ಎಸಿಬಿ ತನಿಖೆ ನಡೆಸಲು ಹಿಂಜರಿಯುತ್ತಿರುವುದೇಕೆ: ರವಿ ಕೃಷ್ಣಾರೆಡ್ಡಿ ಪ್ರಶ್ನೆ

Update: 2017-11-23 16:14 GMT

ಬೆಂಗಳೂರು, ನ.23: 2016ರ ಅಕ್ಟೋಬರ್ ತಿಂಗಳಿನಲ್ಲಿ ವಿಧಾನಸೌಧ ಬಳಿ ವಕೀಲ ಸಿದ್ಧಾರ್ಥ ಕಾರಿನಲ್ಲಿ 1.97 ಕೋಟಿ ರೂ. ಸಾಗಿಸುತ್ತಿದ್ದ ಪ್ರಕರಣದ ಕುರಿತು ದೂರು ದಾಖಲಿಸಿಕೊಳ್ಳಲು ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಲಂಚಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಾಗಾಗಿ ಮತ್ತೊಂದು ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ರವಿೃಷ್ಣಾ ರೆಡ್ಡಿಗೆ ಎಸಿಬಿ ಹಿಂಬರಹ ನೀಡಿದೆ.

ವಿಧಾನಸೌಧದ ಬಳಿ ಸಿಕ್ಕ ಹಣ ವಕೀಲ ಸಿದ್ಧಾರ್ಥಗೆ ಸೇರಿದೆ. ಸಿದ್ಧಾರ್ಥ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಮಗ ಬಿ.ಎಸ್.ರಾಘವೇಂದ್ರರ ವಕೀಲರಾಗಿದ್ದಾರೆ. ಯಡಿಯೂರಪ್ಪ ಪ್ರೇರಣಾ ಟ್ರಸ್ಟ್‌ಗೆ ಕಿಕ್‌ಬ್ಯಾಕ್ ಪಡೆದು ಜಿಂದಾಲ್ ಕಂಪೆನಿಗೆ ಗಣಿ ಪರವಾನಿಗೆ ನೀಡಿದ್ದಾರೆಂಬ ಆರೋಪವಿದೆ. ಈ ಪ್ರಕರಣದಿಂದ ಖುಲಾಸೆ ಮಾಡಲು, ವಿಚಾರಣೆ ನಡೆಸುತ್ತಿದ್ದ ಸಿಬಿಐನ ನ್ಯಾಯಾಧೀಶರೊಬ್ಬರಿಗೆ ಲಂಚ ನೀಡಲು ಈ ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ರವಿ ಕೃಷ್ಣಾರೆಡ್ಡಿ ಈ ಹಿಂದೆ ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವಂತೆ ಅಕ್ಟೋಬರ್ 27 ರಂದು ರವಿ ಕೃಷ್ಣಾರೆಡ್ಡಿ ದೂರು ನೀಡಿದ್ದರು. ದೂರಿನ ಪ್ರತಿಗಳನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಪ್ರಧಾನಮಂತ್ರಿ ಕಚೇರಿ, ಹಣಕಾಸು ಸಚಿವಾಲಯಕ್ಕೂ ಸಲ್ಲಿಸಿ ಸಿಬಿಐ ತನಿಖೆಗೆ ಆಗ್ರಹಿಸಿದ್ದರು.

ಈ ಕುರಿತು ಕ್ರಮ ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವಾಲಯವು ರಾಜ್ಯದ ಮುಖ್ಯಕಾರ್ಯದರ್ಶಿಗೆ ಸೂಚಿಸಿದೆ. ಈಗ ದೂರು ಎಸಿಬಿ ಅಂಗಳಕ್ಕೆ ಬಂದಿದೆ. ಆದರೆ, ವಿಧಾನಸೌಧ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲು ಆಗುವುದಿಲ್ಲವೆಂದು ಎಸಿಬಿ ಸಬೂಬು ಹೇಳುತ್ತಿದೆ ಎಂದು ರವಿಕೃಷ್ಣ ರೆಡ್ಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News