ಪ್ರಧಾನಿ ಮೋದಿಯನ್ನು ‘ಚಾಯ್‌ವಾಲಾ’ ಎಂದು ಟೀಕಿಸಿದ ಬಿಜೆಪಿಯ ಮುಖಂಡ ಶತ್ರುಘ್ನ ಸಿನ್ಹಾ!

Update: 2017-11-24 07:55 GMT

ಹೊಸದಿಲ್ಲಿ, ನ.24: ಇತ್ತೀಚೆಗೆ ಗುಜರಾತ್ ಕಾಂಗ್ರೆಸ್‌ನ ಯುವ ಘಟಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಚಾಯ್‌ವಾಲಾ’ ಎಂಬ ಪದ ಬಳಸಿ ಎಲ್ಲೆಡೆಯಿಂದ ಟೀಕೆಗೆ ಗುರಿಯಾಗಿತ್ತು. ಇದೀಗ ಬಿಜೆಪಿಯ ಹಿರಿಯ ನಾಯಕ ಶತ್ರುಘ್ನ ಸಿನ್ಹಾ, ಪ್ರಧಾನಿಯ ‘ಸಾಮರ್ಥ್ಯ’ವನ್ನು ಟೀಕಿಸುವ ಭರದಲ್ಲಿ ಚಾಯ್‌ವಾಲಾ ಪದವನ್ನು ಬಳಸಿದ್ದಾರೆ.

ಬಿಜೆಪಿ ಸಂಸದ ಹಾಗೂ ಹಿಂದಿ ಚಿತ್ರನಟನಾಗಿರುವ ಸಿನ್ಹಾ ಪಕ್ಷದ ಸಹೋದ್ಯೋಗಿಗಳಾದ ಸ್ಮತಿ ಇರಾನಿ ಹಾಗೂ ಅರುಣ್ ಜೇಟ್ಲಿ ಅವರನ್ನು ಟೀಕಿಸಿದ್ದಾರೆ.

‘‘ವಕೀಲ್ ಬಾಬು(ಮಿಸ್ಟರ್ ಲಾಯರ್)ಹಣಕಾಸಿನ ಬಗ್ಗೆ ಮಾತನಾಡಬಹುದು. ಟಿವಿ ನಟಿ (ಇರಾನಿ)ದೇಶದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆಯಾಗಬಹುದು. ಚಾಯ್‌ವಾಲಾ ದೇಶದ ಪ್ರಧಾನಿ ಆಗಬಹುದು...ನಾನು ಏಕೆ ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಬಾರದು’’ ಎಂದು ಬುಧವಾರ ನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನ್ಹಾ ಪ್ರಶ್ನಿಸಿದ್ದರು.

‘‘ನೋಟು ನಿಷೇಧದ ಬಳಿಕ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡರು. ಫ್ಯಾಕ್ಟರ್‌ಗಳು ಬಂದ್ ಆಗಿವೆ. ಸಣ್ಣ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾವು ಯುವಕರ ಬಗ್ಗೆ ಬಡವರ ಬಗ್ಗೆ ಮಾತನಾಡಬಾರದೆಂದು ಹೇಳುತ್ತಾರೆ. ನಾನು ರಾಜಕೀಯದಲ್ಲಿದ್ದ ಏನು ಮಾಡಬೇಕು’’ ಎಂದು ಪ್ರಶ್ನಿಸಿದರು.

 ‘‘ದೇಶದಲ್ಲಿ ಏನಾಗುತ್ತಿದೆ? ದನ ಸಾಗಾಟಗಾರರನ್ನು ಜನರು ಹತ್ಯೆಗೈಯುತ್ತಿದ್ದಾರೆ. ಪ್ರಗತಿಪರರು, ಬರಹಗಾರರು, ಪತ್ರಕರ್ತರು....ಇದೀಗ ನ್ಯಾಯಾಧೀಶರನ್ನು ಹತ್ಯೆಗೈಯ್ಯಲಾಗುತ್ತಿದೆ. ನನ್ನನ್ನು ಸಚಿವನಾಗಿ ಮಾಡಲಾಗಿಲ್ಲ ಎಂಬ ಕಾರಣಕ್ಕೆ ಬಿಜೆಪಿಯನ್ನು ಟೀಕಿಸುತ್ತಿದ್ದೇನೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ನಾನು ಬಿಜೆಪಿಯನ್ನು ತ್ಯಜಿಸಬೇಕೆಂದು ಸೇರಿಲ್ಲ. ನಾವು ವನ್ ಮ್ಯಾನ್ ಆರ್ಮಿ ಹಾಗೂ ಟು ಮ್ಯಾನ್ ಆರ್ಮಿಯೊಂದಿಗೆ ಮುಂದುವರಿದರೆ ನಮ್ಮ ಸವಾಲನ್ನು ಪೂರೈಸಲು ಸಾಧ್ಯವಿಲ್ಲ’’ ಎಂದು ಸಿನ್ಹಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News