ಪತ್ರಕರ್ತನ ಹತ್ಯೆ: ಬಿಜೆಪಿ, ಕಾಂಗ್ರೆಸ್‌ನಿಂದ ತ್ರಿಪುರಾ ಬಂದ್

Update: 2017-11-23 13:28 GMT

ಅಗರ್ತಲಾ, ನ.23: ತ್ರಿಪುರಾ ಸ್ಟೇಟ್ ರೈಫಲ್ಸ್‌ನ (ಟಿಎಸ್‌ಆರ್) ಬೆಟಾಲಿಯನ್‌ನ ಮುಖ್ಯಕಚೇರಿಯೊಳಗೆ ಪತ್ರಕರ್ತರೊಬ್ಬರನ್ನು ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಕರೆ ನೀಡಿದ್ದ ಬಂದ್‌ನಿಂದ ತ್ರಿಪುರಾದಲ್ಲಿ ಜನಜೀವನ ಸ್ತಬ್ಧಗೊಂಡಿತು. ಪ್ರತಿಪಕ್ಷ ಬಿಜೆಪಿಯು ಈ ಹತ್ಯೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮತ್ತು ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಂದ್ ನಡೆಸಿದರೆ ಕಾಂಗ್ರೆಸ್ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿತು.

ಬೆಂಗಾಳಿ ದಿನಪತ್ರಿಕೆ ಸ್ಯಾಂದನ್ ಪತ್ರಿಕಾದ ವರದಿಗಾರರಾಗಿದ್ದ ಸುದೀಪ್ ದತ್ತಾ ಭೌಮಿಕ್‌ರನ್ನು ಮಂಗಳವಾರದಂದು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ದಂಗೆ ನಿಗ್ರಹ ಅರೆಸೈನಿಕ ಪಡೆಯ ಒಬ್ಬ ಕಮಾಂಡೆಂಟ್ ಮತ್ತು ಟಿಎಸ್‌ಆರ್‌ನ ಒಬ್ಬ ಪೇದೆಯನ್ನು ಬಂಧಿಸಲಾಗಿದೆ.

ಬಂದ್ ಪರಿಣಾಮವಾಗಿ ಅಂಗಡಿಮುಂಗಟ್ಟುಗಳು ಮುಚ್ಚಿದ್ದರೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಾಲಾ ಕಾಲೇಜು, ಬ್ಯಾಂಕ್‌ಗಳು ಮತ್ತು ಇತರ ಸಂಸ್ಥೆಗಳು ಮುಚ್ಚಿದ್ದು ಸರಕಾರಿ ಕಚೇರಿಗಳಲ್ಲೂ ಬಹುತೇಕ ಸಿಬ್ಬಂದಿ ಗೈರಾಗಿದ್ದರು.

ಆಡಳಿತಾರೂಢ ಸಿಪಿಐ-ಎಂನ ಮುಖವಾಣಿ ಡೈಲಿ ದೆಶೆರ್ ಕಥಾ ಪತ್ರಿಕೆಯನ್ನು ಹೊರತಪಡಿಸಿ ಉಳಿದೆಲ್ಲಾ ಪತ್ರಿಕೆಗಳು ಈ ಹತ್ಯೆಯನ್ನು ಖಂಡಿಸಿ ತಮ್ಮ ಸಂಪಾದಕೀಯವನ್ನು ಖಾಲಿ ಬಿಟ್ಟಿದ್ದವು.

ಈ ನಿರ್ಧಾರವನ್ನು ಎಲ್ಲಾ ಪತ್ರಿಕೆಗಳ ಸಂಪಾದಕರ ಸಭೆಯಲ್ಲಿ ತೆಗೆದುಕೊಂಡಿರುವುದಾಗಿ ಸ್ಯಾಂದನ್ ಪತ್ರಿಕಾದ ಸಂಪಾದಕರಾದ ಸುಬಲ್ ಕುಮಾರ ಡೇ ತಿಳಿಸಿದ್ದಾರೆ. ದೃಶ್ಯ ಮಾಧ್ಯಮಗಳು ಕೂಡಾ ಪ್ರತೀ ಗಂಟೆಗೊಮ್ಮೆ ಮೃತ ಪತ್ರಕರ್ತನ ಭಾವಚಿತ್ರವನ್ನು ತೋರಿಸಲಿದೆ ಎಂದು ತ್ರಿಪುರಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರಣಬ್ ಸರ್ಕಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News