ದಲಿತರ ಹಕ್ಕುಗಳಿಗಾಗಿ ನೆತ್ತರು ಹರಿಸಿದ ಹೊಲೆಯರು

Update: 2017-11-24 06:05 GMT

ಬ್ರಾಹ್ಮಣರು ದಲಿತರನ್ನು ಸ್ವೀಕರಿಸಲು ಸಿದ್ಧರಿದ್ದಾರೆ, ಬ್ರಾಹ್ಮಣೇತರರೇ ಅವರ ಶತ್ರುಗಳು ಎಂದು ಸಾಬೀತುಪಡಿಸುವ ಪ್ರಯತ್ನವನ್ನು ಕೇಸರಿಯವರು ಆರಂಭಿಸಿರುವಂತೆ ಮಾದಿಗರ ನಾಯಕರು ಕೂಡಾ ಇಂತಹದೇ ಪ್ರಯತ್ನ ನಡೆಸಿದ್ದಾರೆ ಅನ್ನುವ ವಿಚಾರಗಳನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಕೆಳಗಿನಂತೆ ವಿವರಿಸಿದ್ದಾರೆ:

ಅಪವಾದವೆಂಬಂತೆ ಒಬ್ಬರ ಹೆಸರನ್ನು ಇಲ್ಲಿ ಉಲ್ಲೇಖಿಸಲೇಬೇಕು. ದಲಿತ ಜಾತಿಯವರೇ ಆದ ಮಾದಿಗರ ನಾಯಕ ಸಕಟ್ ಅವರ ಧೋರಣೆ ಉಳಿದ ದಲಿತ ನಾಯಕರಿಗಿಂತ ಯಾವತ್ತೂ ಬೇರೆಯೇ ಆಗಿರುತ್ತದೆ. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ಉಳಿದ ದಲಿತರು ತಮ್ಮ ವಿಚಾರಗಳನ್ನು ತಾವೇ ತಿಳಿದು ಯೋಚಿಸಿ ಪ್ರಕಟಿಸುತ್ತಾರೆ. ಆದರೆ ಸಕಟರ ವಿಚಾರಗಳು ಮಾಟೆ ಮಾಸ್ತರರ ಕಡೆಯಿಂದ ಬರುತ್ತವೆ.

ಅಸ್ಪಶ್ಯತಾ ನಿವಾರಣೆಯ ತೋರಿಕೆಯನ್ನು ಮೆರೆಯುವ ಬ್ರಾಹ್ಮಣರ ಪೈಕಿ ಮಾಟೆ ಮಾಸ್ತರರು ಒಬ್ಬರು. ಸಕಟರು ಯಾವಾಗ ನೋಡಿದರೂ ಬ್ರಾಹ್ಮಣರೇ ನಮ್ಮ ದೈವ, ಬ್ರಾಹ್ಮಣೇತರರೇ ನಮ್ಮ ನಿಜವಾದ ಶತ್ರುಗಳು ಅನ್ನುವ ಬ್ರಹ್ಮಘೋಷಣೆ ಮಾಡುತ್ತಿರುತ್ತಾರೆ. ಬ್ರಾಹ್ಮಣೇತರರು ನಮ್ಮ ಏಳಿಗೆಗೆ ಅಡ್ಡ ಬರುತ್ತಿದ್ದಾರೆ ಎನ್ನುವುದನ್ನು ನಾವು ಒಪ್ಪುತ್ತೇವೆ. ಆದರೆ ಬ್ರಾಹ್ಮಣರು ಯಾವತ್ತೂ ಅಡ್ಡಬರಲಾರರು ಎಂದು ಪ್ರಾಮಾಣಿಕವಾಗಿ ಹೇಳಲಾರೆ. ತಮ್ಮ ನಾಯಕರ ಹೆಸರಿನ ಜಪ ಮಾಡುತ್ತಾ ಸಕಟರು ತಮ್ಮ ನಾಯಕರಲ್ಲಿ ಎಷ್ಟು ತಲ್ಲೀನರಾಗಿದ್ದಾರೆಂದರೆ ತಮ್ಮ ಏಳಿಗೆ ಯಾವುದರಲ್ಲಿದೆ ಎಂದು ಯೋಚಿಸುವಷ್ಟು ಆತ್ಮೀಯತೆ ಅವರಲ್ಲುಳಿದಿಲ್ಲ ಅನ್ನುವುದು ಕಾಣುತ್ತಿದೆ.

