ಬ್ರಹ್ಮಪುತ್ರ ನದಿಯಲ್ಲಿ ಅಣೆಕಟ್ಟು ಕಟ್ಟುವುದಿಲ್ಲ: ಚೀನಾ ಮಾಧ್ಯಮ

Update: 2017-11-23 16:48 GMT

ಬೀಜಿಂಗ್, ನ. 23: ಚೀನಾವು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವುದಿಲ್ಲ, ಬದಲಿಗೆ ತನ್ನ ಪ್ರಾಂತಗಳಿಗೆ ಸಮೀಪವಿರುವ ನದಿಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವತ್ತ ಗಮನಹರಿಸುವುದು ಎಂದು ದೇಶದ ಸರಕಾರಿ ಮಾಧ್ಯಮ ‘ಗ್ಲೋಬಲ್ ಟೈಮ್ಸ್’ ಇಂದು ವರದಿ ಮಾಡಿದೆ.

ಬ್ರಹ್ಮಪುತ್ರ ನದಿಯ ನೀರನ್ನು ಟಿಬೆಟ್‌ನಿಂದ ಕ್ಸಿನ್‌ಜಿಯಾಂಗ್ ಪ್ರದೇಶಕ್ಕೆ ಒಯ್ಯಲು ತಾನು 1,000 ಕಿ.ಮೀ. ಉದ್ದದ ಸುರಂಗವನ್ನು ನಿರ್ಮಿಸುತ್ತಿದ್ದೇನೆ ಎಂಬ ವರದಿಗಳು ‘ಸುಳ್ಳು’ ಎಂಬುದಾಗಿ ಚೀನಾ ಕಳೆದ ತಿಂಗಳು ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಬ್ರಹ್ಮಪುತ್ರ ನದಿಯಲ್ಲಿ ಚೀನಾ ಹಲವಾರು ಅಣೆಕಟ್ಟೆಗಳನ್ನು ಕಟ್ಟಲು ಉದ್ದೇಶಿಸಿದೆ ಎಂಬ ವರದಿಗಳ ಬಗ್ಗೆ ನದಿಯ ಫಲಾನುಭವಿ ದೇಶದ ನೆಲೆಯಲ್ಲಿ ಭಾರತ ಚೀನಾಕ್ಕೆ ತನ್ನ ಕಳವಳಗಳನ್ನು ವ್ಯಕ್ತಪಡಿಸಿತ್ತು. ಬ್ರಹ್ಮಪುತ್ರ ನದಿಯನ್ನು ಚೀನಾದಲ್ಲಿ ಯರ್‌ಲುಂಗ್ ಟ್ಸಾಂಗ್‌ಪೊ ಎಂದು ಕರೆಯಲಾಗುತ್ತದೆ.

‘‘ಜಿನ್ಶ, ಲ್ಯಾಂಕಂಗ್ ಮತ್ತು ನುಜಿಯಂಗ್ ನದಿಗಳು ಟಿಬೆಟ್‌ನ ಪ್ರಸಿದ್ಧ ಜಲ ಮಾರ್ಗಗಳು. ಇಲ್ಲಿ ಜಲವಿದ್ಯುತ್ ಸ್ಥಾವರ ಸ್ಥಾಪನೆಗೆ ಅಪಾರ ಅವಕಾಶಗಳಿವೆ. ಹಾಗೂ ಅವುಗಳು ಭಾರತದ ಮೂಲಕ ಹಾದುಹೋಗುವುದಿಲ್ಲ’’ ಎಂದು ‘ಗ್ಲೋಬಲ್ ಟೈಮ್ಸ್’ನಲ್ಲಿ ಪ್ರಕಟಗೊಂಡ ಲೇಖನವೊಂದು ಹೇಳಿದೆ.

 ‘‘ಹಾಗಾಗಿ, ಚೀನಾದಿಂದ ಭಾರತಕ್ಕೆ ಹರಿಯುವ ನದಿಗಳಲ್ಲಿ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸುವ ಅಗತ್ಯವಿರುವುದಿಲ್ಲ. ಹಾಗೂ ಯರ್‌ಲುಂಗ್ ಟ್ಸಾಂಗ್‌ಪೊ (ಬ್ರಹ್ಮಪುತ್ರ) ಮುಂತಾದ ನದಿಗಳನ್ನು ಈ ಯೋಜನೆಯಿಂದ ಬೇರ್ಪಡಿಸಲಾಗುತ್ತದೆ’’ ಎಂದು ಲೇಖನ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News