5ವರ್ಷದಲ್ಲಿ 15ಲಕ್ಷ ಉದ್ಯೋಗ ಸೃಷ್ಟಿಯ ಗುರಿ: ಸಚಿವ ದೇಶಪಾಂಡೆ

Update: 2017-11-23 16:43 GMT

ಬೆಂಗಳೂರು, ನ.23: ರಾಜ್ಯ ಸರಕಾರದ ಕೈಗಾರಿಕಾ ಕ್ಷೇತ್ರದಲ್ಲಿ ಕಳೆದ 4 ವರ್ಷಗಳಲ್ಲಿ 13.91 ಲಕ್ಷ ಹುದ್ದೆಗಳನ್ನು ಸೃಷ್ಟಿಸಲಿದ್ದು, ಮಾರ್ಚ್ 2019ರೊಳಗೆ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗವನ್ನು ಸೃಷ್ಟಿಸಲಾಗುವುದು ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಗುರುವಾರ ರಾಜ್ಯ ಸರಕಾರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿದ್ದ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

2013-14 ರಿಂದ 2017-18ರ ನಡುವೆ ರಾಜ್ಯದ ಸಣ್ಣ ಕೈಗಾರಿಕಾ ಕ್ಷೇತ್ರದಲ್ಲಿ 12.03 ಲಕ್ಷ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಮಧ್ಯಮ ವರ್ಗದ ಕೈಗಾರಿಕಾ ಕ್ಷೇತ್ರದಲ್ಲಿ 1.88 ಲಕ್ಷ ಹಾಗೂ ಬಹತ್ ಕೈಗಾರಿಕಾ ಕ್ಷೇತ್ರದಲ್ಲಿ 5.99 ಲಕ್ಷ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಮುಂದಿನ 2019ರ ವೇಳೆಗೆ ಒಟ್ಟು 15 ಲಕ್ಷ ಹುದ್ದೆಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಕರ್ನಾಟಕ ಅತ್ಯಂತ ಸೂಕ್ತ ಪ್ರದೇಶವಾಗಿದೆ. ಕೈಗಾರಿಕೆ ಬೆಳವಣಿಗೆಗಾಗಿ ರಾಜ್ಯದಲ್ಲಿ ಉತ್ತಮ ಮೂಲಭೂತ ಸೌಲಭ್ಯ ಕಲ್ಪಿಸಲು ಸರಕಾರ ವಿಶೇಷ ಅನುದಾನ ಹಾಗೂ ವಿಶೇಷ ಕಾಳಜಿ ಹೊಂದಿದೆ. ಹೀಗಾಗಿ ಹೂಡಿಕೆದಾರರು ನಿರಾಂತಕವಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮೇಕಿನ್ ಇಂಡಿಯಾ ನಿರ್ಮಾಣದಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತಿದೆ. ಉತ್ತಮ ತಂತ್ರಜ್ಞಾನಗಳ ಬಳಕೆ ಮಾಡಿಕೊಳ್ಳುವುದರ ಮೂಲಕ ಗುಣಮಟ್ಟದ ಉತ್ಪಾದನೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಆದ್ಯತೆ ನೀಡಲಾಗುತ್ತಿದೆ. ರಾಜ್ಯ ಕೈಗಾರಿಕಾ ಕ್ಷೇತ್ರದಲ್ಲಿ ನ್ಯಾನೋ, ರೋಬೋಟಿಕ್, 3ಡಿ ಮುದ್ರಣ, ಡ್ರೋನ್, ರಾಕೆಟ್, ಯುದ್ಧ ವಿಮಾನಗಳ ತಯಾರಿಕಾ ತಂತ್ರಜ್ಞಾನ, ಹಾಗೂ ಇಲೆಕ್ಟ್ರಾನಿಕ್ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವೆ ಡಾ.ಎಂ.ಸಿ.ಮೋಹನ ಕುಮಾರಿ ಮಾತನಾಡಿ, ಕಳೆದ ದಶಕದಿಂದ ರಾಜ್ಯದಲ್ಲಿ ಕೈಗಾರಿಕಾ ಕ್ರಾಂತಿ ನಡೆಯುತ್ತಿದೆ. ಹೊಸ ತಲೆಮಾರಿನ ಯುವಕರು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ರಾಜ್ಯ ಮತ್ತಷ್ಟು ಪ್ರಥಮಗಳಿಗೆ ನಾಂದಿ ಹಾಡಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜವಳಿ ಸಚಿವ ರುದ್ರಪ್ಪಲಮಾಣಿ ಮಾತನಾಡಿ, ರಾಜ್ಯ ಸರಕಾರ 2017-18ರ ಸಾಲಿನಲ್ಲಿ ಜಾರಿಗೆ ತಂದ ಜವಳಿ ನೀತಿ ಉದ್ದಿಮೆದಾರರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ಸ್ಥಳೀಯ ಸಂಪನ್ಮೂಲಗಳಿಗೆ ಅನುಗುಣವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದಲ್ಲಿ ರಾಜ್ಯಕ್ಕೂ, ಕೈಗಾರಿಕೆಗಳಿಗೂ ಹಾಗೂ ರಾಜ್ಯದ ಜನರಿಗೂ ಸಹಾಯಕವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಆರ್.ವಿಶ್ವನಾಥ್ ವಹಿಸಿದ್ದರು. ಕೈಗಾರಿಕೋದ್ಯಮಿಗಳಾದ ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್, ಟೊಯೋಟೊ ಕಿರ್ಲೋಸ್ಕರ್ ಸಂಸ್ಥೆಯ ವಿಕ್ರಮ್ ಕಿಲೋಸ್ಕರ್, ಜೆಸಿಬಿ ಸಂಸ್ಥೆಯ ವಿಪಿನ್ ಸಂದೀಪ್, ಹಿಂದೂಸ್ಥಾನ್ ಏರೋನಾಟಿಕ್ ಲಿ. ಸಂಸ್ಥೆಯ ಟಿ.ಸುವರ್ಣರಾಜು ಸೇರಿದಂತೆ ಅನೇಕ ಕೈಗಾರಿಕೋದ್ಯಮಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News