ಭಾಲ್ಯಾನ 2.5.1927ರ ಸಂಚಿಕೆಯಲ್ಲಿ ಮಾದಿಗರ ನಾಯಕನೊಬ್ಬ ಒಂದು ಪತ್ರ ಬರೆದಿದ್ದಾನೆ. ಹೊಲೆಯರು ಮಾದಿಗರನ್ನು ಕಾಲಕಸದಂತೆ ಕಾಣುತ್ತಾರೆ, ಅವರ ಹೆಂಗಸರು ನಮ್ಮ ಹೆಂಗಸರನ್ನು ಬಾವಿಯಿಂದ ನೀರು ಸೇದಗೊಡುವುದಿಲ್ಲ ಹಾಗೂ ಅವರ ಗಂಡಂದಿರು ನಾವು ಕುದುರೆಯೇರಿ ದಾರಿಯಲ್ಲಿ ಹೋಗಗೊಡುವುದಿಲ್ಲ. ಹಾಗಾಗಿ ಹೊಲೆಯರು ಮಾದಿಗರನ್ನು ಮೊದಲು ಸಮವಾಗಿ ನೋಡಿಕೊಳ್ಳಲಿ. ಆಮೇಲೆ ಬ್ರಾಹ್ಮಣರ ಜೊತೆ ಸಮಾನತೆಗಾಗಿ ಹೋರಾಡಲಿ ಎಂದು ಆ ಪತ್ರದಲ್ಲಿ ಬರೆದಿದೆ. ಸಕಟರ ಹೊಲೆಯರ ಮೇಲಿನ ಆರೋಪ ನಿಜವಾಗಿದ್ದಿರಬಹುದು. ಆದರೆ ಅದರಿಂದಲೇ ಚೌದಾರ್ ಕೆರೆಯ ನೀರು ತುಂಬುವ ಹಕ್ಕು ಹಾಗೂ ಇತರ ಸಾರ್ವಜನಿಕ ಹಕ್ಕುಗಳನ್ನು ಪಡೆಯುವ ಅಧಿಕಾರ ಹೊಲೆಯರಿಗಿಲ್ಲ ಅನ್ನುವ ಅವರ ಮಾತು ಚಿಕ್ಕ ಮಕ್ಕಳಂತಿದೆ. ಮನೆಯ ಒಡೆಯ ನನ್ನನ್ನು ಅವನ ಮನೆಯ ಒಳಗಡೆ ಬರಗೊಡಲಿಲ್ಲ. ಹಾಗಾಗಿ ಅವನನ್ನು ಅವನ ಮನೆಯೊಳಗೇ ನಾನು ಸೇರಿಸಲಿಲ್ಲ ಎಂದೇನಾದರೂ ಪಕ್ಕದ ಮನೆಯವನೊಬ್ಬ ತಕರಾರು ತೆಗೆದರೆ ಅವರ ಮಾತನ್ನು ಕೇಳಿಸಿಕೊಂಡ ಜನ ಅವನ ಬಗ್ಗೆ ಸಹಾನುಭೂತಿ ತಾಳುವುದನ್ನು ಬಿಟ್ಟು ಅವನ ಮುಖವನ್ನೇ ಒಡೆದಾರು.

