ಕನಕದಾಸರ ಜೀವನಾನುಭವ ಸದಾ ಪ್ರಸ್ತುತ: ಡಾ.ಬಿ.ಕೆ.ರವಿ

Update: 2017-11-23 12:39 GMT

ಬೆಂಗಳೂರು, ನ.23: ಸಂತ ಕವಿ ಕನಕದಾಸರ ಜೀವನಾನುಭವ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದು, ಜನತೆ ಅವರ ತತ್ವಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಸೌಹಾರ್ದಯುತ ಜೀವನ ನಡೆಸುವಂತಾಗಲಿ ಎಂದು ಬೆಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಬಿ.ಕೆ.ರವಿ ಆಶಿಸಿದ್ದಾರೆ.

ಗುರುವಾರ ಕನಕಲೋಕ ಶಿಕ್ಷಣ ಟ್ರಸ್ಟ್ ಮತ್ತು ಕನಕಲೋಕ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಕನಕದಾಸರ 530ನೆ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ತಮ್ಮ ಅನುಭವವನ್ನು ವಿಸ್ತರಿಸಿಕೊಳ್ಳಲು ಹಾಗೂ ಜನರ ನಡುವೆ ಒಳ್ಳೆಯ ವಿಚಾರಗಳನ್ನು ಬಿತ್ತುವುದಕ್ಕಾಗಿಯೇ ಜೀವನವನ್ನು ಮುಡುಪಾಗಿಟ್ಟರು ಎಂದು ಬಣ್ಣಿಸಿದರು.

ಅನಾದಿ ಕಾಲದಿಂದಲೂ ಜಾತಿ, ಕುಲ, ಮತಗಳೆಂಬ ಮೇಲರಿಮೆಗಳು ಸಮಾಜಕ್ಕೆ ಅಂಟಿರುವ ರೋಗಗಳಾಗಿವೆ. ಇವುಗಳನ್ನು ಕೇಂದ್ರೀಕರಿಸಿಕೊಂಡೇ ಕನಕ ದಾಸರು ನೂರಾರು ತತ್ವ ಪದಗಳನ್ನು ರಚಿಸಿ, ಜನತೆಯಲ್ಲಿ ಜಾಗೃತಿ ಮೂಡಿಸಿದ್ದರು. ಆದರೆ, ಇಂದಿಗೂ ಜಾತಿ, ಪಂಥಗಳು ಹಾಗೆಯೇ ಹೆಮ್ಮರವಾಗಿ ಬೆಳೆದಿವೆ. ಇವುಗಳ ನಿರ್ಮೂಲನೆಗೆ ಕನಕದಾಸರ ತತ್ವಗಳು ನಮಗೆ ದಾರಿದೀಪವಾಗಲಿ ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಸುವರ್ಣಮುಖಿ ಸಂಸ್ಕೃತಿ ಧಾಮದ ಡಾ.ಎಂ.ನಾಗರಾಜ್, ನಿವೃತ್ತ ಐಪಿಎಸ್ ಅಧಿಕಾರಿ ಎಂ.ಆರ್.ಪೂಜಾರ್ ಹಾಗೂ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಚನ್ನೇಗೌಡ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News