ಸಣ್ಣ ಪತ್ರಿಕೆಗೆ ಹೊಸ ಭಾಷ್ಯ ಬರೆದ ರಾಜಶೇಖರ ಕೋಟಿ: ಸಿಎಂ ಸಿದ್ದರಾಮಯ್ಯ

Update: 2017-11-23 14:53 GMT

ಬೆಂಗಳೂರು, ನ.23: ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾಡಿನ ಹಿರಿಯ ಪತ್ರಕರ್ತರಾಗಿದ್ದ ರಾಜಶೇಖರ ಕೋಟಿ ಅವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಸಣ್ಣ ಪತ್ರಿಕೆಗೆ ಹೊಸ ಭಾಷ್ಯ ಬರೆದ ಅವರು, ಪತ್ರಿಕೆಯ ಅಚ್ಚುಮೊಳೆ ಜೋಡಿಸುವುದರಿಂದ ಪ್ರಾರಂಭಿಸಿ ಸಂಪಾದಕ ಹುದ್ದೆಯವರೆಗೆ ಎಲ್ಲ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದವರು ಎಂದು ಸ್ಮರಿಸಿದ್ದಾರೆ.

ತಮ್ಮ ವಿಶೇಷ ವರದಿಗಾರಿಕಾ ಶೈಲಿಯಿಂದ ಕನ್ನಡ ಪತ್ರಿಕಾ ರಂಗದಲ್ಲಿ ಸಂಚಲನ ಮೂಡಿಸುತ್ತಾ ಬಂದವರು. ರಾಜ್ಯ ಮಟ್ಟದ ಪತ್ರಿಕೆಗಳ ಜತೆಗೆ ಸ್ಪರ್ಧೆಗೆ ಇಳಿದು ತಮ್ಮ ಆಂದೋಲನ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಂಡವರು. ಚಾಮರಾಜನಗರ, ಕೊಡಗು ಜಿಲ್ಲೆಗಳಿಗೂ ತಮ್ಮ ಪತ್ರಿಕೆಯ ವರದಿ ಹಾಗೂ ಪ್ರಸಾರ ವಿಸ್ತರಿಸಿ ಓದುಗರ ಮನಸಿನಲ್ಲಿ ಆಂದೋಲನ ಪತ್ರಿಕೆಯ ಕುರಿತು ವಿಶೇಷ ಸ್ಥಾನ ಸಿಗುವಂತೆ ಮಾಡುವಲ್ಲಿ ರಾಜಶೇಖರ ಕೋಟಿ ಶ್ರಮ ದೊಡ್ಡದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಸ್ ತಂಗುದಾಣಗಳನ್ನು ನಿರ್ಮಿಸಿದ ರಾಜಶೇಖರ ಕೋಟಿ ಸಾಮುದಾಯಿಕ ಜವಾಬ್ದಾರಿ ಮೆರೆದಿದ್ದಾರೆ. ಅಪಘಾತಗಳು ಸಂಭವಿಸಿದಾಗ ಕೇವಲ ಸುದ್ದಿ ಪ್ರಕಟಿಸುವುದು ಮಾತ್ರವಲ್ಲ, ಗಾಯಾಳುಗಳ ಚಿಕಿತ್ಸೆಗೆ ಆರ್ಥಿಕ ನೆರವು ಕಲ್ಪಿಸುವಲ್ಲಿಯೂ ರಾಜಶೇಖರ ಕೋಟಿ ಮಾನವೀಯತೆ ತೋರಿದ್ದರು ಎಂದು ಅವರು ಸ್ಮರಿಸಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ಎಡಬಿಡದೆ ಶ್ರಮಿಸುತ್ತಿದ್ದ ರಾಜಶೇಖರ ಕೋಟಿ ಸಮ್ಮೇಳನದ ಉದ್ಘಾಟನಾ ಸಮಾರಂಭದ ಮುನ್ನಾ ದಿನವೇ ಇಹಲೋಕ ತ್ಯಜಿಸಿರುವುದು ಅಪಾರ ನೋವು ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News