ಹೊಲೆಯರ ವಿರುದ್ಧ ಮಾದಿಗರು ಇಂತಹ ತಕರಾರೆತ್ತಿ ಹೊಲೆಯರಿಗೆ ಸಿಗುತ್ತಿರುವ ಹಕ್ಕುಗಳನ್ನು ತಾವು ಕಿತ್ತುಕೊಳ್ಳಬಲ್ಲೆವು ಎಂದೇನಾದರೂ ಸಕಟ್ ಅವರು ಅಂದುಕೊಂಡಿದ್ದರೆ ಸಕಟ್ ಒಬ್ಬ ಮೂರ್ಖ ಮನುಷ್ಯ ಎಂದೇ ಅನ್ನಿಸಿಕೊಳ್ಳುತ್ತಾರೆ. ಹೊಲೆಯರೇನಾದರೂ ಅನ್ಯಾಯ ಮಾಡುತ್ತಿದ್ದರೆ ಅವರನ್ನು ಸರಿದಾರಿಗೆ ತರುವ ಕೆಲಸ ಸಕಟ್ ಅವರು ಮಾಡಲಿ. ಹೊಲೆಯರ ನಾಯಕರು ಇವರಿಗೆ ಸಂಪೂರ್ಣ ಸಹಾಯ ಮಾಡಿಯಾರು ಅನ್ನುವ ಭಾಷೆಯನ್ನು ನಾವು ಕೊಡುತ್ತೇವೆ. ಆದರೆ ಹೊಲೆಯರು ನಮ್ಮನ್ನು ಒಡಹುಟ್ಟಿದವರಂತೆ ನೋಡಿಕೊಳ್ಳುವುದಿಲ್ಲ ಅಂದುಕೊಂಡು ಬ್ರಾಹ್ಮಣರೊಡಗೂಡಿ ಹೊಲೆಯರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದರೆ ಮಾತ್ರ ಅದು ಸಫಲವಾಗಲಿಕ್ಕಿಲ್ಲ ಅನ್ನುವುದನ್ನೂ ಮೊದಲೇ ಹೇಳಿಬಿಡುತ್ತೇನೆ.

ಕೇವಲ ಮಾದಿಗರ ಏಳಿಗೆಯ ದೃಷ್ಟಿಯಿಂದ ಯೋಚಿಸಿದರೂ ಹೊಲೆಯರು ತಮ್ಮನ್ನು ಆತ್ಮೀಯತೆಯಿಂದ ಕಾಣುವುದಿಲ್ಲ ಅನ್ನುವ ಕಾರಣದಿಂದ ಮಾದಿಗರು ಬ್ರಾಹ್ಮಣರ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಮುಂದಾಗಿರುವುದು ಜಾಣತನದ ಲಕ್ಷಣವಲ್ಲ. ಚೌದಾರ್ ಕೆರೆಯಿಂದ ನೀರು ತುಂಬುವುದು ಪ್ರತಿಯೊಬ್ಬ ದಲಿತನ ಹಕ್ಕಾಗಿದೆ. ಆ ಹಕ್ಕನ್ನು ಪಡೆಯಲು ಪ್ರತಿಯೊಬ್ಬ ದಲಿತನಿಗೂ ತಮ್ಮ ಸರ್ವಸ್ವವನ್ನು ಖರ್ಚು ಮಾಡಬೇಕಿದೆ. ಹೊಲೆಯರೇನಾದರೂ ಎಲ್ಲರ ಕೆಲಸಕ್ಕಾಗಿ ನಾವೇ ಯಾಕೆ ಹೋರಾಡಬೇಕು ಎಂದು ಮಾದಿಗರಿಗೆಂದರೆ ತಪ್ಪಾಗಲಾರದು. ಅಲ್ಲದೆ ನಾವು ನಮ್ಮ ಪ್ರಯತ್ನದಿಂದ ತೆರವುಮಾಡಿಕೊಂಡ ಕೆರೆಯನ್ನು ಉಪಯೋಗಿಸಿದ ಮೇಲೆ ಹಕ್ಕು ತೋರಿಸುವವರು ನೀವ್ಯಾರು? ಎಂದು ಹೊಲೆಯರು ಮಾದಿಗರನ್ನು ಅಣಕಿಸಬಹುದಾದರೂ ಹೊಲೆಯರು ಹಾಗೆಂದು ತೋರಿಸಿಕೊಂಡಿಲ್ಲ.

