧ್ವಜವನ್ನು ತಯಾರಿಸಿದ 10 ರಾಜ್ಯಗಳ ದಲಿತರಿಗಾದ ಅವಮಾನ ಎಂದು ನವಸರ್ಜನ್ ಟ್ರಸ್ಟ್ ಮುಖ್ಯಸ್ಥರೂ ಆಗಿರುವ ಮಕ್ವನ್ ಹೇಳಿದ್ದಾರೆ. ಖಾದಿಯಿಂದ ತಯಾರಿಸಲಾದ ಈ ಧ್ವಜವನ್ನು ದಲಿತ ಶಕ್ತಿ ಕೇಂದ್ರದ  100 ಮಂದಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು  25 ದಿನಗಳ ಕಾಲ ಶ್ರಮಿಸಿ ತಯಾರಿಸಿದ್ದರು. ಈ ರಾಷ್ಟ್ರಧ್ವಜದ 125 ಅಡಿ ಉದ್ದವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತಿಯನ್ನು ಸೂಚಿಸುತ್ತದೆ ಎಂದು ಮಕ್ವನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News