ರೊಹಿಂಗ್ಯಾ ವಾಪಸಾತಿ: ಬಾಂಗ್ಲಾ ಸಚಿವರೊಂದಿಗೆ ಸೂ ಕಿ ಮಾತುಕತೆ

Update: 2017-11-23 16:52 GMT

ಯಾಂಗನ್ (ಮ್ಯಾನ್ಮಾರ್), ನ. 23: ರಖೈನ್ ರಾಜ್ಯದಲ್ಲಿ ಸೇನೆಯ ಹಿಂಸಾಚಾರಕ್ಕೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಲಕ್ಷಾಂತರ ರೊಹಿಂಗ್ಯಾ ಮುಸ್ಲಿಮರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಗುರುವಾರ ಬಾಂಗ್ಲಾದೇಶದ ವಿದೇಶ ಸಚಿವ ಅಬುಲ್ ಹಸನ್ ಮಹ್ಮೂದ್‌ರನ್ನು ನೇಪಿಡಾವ್‌ನಲ್ಲಿ ಭೇಟಿಯಾಗಿದ್ದಾರೆ.

ಬಾಂಗ್ಲಾದೇಶದಲ್ಲಿ ನೆಲೆಸಿರುವ ನಿರಾಶ್ರಿತರಿಗೆ ಸಂಬಂಧಿಸಿದ ಬಿಕ್ಕಟ್ಟಿನ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಭೇಟಿ ಸಂಭವಿಸಿದೆ ಎನ್ನಲಾಗಿದೆ.

ಸೇನಾ ದೌರ್ಜನ್ಯಕ್ಕೆ ಬೆದರಿ 6.20 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಆಗಸ್ಟ್ 25ರ ಬಳಿಕ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ.

ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಎರಡೂ ದೇಶಗಳಿಗೆ ಪೋಪ್ ಫ್ರಾನ್ಸಿಸ್ ನೀಡಲಿರುವ ಭೇಟಿಗೆ ಪೂರ್ವಭಾವಿಯಾಗಿ ಈ ಸಭೆ ನಡೆದಿದೆ. ರೊಹಿಂಗ್ಯಾ ಮುಸ್ಲಿಮರ ಪರಿಸ್ಥಿತಿಯ ಬಗ್ಗೆ ಪೋಪ್ ಈಗಾಗಲೇ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

‘‘ರಖೈನ್ ರಾಜ್ಯವನ್ನು ತೊರೆದು ಹೋಗಿರುವ ಜನರನ್ನು ವಾಪಸ್ ಕರೆಸಿಕೊಳ್ಳುವ ವಿಷಯದಲ್ಲಿ ಉಭಯ ದೇಶಗಳ ನಡುವೆ ಉಂಟಾಗಿರುವ ತಿಳುವಳಿಕೆಯ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು’’ ಎಂದು ಮ್ಯಾನ್ಮಾರ್ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News