ಎಲ್ಲ ದಲಿತರ ಹಕ್ಕನ್ನು ಸ್ಥಾಪಿಸಲು ಹೊಲೆಯರು ತಮ್ಮ ನೆತ್ತರು ಹರಿಸಿದರು ಅನ್ನುವುದು ಹೊಲೆಯರು ಮಾದಿಗರ ಮೇಲೆ ಮಾಡಿದ ಉಪಕಾರವಲ್ಲದೆ ಇನ್ನೇನು? ಆದರೆ ತಮ್ಮ ಏಳಿಗೆಯ ಬಗ್ಗೆ ಯೋಚಿಸುವುದನ್ನು ಬಿಟ್ಟು ಬ್ರಾಹ್ಮಣರ ಏಳಿಗೆಯ ಬಗ್ಗೆ ಯೋಚಿಸುವುದರಲ್ಲೇ ಮಗ್ನರಾಗಿರುವ ಮಾದಿಗರ ನಾಯಕರಿಗಿದು ಅರ್ಥವಾಗುವುದಾದರೂ ಯಾವಾಗ? ಆತ ನಿಜವಾದ ಮಾದಿಗನೇ ಆಗಿದ್ದರೆ ಹೊಲೆಯರೊಡನೆ ಸಮಾನ ಹಕ್ಕುಗಳಿಗಾಗಿ ಹೋರಾಡುವುದಕ್ಕಿಂತ ಆತ ಬ್ರಾಹ್ಮಣರ ವಿರುದ್ಧ ಹೋರಾಡಬೇಕಿತ್ತು. ಒಬ್ಬ ಹೊಲೆಯನೊಡನೇನಾದರೂ ಸಕಟರ ನಿಕಟ ಸಂಬಂಧವಿದ್ದಿದ್ದರೆ ಹೆಚ್ಚೆಚ್ಚು ಅಂದರೆ ಮಾದಿಗರು ಹೊಲೆಯರ ಸಮಾನ ದರ್ಜೆ ಪಡೆಯುತ್ತಿದ್ದರು.

ಆದರೆ ಸಕಟರ ನಿಕಟ ಸಂಬಂಧ ಭಾಲಾಕಾರರ ಜಾತಿ ಬಾಂಧವರೊಡನೆ ಇರುವುದರಿಂದ ಹೊಲೆಯರಿಗಿಂತ ಮಾದಿಗರು ಶ್ರೇಷ್ಠರಾಗುತ್ತಾರೆ ಅನ್ನುವುದು ಖಚಿತ. ಹಾಗಾಗಿ ಯಾವುದರಿಂದ ಹೊಲೆಯರಿಗಿಂತ ಶ್ರೇಷ್ಠವಾಗಬಹುದು ಎಂದು ಯೋಚಿಸುವುದನ್ನು ಬಿಟ್ಟು ಸಾರ್ವಜನಿಕ ನೀರಿನ ಸ್ಥಳಗಳನ್ನು ದಲಿತರಿಗೆ ತೆರವು ಮಾಡಿಕೊಡುವ ಕೆಲಸವನ್ನು ಸಕಟ್ ಅವರು ವಿರೋಧಿಸುತ್ತಿದ್ದಾರೆ ಅನ್ನುವುದು ಯಾವುದರ ಲಕ್ಷಣ? ಬಹುಶಃ ಇದು ಪರವಶತೆಯ ಲಕ್ಷಣವಿರಬೇಕು. ಸಕಟ್ ಅವರು ಪುಣೆಯಲ್ಲಿ ಬ್ರಾಹ್ಮಣರು ಸ್ಥಾಪಿಸಿರುವ ಅಸ್ಪಶ್ಯತಾ ನಿವಾರಣೆಯ ಮಂಡಳಿಯಲ್ಲಿ ಸಂಬಳಕ್ಕೆ ಕೆಲಸ ಮಾಡುವ ಪ್ರಚಾರಕರು.

