ಮರೆಯಾಗುತ್ತಿದೆ ಹಗಲು-ರಾತ್ರಿಯ ವ್ಯತ್ಯಾಸ!

Update: 2017-11-23 17:02 GMT

ವಾಶಿಂಗ್ಟನ್, ನ. 23: ಭೂಮಿಯ ಅತ್ಯಂತ ಜನಭರಿತ ಪ್ರದೇಶಗಳಲ್ಲಿ ಹಗಲು ಮತ್ತು ರಾತ್ರಿಯ ನಡುವಿನ ವ್ಯತ್ಯಾಸ ಮರೆಯಾಗುತ್ತಿದೆ ಎಂದು ‘ಸಯನ್ಸ್ ಅಡ್ವಾನ್ಸಸ್’ ಪತ್ರಿಕೆಯಲ್ಲಿ ಬುಧವಾರ ಪ್ರಕಟಗೊಂಡ ಲೇಖನವೊಂದು ಹೇಳಿದೆ.

ಈ ಬದಲಾವಣೆಯು ಬೆಳಕಿನ ಮಾಲಿನ್ಯವನ್ನು ಉಂಟುಮಾಡಿದ್ದು, ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಆಳವಾದ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಲೇಖನ ತಿಳಿಸಿದೆ.

‘‘ನಾವು ಹೆಚ್ಚೆಚ್ಚು ರಾತ್ರಿಯನ್ನು ಕಳೆದುಕೊಳ್ಳುತ್ತಿದ್ದೇವೆ’’ ಎಂದು ಪತ್ರಿಕೆಯ ಸಂಪಾದಕ ಕಿಪ್ ಹಾಜಸ್ ಹೇಳಿದರು.

2012ರಿಂದ 2016ರ ಅವಧಿಯಲ್ಲಿ ಭೂಮಿಯ ಮೇಲ್ಭಾಗದ ಕೃತಕ ಬೆಳಕಿನ ಪ್ರದೇಶವು ವರ್ಷಕ್ಕೆ 2.2 ಶೇಕಡದಂತೆ ಹಿಗ್ಗುತ್ತಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸಯನ್ಸಸ್‌ನ ಕ್ರಿಸ್ಟೋಫರ್ ಕೈಬ ನೇತೃತ್ವದಲ್ಲಿ ನಡೆದ ಅಧ್ಯಯನವು ಹೇಳಿದೆ.

ರಾತ್ರಿಯಲ್ಲಿ ಹೊರಾಂಗಣದ ಕೃತಕ ಬೆಳಕಿನ ಪ್ರಮಾಣವನ್ನು ಅಳೆಯಲು ಕೈಬ ಮತ್ತವರ ತಂಡವು ಅಧಿಕ ಸಾಂದ್ರತೆಯ ಉಪಗ್ರಹ ಚಿತ್ರಗಳ ವಿಶ್ಲೇಷಣೆ ನಡೆಸಿತು.

ಈಗಾಗಲೇ ಬೆಳಕು ಹೊಂದಿರುವ ಪ್ರದೇಶಗಳು ಇನ್ನಷ್ಟು ಪ್ರಕಾಶಮಾನವಾಗಿರುವುದನ್ನು ಸಂಶೋಧನಾ ತಂಡ ಪತ್ತೆಹಚ್ಚಿತು. ಅವುಗಳ ಪ್ರಕಾಶ ವರ್ಷಕ್ಕೆ 2.2 ಶೇಕಡದಷ್ಟು ಹೆಚ್ಚುತ್ತಿದೆ ಎಂಬುದಾಗಿ ಅದು ಲೆಕ್ಕಹಾಕಿದೆ.

ಬೆಳಕಿನ ಹೆಚ್ಚಳ ಹೆಚ್ಚಾಗಿ ಮಧ್ಯಪ್ರಾಚ್ಯ ಮತ್ತು ಏಶ್ಯಗಳಲ್ಲಿ ಕಂಡುಬಂದಿದೆ.

ಎಲ್‌ಇಡಿ ಬಲ್ಬ್‌ಗಳು ಕಾರಣ

ಅಗ್ಗದಲ್ಲಿ ದೊರೆಯುತ್ತಿರುವ ಬೆಳಕಿನ ಸಲಕರಣೆಗಳು ಈ ಪ್ರವೃತ್ತಿಗೆ ಕಾರಣ ಎಂದು ಸಂಶೋಧನೆ ಹೇಳುತ್ತದೆ.

‘‘ಎಲ್‌ಇಡಿ ಬಲ್ಬ್‌ಗಳು ವಿದ್ಯುತ್ ಉಳಿತಾಯ ಮಾಡುತ್ತವೆ ಎನ್ನುವುದು ನಮಗೆ ಗೊತ್ತು. ಆದರೆ, ಹೊಸ ಪ್ರದೇಶಗಳಲ್ಲಿ ಬೆಳಕು ಸೃಷ್ಟಿಸಲು ಅಥವಾ ಹಾಲಿ ಸ್ಥಳದಲ್ಲಿಯೇ ಬೆಳಕಿನ ಪ್ರಮಾಣವನ್ನು ಹೆಚ್ಚಿಸಲು ಇದೇ ಎಲ್‌ಇಡಿ ಬಲ್ಬ್‌ಗಳನ್ನು ಬಳಸಲಾಗುತ್ತದೆ. ಅಲ್ಲಿಗೆ ವಿದ್ಯುತ್ ಉಳಿತಾಯ ಖೋತಾ ಆಗುತ್ತದೆ’’ ಎಂದಿದೆ.

ಕೃತಕ ಬೆಳಕಿನಿಂದ ನಿದ್ರಾಹೀನತೆ

ಹೆಚ್ಚಿನ ಎಲ್‌ಇಡಿ ಬಲ್ಬ್‌ಗಳು ಹೊರಸೂಸುವ ಕಿರು-ವೇವ್‌ಲೆಂತ್ ನೀಲಿ ಬೆಳಕಿಗೆ ಜನರು ಹೊಂದಿಕೊಂಡಿದ್ದಾರೆ. ಆದರೆ, ಅದು ನಿದ್ರಾಹೀನತೆ ಹಾಗೂ ಇತರ ಮಾನವ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.

ಈ ರೀತಿಯ ಬೆಳಕು ಒಡ್ಡುವ ಆರೋಗ್ಯ ಅಪಾಯಗಳ ಬಗ್ಗೆ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಕಳೆದ ವರ್ಷ ಎಚ್ಚರಿಕೆಯೊಂದನ್ನು ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News