ವಿದೇಶದಲ್ಲಿ ‘ಪದ್ಮಾವತಿ’ ಬಿಡುಗಡೆಗೆ ತಡೆ ಕೋರಿದ ಅರ್ಜಿ : ವಿಚಾರಣೆಗೆ ಸುಪ್ರೀಂ ಸಮ್ಮತಿ

Update: 2017-11-23 13:35 GMT

 ಹೊಸದಿಲ್ಲಿ, ನ.23: ಹಿಂದಿ ಸಿನೆಮಾ ‘ಪದ್ಮಾವತಿ’ಯನ್ನು ವಿದೇಶದಲ್ಲಿ ಡಿಸೆಂಬರ್ 1ರಂದು ಬಿಡುಗಡೆ ನಡೆಸದಂತೆ ಸಿನೆಮಾ ನಿರ್ಮಾಪಕರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಹೊಸ ಅರ್ಜಿಯ ವಿಚಾರಣೆಯನ್ನು ನ.28ರಂದು ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.

    ಸಿನೆಮಾದ ಹಾಡು ಹಾಗೂ ಪ್ರೋಮೊ ಬಿಡುಗಡೆಗೆ ಸೆನ್ಸಾರ್ ಮಂಡಳಿ ಅನುಮತಿ ನೀಡಿರುವುದಾಗಿ ‘ಪದ್ಮಾವತಿ’ ನಿರ್ಮಾಪಕರು ನ್ಯಾಯಾಲಯಕ್ಕೆ ತಪ್ಪುಮಾಹಿತಿ ನೀಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದ್ದು ಅರ್ಜಿಯ ವಿಚಾರಣೆ ನ.28ರಂದು ನಡೆಯಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠವು ತಿಳಿಸಿದೆ.

 ತಾವು ಹೊಸದಾಗಿ ಸಲ್ಲಿಸಿದ್ದ ಅರ್ಜಿಯ ತ್ವರಿತ ವಿಚಾರಣೆ ಕೋರಿದ ವಕೀಲ ಎಂ.ಎಲ್.ಶರ್ಮ, ವಿದೇಶದಲ್ಲಿ ಸಿನೆಮ ಬಿಡುಗಡೆಯಾದರೆ ಸಮಾಜದ ಸಾಮರಸ್ಯಕ್ಕೆ ಭಾರೀ ಹಾನಿಯಾಗಲಿದೆ ಎಂದರಲ್ಲದೆ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುವ ಸಿನೆಮಾ ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಕೋರಿದರು. ನ.28ರಂದು ಅರ್ಜಿಯನ್ನು ವಿಚಾರಿಸಲಾಗುವುದು. ನೀವು ರಿಟ್ ಅರ್ಜಿ ಸಲ್ಲಿಸಿ ಎಂದು ನ್ಯಾಯಪೀಠ ತಿಳಿಸಿತು.

 ಸಿನೆಮದಲ್ಲಿ ಕೆಲವು ಆಕ್ಷೇಪಾರ್ಹ ದೃಶ್ಯಗಳಿದ್ದು ಅವನ್ನು ತೆಗೆದುಹಾಕಬೇಕೆಂದು ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿತು. ಸೆನ್ಸಾರ್ ಮಂಡಳಿ ಇನ್ನೂ ಪ್ರಮಾಣಪತ್ರ ನೀಡಿಲ್ಲ. ಆದ್ದರಿಂದ ಸಾಂವಿಧಾನಿಕ ಸಂಸ್ಥೆಯೊಂದು ಕರ್ತವ್ಯ ನಿರ್ವಹಿಸದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News