ಸಕಟರು ಭಿಕ್ಷೆ ಬೇಡಿ ಅಥವಾ ‘‘ದೇ ದಾನ್ ಸುಟೇ ಗಿರಾನ್ (ಗ್ರಹಣ ಬಿಟ್ಟಿದೆ, ದಾನ ಮಾಡಿ)’’ (ಗ್ರಹಣ ಬಿಟ್ಟ ಮೇಲೆ ಭಿಕ್ಷೆ ಬೇಡುವಾಗ ಹೇಳುವ ಮಾತು) ಅನ್ನುತ್ತ ಸ್ವತಂತ್ರವಾಗಿ ವಾಸಿಸುವುದನ್ನು ನಿರ್ಧರಿಸಿದ್ದರೆ ಅವರಿಗೆ ತಮ್ಮ ಮಾದಿಗ ಜಾತಿಯವರ ಪರ ವಹಿಸಲು, ಅವರ ಪರ ನಿರ್ಭಿಡೆಯಿಂದ ಮಾತನಾಡುವ ಅವಕಾಶ ಸಿಗುತ್ತಿತ್ತು. ಆದರೆ ಬ್ರಾಹ್ಮಣರ ಉಪ್ಪು ತಿಂದು ಈಗ ಅವರ ಏಳಿಗೆಯ ವಿರುದ್ಧ ಮಾತನಾಡುವುದು ಸಕಟ್ ಅವರಿಂದ ಸಾಧ್ಯವಾಗದ ಮಾತು. ಬ್ರಾಹ್ಮಣರು ಬೆಳೆಸಿರುವ ದಲಿತರ ಯಾವುದೇ ಮನುಷ್ಯ ನಾಯಕತ್ವ ಸ್ವೀಕರಿಸಲು ಅಸಮರ್ಥ ಅನ್ನುವುದು ನಮ್ಮ ವಿಚಾರ.

ಇದೇ ನ್ಯಾಯ ನಾಯಕರೆನಿಕೊಳ್ಳುವ ಸಕಟರಿಗೂ ಅನ್ವಯಿಸುತ್ತದೆ. ಇದನ್ನು ಅರಿತೋ ಏನೋ ಕೆಲವು ದಿನಗಳ ಹಿಂದೆ ಆರಂಭಿಸಿರುವ ‘ಮಾದಿಗರ ಬಂಧು’ ಅನ್ನುವ ಪತ್ರಿಕೆಯಲ್ಲಿ ಸಕಟ್ ಅವರು ಮಾದಿಗರ ನಾಯಕ ಇನ್ನೂ ಹುಟ್ಟಿಲ್ಲ, ಹುಟ್ಟುವವನಿದ್ದಾನೆ ಎಂದು ಹೇಳಿದರು. ಅವರ ಈ ಹೇಳಿಕೆ ನಿಜವಾಗಲಿ ಎಂದು ಆಶಿಸುತ್ತೇವೆ. ಆದರೆ ಆ ನಾಯಕರು ಮಾತ್ರ ಬರುವಾಗ ತಮ್ಮ ಹೆತ್ತವರಿಂದ ಸಾಕಷ್ಟು ಅನುಭವಗಳ ಬುತ್ತಿ ತರಲಿ ಅನ್ನುವುದೇ ನಮ್ಮ ಆಸೆ. ಇಲ್ಲವಾದರೆ ಹೊಟ್ಟೆಗಾಗಿ ತಮ್ಮ ಬುದ್ಧಿ ಮಾರುವ ಸಮಯ ಪಾಪ ಅವರ ಮೇಲೆರಗೀತು.

