ಉಪಗ್ರಹಗಳ ಜೀವಿತಾವಧಿ ಹೆಚ್ಚಿಸಬೇಕಿದೆ: ನಂದಾ

Update: 2017-11-23 16:29 GMT

ಬೆಂಗಳೂರು, ನ.23: ವಿಜ್ಞಾನಿಗಳು ನೂತನ ಆವಿಷ್ಕಾರಗಳ ಮೂಲಕ ಕೃತಕ ಉಪಗ್ರಹಗಳ ಜೀವಿತಾವಧಿಯನ್ನು ಹೆಚ್ಚಿಸಬೇಕಿದೆ ಎಂದು ಪರಮಾಣು ಖನಿಜ ಅನ್ವೇಷಣೆ ಹಾಗೂ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಎಲ್.ಕೆ.ನಂದಾ ಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗ ಮತ್ತು ಪರಮಾಣು ಖನಿಜ ಅನ್ವೇಷಣೆ ಹಾಗೂ ಸಂಶೋಧನಾ ನಿರ್ದೇಶನಾಲಯವು ಗುರುವಾರ ಆಯೋಜಿಸಿದ್ದ ‘ವಿಕಿರಣಗಳ ಕುರಿತ ವಿಚಾರ ಸಂಕಿರಣ’ದಲ್ಲಿ ಅವರು ಮಾತನಾಡಿದರು.

ಜನರಲ್ಲಿ ವಿಕಿರಣಗಳ ಕುರಿತು ಸರಿಯಾದ ಮಾಹಿತಿ ಇಲ್ಲ. ಅದನ್ನು ಸುರಕ್ಷಿತವಾಗಿ ಬಳಸಿದ್ದರಿಂದಲೇ ಆಹಾರ ಸಂಸ್ಕರಣೆ, ಔಷಧಗಳ ತಯಾರಿಯಲ್ಲಿ ಪ್ರಗತಿ ಸಾಧಿಸಿದ್ದೇವೆ. ಉಪಗ್ರಹ ಉಡಾವಣೆಯಲ್ಲೂ ಸಾಧನೆ ಮಾಡಿದ್ದೇವೆ ಎಂದರು.

30 ವರ್ಷಗಳ ಹಿಂದೆ ವಿಕಿರಣ ಉಪಯೋಗಿಸಿ ಸಂಶೋಧನೆ ಮಾಡುವುದು ಸವಾಲಿನ ಕೆಲಸ ಆಗಿತ್ತು. ಆಗಿನ ಸಂಶೋಧನಾ ಕೇಂದ್ರಗಳನ್ನು ಜನರು ಬಾಂಬ್ ತಯಾರಿಸುವ ಘಟಕಗಳೆಂದು ಭಾವಿಸುತ್ತಿದ್ದರು. ಅವರಿಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೆವು ಎಂದು ಸ್ಮರಿಸಿದರು.

ಹೋಮಿ ಜಹಾಂಗಿರ್ ಭಾಭಾ ಅಣುವಿಜ್ಞಾನ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಎಂ.ಆರ್.ಅಯ್ಯರ್ ಮಾತನಾಡುತ್ತ, ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ವಿಕಿರಣ ಭೌತಶಾಸ್ತ್ರದ ವಿಭಾಗ ಸ್ಥಾಪಿಸಬೇಕು. ಅಲ್ಲಿ ಸಂಶೋಧನೆಗಳಿಗೆ ಆದ್ಯತೆ ನೀಡಬೇಕು. ರಾಜ್ಯದ ವಿಶ್ವವಿದ್ಯಾನಿಲಯಗಳು ಮುಂದಿನ 5 ವರ್ಷಗಳಲ್ಲಿ ಮಾಡಬೇಕಾದ ಸಂಶೋಧನಾ ಕಾರ್ಯದ ರೂಪರೇಷ ತಯಾರಿಸಿಬೇಕು. ಅದನ್ನು ಅನುಷ್ಠಾನಕ್ಕೆ ತರಲು ಸಮನ್ವಯ ಸಾಧಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಚ್.ಎನ್.ರಮೇಶ್, ಸಮ್ಮೇಳನದಲ್ಲಿ ವಿಕಿರಣ ವಿಜ್ಞಾನ ರಂಗದ ಬೆಳವಣಿಗೆಯ ಆರಂಭದ ಹಂತಗಳ ಕುರಿತು ಉಪನ್ಯಾಸಗಳು ನಡೆಯುತ್ತಿವೆ. ಇದರಿಂದ ವಿದ್ಯಾರ್ಥಿಗಳಿಗೆ ಈ ರಂಗ ಬೆಳೆದು ಬಂದ ಹಾದಿಯ ಪರಿಚಯ ಆಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಬಿ.ಕೆ.ರವಿ, ಪ್ರೊ.ನಾಗಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News