ಹಳಿ ತಪ್ಪಿದ ವಾಸ್ಕೊ- ಪಾಟ್ನಾ ರೈಲು: ಮೂರು ಸಾವು

Update: 2017-11-24 03:38 GMT

ಲಕ್ನೋ, ನ.24: ವಾಸ್ಕೋ ಡಾ ಗಾಮಾದಿಂದ ಪಾಟ್ನಾಕ್ಕೆ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲು ಉತ್ತರ ಪ್ರದೇಶ ಬಂದಾ ಎಂಬ ಪ್ರದೇಶದ ಬಳಿ ಶುಕ್ರವಾರ ಮುಂಜಾನೆ ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಮಾಣಿಕಪುರ ರೈಲು ನಿಲ್ದಾಣದ ಬಳಿ ವಾಸ್ಕೋ- ಪಾಟ್ನಾ ಎಕ್ಸ್‌ಪ್ರೆಸ್ ರೈಲಿನ 13 ಬೋಗಿಗಳು ಹಳಿ ತಪ್ಪಿವೆ. ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಮಾಣಿಕಪುರ ರೈಲು ನಿಲ್ದಾಣದ ಬಳಿ ಮುಂಜಾನೆ 4:18ಕ್ಕೆ ಈ ದುರಂತ ಸಂಭವಿಸಿದೆ. ರೈಲ್ವೆ ಕ್ರಾಸಿಂಗ್‌ನಲ್ಲಿ ಬೊಲೆರೊ ಮತ್ತು ಪ್ರಯಾಣಿಕರ ರೈಲು ಢಿಕ್ಕಿ ಹೊಡೆದು ನಾಲ್ಕು ಮಂದಿಯನ್ನು ಬಲಿ ಪಡೆದ ದುರಂತ ಸಂಭವಿಸಿ 12 ಗಂಟೆಯೊಳಗೆ ಮತ್ತೊಂದು ದುರಂತ ನಡೆದಿದೆ.

ಮಾಣಿಕ್‌ಪುರ ರೈಲು ನಿಲ್ದಾಣದಿಂದ ಮುಂಜಾನೆ 4:18ಕ್ಕೆ ಹೊರಡುವ ವೇಳೆ 13 ಬೋಗಿಗಳು ಹಳಿ ತಪ್ಪಿವೆ ಎಂದು ಎನ್‌ಸಿಆರ್ ಪ್ರದೇಶದ ಸಿಪಿಆರ್‌ಓ ಗೌರವ್ ಕೃಷ್ಣ ಬನ್ಸಾಲ್ ಹೇಳಿಕೆ ನೀಡಿದ್ದಾರೆ.

ಸ್ಥಳೀಯ ಅಂದಾಜಿನ ಪ್ರಕಾರ, ರೈಲು ಹಳಿಯಲ್ಲಿ ಇದ್ದ ಬಿರುಕು ಇದಕ್ಕೆ ಕಾರಣ ಎಂದು ಉತ್ತರ ಪ್ರದೇಶದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಕಟಿಸಿದ್ದಾರೆ.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಉತ್ತರ ಕೇಂದ್ರ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಮಾಳವೀಯ ವಿವರಿಸಿದ್ದಾರೆ. ಅಪಘಾತ ನಡೆದ ಒಂದು ಗಂಟೆಯಲ್ಲಿ ವೈದ್ಯಕೀಯ ಚಿಕಿತ್ಸಾ ರೈಲು ಸ್ಥಳಕ್ಕೆ ಆಗಮಿಸಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News