ಭಾಲಾಕಾರರಂತೆ ಎಲ್ಲರೂ ತಿಳಿಗೇಡಿಗಳಲ್ಲ ಎಂದು ಒಪ್ಪಿಕೊಳ್ಳಲು ನಮಗೆ ಸಂತೋಷವಾಗುತ್ತದೆ. ಮತ್ತೊಂದು ಕಡೆ ನಾವು ಪತ್ರ ಪ್ರಕಟಿಸಿರುವ ಬ್ರಾಹ್ಮಣರಿಬ್ಬರಿಗೂ ಮಹಾಡ್‌ನಲ್ಲಾದ ಪ್ರಸಂಗದಿಂದ ಹಿಂದೂ ಸಮಾಜದ ಮೇಲೆ ಯಾವ ರೀತಿಯ ಪರಿಣಾಮಗಳಾಗಬಹುದು ಅನ್ನುವುದು ಭಾಲಾಕಾರರಿಗಿಂತ ಚೆನ್ನಾಗಿ ಗೊತ್ತಿದೆ. ಹಾಗಾಗಿಯೆ ಅವರ ಮಾತಿಗೆ ವಿಶೇಷ ಮನ್ನಣೆ ಕೊಡಬೇಕೆಂದು ಅನ್ನಿಸುತ್ತಿದೆ. ಹಿಂದೂ ಸಮಾಜದಲ್ಲಿದ್ದುಕೊಂಡೇ ನಾವು ಆದಷ್ಟು ನಮ್ಮ ಏಳಿಗೆಯನ್ನು ಸಾಧಿಸಿಕೊಳ್ಳಬೇಕು ಅನ್ನುವ ಈ ಇಬ್ಬರು ಗೆಳೆಯರ ಅನಿಸಿಕೆಯನ್ನು ನಾವು ಒಪ್ಪುತ್ತೇವೆ ಹಾಗೂ ಬ್ರಾಹ್ಮಣರು ಹಾಗೂ ದಲಿತರಲ್ಲಿ ಸಮಾನತೆ ಬೆಳೆಯದಿದ್ದರೆ ದಲಿತರು ಧರ್ಮಾಂತರಗೊಳ್ಳದೆ ಇರಲಾರರು ಅನ್ನುವುದನ್ನು ನಮ್ಮಂತೆ ಆ ಗೆಳೆಯರೂ ಒಪ್ಪುತ್ತಾರೆ. ಹೀಗಿರುವಾಗ ನಮಗೆ ‘ರಾಮ್‌ರಾಮ್’ ಎಂದು ಅಭಿವಾದಿಸುವುದು ಯೋಗ್ಯವೇ? ಅನ್ನುವ ಪ್ರೀತಿಯ ಪ್ರಶ್ನೆಯನ್ನು ನಾವು ಆ ಗೆಳೆಯರಿಗೆ ಕೇಳುತ್ತೇವೆ.

ನಮ್ಮ ಅನಿಸಿಕೆಯ ಪ್ರಕಾರ ಒಂದೋ ಅವರು ನಮಗೆ ನಮಸ್ಕರಿಸಬೇಕಿತ್ತು, ಇಲ್ಲವೆ ‘ಜೋಹಾರ್’ ಅನ್ನಬೇಕಿತ್ತು (ಜೋಹಾರ್ ಅನ್ನುವುದು ಹೊಲೆಯರ ಜಾತಿಯವರು ನಮಸ್ಕಾರ ಮಾಡುವ ಪ್ರಕಾರ, ಯಾರಿಗಾದರೂ ನಮಸ್ಕರಿಸುವಾಗ ಹೊಲೆಯರು ‘ಜೋಹಾರ್ ಮಾಯ್‌ಬಾಪ್’ ಅನ್ನುತ್ತಾರೆ.) ಇವೆರಡಕ್ಕೆ ಸ್ವಲ್ಪವಾದರೂ ಅರ್ಥವಿದೆ. ಆದರೆ ‘ರಾಮ್‌ರಾಮ್’ ಅನ್ನುವ ಹೆಣದ ಯಾತ್ರೆಯ ಶಬ್ದವನ್ನವರು ನಮ್ಮ ಬಗ್ಗೆ ಉಪಯೋಗಿಸಬಾರದಿತ್ತು. ಅದು ಮರಾಠರಿಗೇ ಶೋಭಿಸುವಂತಹದ್ದು. ದಲಿತರಿಗಲ್ಲ. ಅವರು ತಮ್ಮ ಕ್ಷತ್ರಿಯತ್ವವನ್ನು ‘ಜೋಹಾರ್’ನಂತಹ ಅಭಿನಂದನಾಪರ ಶಬ್ದಗಳಲ್ಲಿ ಕಾಪಾಡಿಕೊಂಡಿದ್ದಾರೆ.

