ಸರಕಾರಿ ಶಾಲೆಗಳ ಸಬಲೀಕರಣ ಮಸೂದೆ ವರದಿ ತಿರುಚಲಾಗಿದೆ: ಮುಖ್ಯಮಂತ್ರಿಗೆ ನಿರಂಜನಾರಾಧ್ಯ ಬಹಿರಂಗ ಪತ್ರ

Update: 2017-11-23 15:58 GMT

ಬೆಂಗಳೂರು, ನ.23: ಸರಕಾರಿ ಶಾಲೆಗಳ ಸಬಲೀಕರಣ ಖಾಸಗಿ ಮಸೂದೆ (ವಿಧೇಯಕ)ಯಲ್ಲಿ ನಾವು ನೀಡಿರುವ ವರದಿಯ ಸಮಗ್ರ ತಿರುಳನ್ನು ತಿರುಚುವ ಮತ್ತು ತಿಳಿಗೊಳಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ನಾವು ನೀಡಿದ್ದ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆಯನ್ನು ಪಡೆದು ಪೂರ್ಣವಾಗಿ ಜಾರಿಗೊಳಿಸುವ ಭರವಸೆಯನ್ನು ನೀಡಿದ್ದ ಶಿಕ್ಷಣ ಸಚಿವರು ಇದೀಗ ಏಕಾಏಕಿ ಸದನದಲ್ಲಿ ಮಂಡಿಸಲು ಮುಂದಾಗಿರುವುದನ್ನು ನೋಡಿದರೆ ಸಚಿವರು ಸಂಪೂರ್ಣವಾಗಿ ವರದಿಯ ಅಂಶಗಳು ಕೈ ಬಿಟ್ಟಿದ್ದಾರೆ ಎಂಬುದು ಅರ್ಥವಾಗುತ್ತಿದೆ. ಹಾಗೂ ಇದು ನಮ್ಮನ್ನು ದಾರಿ ತಪ್ಪಿಸುವ ಹುನ್ನಾರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಒತ್ತಡಕ್ಕೆ ಮಣಿದು 2015 ರಲ್ಲಿ ಅಲಹಾಬಾದ್ ಹೈಕೋರ್ಟ್ ಸರಕಾರಿ ಶಾಲೆಗಳ ಶೋಚನೀಯ ಸ್ಥಿತಿಗೆ ಅಧಿಕಾರಿಗಳು ಕಾರಣ ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಸರಕಾರದಿಂದ ಸಂಬಳ ಪಡೆಯುವ ಅಧಿಕಾರಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗಳಿಗೆ ಸೇರಿಸಬೇಕು. ನಿಯಮ ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಹೇಳಿತು. ಈ ಬೆಳವಣಿಗೆಯಿಂದ ರಾಜ್ಯ ಸರಕಾರ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು.

ಅದರಲ್ಲಿ ನಾನು ವಿಶೇಷ ವಿಷಯ ತಜ್ಞನಾಗಿ ಕೆಲಸ ಮಾಡಿ ಜನರ ನೈಜ ಆಶೋತ್ತರಗಳನ್ನು ಮತ್ತು ಅವರು ತಮ್ಮ ದಿನನಿತ್ಯದ ಭಾಗವಹಿಸುವಿಕೆಯನ್ನು ಸಂಶೋಧನೆಯ ಮೂಲಕ ಕಂಡುಕೊಂಡ ಕಲಿಕೆ, ಪಾಠ ಮತ್ತು ಮೌಲ್ಯಯುತವಾದ ಸಾವಯವ ಜ್ಞಾನವನ್ನು ಆಧರಿಸಿ ಸುಮಾರು ಒಂದು ವರ್ಷಗಳ ನಿರಂತರ ಸಂಶೋಧನೆಯ ಮೂಲಕ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ ನೆರೆಹೊರೆಯ ಸಮಾನ ಶಾಲೆಗಳನ್ನಾಗಿಸುವ ನಿಟ್ಟಿನಲ್ಲಿ 21 ಶಿಫಾರಸುಗಳನ್ನೊಳಗೊಂಡ ಅತ್ಯಂತ ವೈಜ್ಞಾನಿಕ ವರದಿಯನ್ನು ಸೆ.4, 2017 ರಂದು ಸಲ್ಲಿಸಲಾಗಿದೆ. ಈ ವೇಳೆ ಮುಖ್ಯಮಂತ್ರಿ ಮತ್ತು ಸಚಿವರು ಎರಡೂ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆದು, ಸಂಪೂರ್ಣ ವರದಿ ಜಾರಿ ಮಾಡುವ ಭರವಸೆ ನೀಡಿದ್ದರು.

ಆದರೆ, ಈಗ ಏಕಾಏಕಿ ವಿಧಾನ ಪರಿಷತ್ತಿನ ಸದಸ್ಯರೊಬ್ಬರು 21 ಶಿಫಾರಸುಗಳ ಪೈಕಿ ಕೇವಲ ಒಂದೇ ಒಂದು ಶಿಫಾರಸನ್ನು ಮುಂದಿಟ್ಟುಕೊಂಡು ಖಾಸಗಿ ಮಸೂದೆಯನ್ನು (ವಿಧೇಯಕವನ್ನು) ಮಂಡಿಸಲು ಮುಂದಾಗಿರುವುದು ಸಮಗ್ರ ವರದಿಯನ್ನು ತಿರುಚುವ ಮತ್ತು ತಿಳಿಗೊಳಿಸುವ ಹುನ್ನಾರವಾಗಿದೆ. ಸದಸ್ಯರೊಬ್ಬರು ಮಂಡಿಸಲು ಮುಂದಾಗಿರುವ ಈ ಖಾಸಗಿ ಮಸೂದೆಯನ್ನು ಶಿಕ್ಷಣ ಸಚಿವರು ಟೊಂಕಕಟ್ಟಿ ಬೆಂಬಲಿಸಲು ಮುಂದಾಗಿರುವುದನ್ನು ನಾನು ಖಂಡಿಸುತ್ತೇನೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಸಚಿವರಿಗೆ ಸರಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ಮತ್ತು ಜನರ ಆಶೋತ್ತರಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಖಾಸಗಿ ಮಸೂದೆ(ವಿಧೇಯಕವನ್ನು) ಮಂಡೆನೆಯನ್ನು ಬೆಂಬಲಿಸುವ ಬದಲು ಸಮಗ್ರ ವರದಿಯನ್ನು ಸಚಿವ ಸಂಪುಟದ ಮುಂದೆ ತಂದು ಒಪ್ಪಿಗೆಯನ್ನು ಪಡೆದು ಪೂರ್ಣವಾಗಿ ಜಾರಿಗೊಳಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News