ಶಾಲೆಯ ಕಟ್ಟಡದ ಗಾಜು ಹೊಡೆದು ವಿದ್ಯಾರ್ಥಿಗಳಿಗೆ ಗಾಯ

Update: 2017-11-23 16:37 GMT

ಬೆಂಗಳೂರು, ನ.23: ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡ ಒಡೆತನದ ರಾಯಲ್ ಕಾನ್‌ಕೋರ್ಡ್ ಅಂತಾರಾಷ್ಟ್ರೀಯ ಶಾಲೆಯ ಕಟ್ಟಡಕ್ಕೆ ಅಳವಡಿಸಿದ್ದ ಗಾಜುಗಳು ಕೆಳಗೆ ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

ಇಲ್ಲಿನ ಕಲ್ಯಾಣನಗರದಲ್ಲಿರುವ ಅಂತಾರಾಷ್ಟ್ರೀಯ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಘಟನೆಯ ಕುರಿತು ವಿದ್ಯಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪೋಷಕರ ಆಕೋಶ: ಅಂತಾರಾಷ್ಟ್ರೀಯ ಶಾಲೆಯೆಂದು ಹಣೆಪಟ್ಟಿ ಹಾಕಿಕೊಂಡಿರುವ ಕಾನ್‌ಕೋರ್ಡ್ ಶಾಲೆ ಪ್ರತಿ ವರ್ಷ ಪ್ರತೀ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂ. ಪ್ರವೇಶ ಶುಲ್ಕವನ್ನು ಪಡೆಯುತ್ತಿದೆ. ಇಷ್ಟು ಹಣ ಕೊಟ್ಟರು ನಮ್ಮ ಮಕ್ಕಳಿಗೆ ಸೂಕ್ತ ರಕ್ಷಣೆ ಕೊಡುವಲ್ಲಿ ಶಾಲೆಯ ಆಡಳಿತ ಮಂಡಳಿ ವಿಫಲವಾಗಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯ ಮಾಲಕ ಎಲ್.ಆರ್.ಶಿವರಾಮೇಗೌಡ ತನ್ನ ಮಗಳ ಮದುವೆಗೆ ಕೋಟ್ಯಂತರ ರೂ.ಹಣ ಖರ್ಚು ಮಾಡುತ್ತಿದ್ದಾರೆ. ಆದರೆ, ನೂರಾರು ಮಕ್ಕಳು ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಕುಳಿತು ಶಿಕ್ಷಣ ಕಲಿಯುವ ಶಾಲಾ ಕಟ್ಟಡವನ್ನು ಸಮರ್ಪಕವಾಗಿ ದುರಸ್ಥಿ ಮಾಡಿಲ್ಲ ಎಂದು ಪೋಷಕರು ಕಿಡಿಕಾರಿದರು.

ಮೂರು ದಿನದಲ್ಲಿ ದುರಸ್ತಿ: ಘಟನೆ ಕುರಿತು ಕ್ಷಮೆ ಕೋರಿದ ಶಾಲೆಯ ಮಾಲಕ ಶಿವರಾಮೇಗೌಡ, ಇನ್ನು ಮೂರು ದಿನದಲ್ಲಿ ಶಾಲೆಯ ಕಟ್ಟಡಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಯನ್ನು ಬಗೆಹರಿಸಲಾಗುವುದು. ಇನ್ನು ಮುಂದೆ ಈ ರೀತಿ ಆಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಪೋಷಕರಿಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News