ಈ ವಿಷಯದಲ್ಲಿ ನಾವು ಮಾಡುತ್ತಿರುವ ಹಠ ಮಕ್ಕಳಾಟದಂತಿದೆ ಎಂದು ಮಾತ್ರ ಈ ಗೆಳೆಯರು ಅಂದುಕೊಳ್ಳದಿರಲಿ. ಇಂದು ಬ್ರಾಹ್ಮಣರ ಅಹಂಕಾರವೇ ಹಿಂದೂ ಸಂಘಟನೆಗೆ ಅಡ್ಡ ಬರುತ್ತಿದೆ. ಈ ಆಹಂಕಾರ ಈ ಗೆಳೆಯರಿಬ್ಬರಲ್ಲೂ ಇದೆ ಅನ್ನುವುದನ್ನವರು ನಮಗೆ ನಮಸ್ಕಾರ ಹೇಳದೆ ‘ರಾಮ್ ರಾಮ್’ ಎಂದು ಹೇಳಿ ತೋರಿಸಿಕೊಟ್ಟಿದ್ದಾರೆ. ಬ್ರಾಹ್ಮಣರನ್ನು ಬಿಟ್ಟು ಇನ್ಯಾರಿಗೂ ನಮಸ್ಕಾರ ಹೇಳಬಾರದು ಅನ್ನುವ ರೂಢಿ ಈ ಅಹಂಕಾರದಿಂದ ವ್ಯಕ್ತವಾಗುತ್ತದೆ. ಹಾಗೂ ಬ್ರಾಹ್ಮಣ ನಿಲುವು ಕೂಡ ಅದರಲ್ಲೇ ಅಡಗಿದೆ.

ನಮ್ಮ ಗೆಳೆಯರು ಬೇಕೆಂದೇ ಈ ತಪ್ಪು ಮಾಡಿಲ್ಲ, ಅದು ಅಭ್ಯಾಸಬಲದಿಂದ ಆಗಿರುವುದಷ್ಟೆ ಅನ್ನುವುದನ್ನು ನಾವು ಬಲ್ಲೆವು. ಆದರೆ ತಮ್ಮ ಶ್ರೇಷ್ಠತನವನ್ನು ಬಿಟ್ಟು ಉಳಿದವರೊಂದಿಗೆ ಸಮಾನತೆಯಿಂದ ವರ್ತಿಸಬೇಕು ಎಂದು ಯಾವ ಬ್ರಾಹ್ಮಣರಿಗೆ ಅನ್ನಿಸುತ್ತದೆಯೋ ಅವರು ಅಹಂಕಾರ ಪ್ರದರ್ಶಿಸುವ ಇಂತಹ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕು. ಹಾಗೆ ನೋಡಿದರೆ ವಿಷಯ ಬಹಳ ಚಿಕ್ಕದು. ಆದರೆ ಅದರ ಪರಿಣಾಮ ಸಾಕಷ್ಟು ದೊಡ್ಡದಾದ್ದರಿಂದ ಅದನ್ನು ಚರ್ಚಿಸಬೇಕಾಗಿ ಬಂತು. ಬ್ರಾಹ್ಮಣ ನಿಲುವನ್ನು ತ್ಯಾಗಮಾಡಲಿಚ್ಛಿಸುವ ಜನರಿಗೂ ಬ್ರಾಹ್ಮಣ ನಿಲುವನ್ನು ಬೇರು ಸಹಿತ ನಷ್ಟಮಾಡುವುದು ಎಷ್ಟು ಕಷ್ಟ ಅನ್ನುವುದು ಇದರಿಂದ ಅರ್ಥವಾಗುತ್ತದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News