ಧರ್ಮ ಸಂಸದ್‌ಗೆ ಉತ್ತರವಾದ ಕನ್ನಡ ನುಡಿ ಹಬ್ಬ

Update: 2017-11-25 04:31 GMT

ಕನ್ನಡ ನೆಲದಲ್ಲಿ ಒಂದೇ ದಿನ ಎರಡು ಸಮಾರಂಭಗಳು ಉದ್ಘಾಟನೆಗೊಂಡವು. ಮೈಸೂರಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೊಳ್ಳುವ ಹೊತ್ತಿಗೇ, ಇತ್ತ ಉಡುಪಿಯಲ್ಲಿ ಸಂಘಪರಿವಾರ ಮುಖಂಡರ ನೇತೃತ್ವದಲ್ಲಿ ‘ಧರ್ಮಸಂಸದ್’ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಇಂದು ಕನ್ನಡ ಭಾಷೆ, ಸಂಸ್ಕೃತಿ ಮುಖಾಮುಖಿಗೊಳ್ಳುತ್ತಿರುವ ಆತಂಕಗಳಿಗೆ ರೂಪಕದಂತಿವೆ ಈ ಎರಡು ಸಮಾರಂಭಗಳು. ದೇಶದ ವಿವಿಧ ಸಂಘಪರಿವಾರ ನಾಯಕರು ಧರ್ಮದ ಹೆಸರಲ್ಲಿ ರಾಮಜನ್ಮಭೂಮಿ, ಅಯೋಧ್ಯೆಯ ಗದ್ದಲವನ್ನು ಬಿತ್ತಿ ದೇಶವನ್ನು ಒಡೆಯುವುದು ಒಂದು ಕಾರ್ಯಕ್ರಮದ ಉದ್ದೇಶವಾಗಿದ್ದರೆ, ಈ ನೆಲದ ಸಂಸ್ಕೃತಿ, ಭಾಷೆ, ಮೌಲ್ಯಗಳನ್ನು ಎತ್ತಿ ಹಿಡಿದು ನಾಡಿನ ಜನತೆಯನ್ನು ಬೆಸೆಯುವುದು ಇನ್ನೊಂದು ಕಾರ್ಯಕ್ರಮದ ಉದ್ದೇಶ. ಒಂದು ಕಾರ್ಯಕ್ರಮ ಹಿಂದಿ ಪಾರಮ್ಯವನ್ನು ಹೊಂದಿದ್ದರೆ, ಇನ್ನೊಂದು ಕನ್ನಡತನದ ಅಸ್ಮಿತೆಯ ಮೇಲೆ ನಿಂತಿರುವುದು.

ಧರ್ಮ ಸಂಸದ್ ಕಾರ್ಯಕ್ರಮದ ಅಂತಿಮ ಉದ್ದೇಶ ಒಂದು ಭಾಷೆ, ಒಂದು ಧರ್ಮ ಎಂದಾದರೆ, ಮೈಸೂರಿನ ಕನ್ನಡ ಉತ್ಸವದ ಗುರಿ ಈ ದೇಶದ ಬಹುಸಂಸ್ಕೃತಿ, ಬಹುಭಾಷೆಯ ಹಿರಿಮೆಯನ್ನು ಸಾರುವುದಾಗಿದೆ. ಒಂದು, ವರ್ತಮಾನವನ್ನು ಕಾಡುತ್ತಿರುವ ಆತಂಕವಾಗಿದ್ದರೆ, ಇನ್ನೊಂದು ಆತಂಕಕ್ಕೆ ನಾವು ಕಂಡುಕೊಳ್ಳಬಹುದಾದ ಪರಿಹಾರವಾಗಿದೆ. ಮೈಸೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿರುವ ಹಿರಿಯ ಕನ್ನಡ ಚಳವಳಿಗಾರ, ಸಾಹಿತಿ, ಚಿಂತಕ ಚಂದ್ರಶೇಖರ ಪಾಟೀಲರು ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ, ಕನ್ನಡತನಕ್ಕೆ ಎದುರಾಗಿರುವ ಸವಾಲು ಮತ್ತು ಅದನ್ನು ಎದುರಿಸುವ ಮಾರ್ಗವನ್ನು ಅತ್ಯಂತ ಪರಿಣಾಮಕಾರಿಯಾಗಿ ಕನ್ನಡಿಗರ ಮುಂದಿಟ್ಟಿದ್ದಾರೆ. ಈವರೆಗೆ ‘ಸಾಮ್ರಾಜ್ಯಶಾಹಿ’ ಪದವನ್ನು ನಾವು ಇಂಗ್ಲಿಷರಿಗೂ ವಿದೇಶಿಯರಿಗೂ ಮಾತ್ರ ಬಳಸಿಕೊಂಡು ಬಂದಿದ್ದೇವೆ. ಆದರೆ ಮೊದಲ ಬಾರಿಗೆ ಸಮ್ಮೇಳನಾಧ್ಯಕ್ಷರಾದ ಚಂಪಾ ಅವರು ಹಿಂದಿಯ ಹೇರಿಕೆಯೂ ಇನ್ನೊಂದು ಬಗೆಯ ಸಾಮ್ರಾಜ್ಯಶಾಹಿ ಸಂಚಾಗಿದೆ ಎಂದು ಹೇಳಿದ್ದಾರೆ.

ಹಿಂದಿಯ ಹೇರಿಕೆ ಒಂದು ಭಾಷೆಗಷ್ಟೇ ಸೀಮಿತವಾಗಿಲ್ಲ. ಏಕ ಭಾಷೆಯನ್ನು ದೇಶಾದ್ಯಂತ ಜಾರಿಗೊಳಿಸುವ ಮೂಲಕ, ಈ ದೇಶದ ಬಹುತ್ವವನ್ನು ನಾಶ ಮಾಡುವ ಸಂಚೊಂದು ನಡೆಯುತ್ತಿದೆ ಎಂಬ ಎಚ್ಚರಿಕೆಯನ್ನು ನಾಡಿಗೆ ನೀಡಿದ್ದಾರೆ. ಸಾಧಾರಣವಾಗಿ ಸಮ್ಮೇಳನಾಧ್ಯಕ್ಷರು ಭಾಷಣದಲ್ಲಿ ರಾಜಕೀಯ ಚರ್ಚೆಯನ್ನು ಮಾಡುವುದು ಕಡಿಮೆ. ಮಾಡಿದರೂ ತೇಲು ಮಾತಿನಲ್ಲಿ. ಆದರೆ ಈ ಬಾರಿ ಚಂಪಾ, ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ರಾಜಕೀಯ ಮಾರ್ಗವನ್ನು ಪರಿಣಾಮಕಾರಿಯಾಗಿ ಬಳಸುವ ಅನಿವಾರ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಒಂದೆಡೆ ಕೇಂದ್ರ ಹಂತಹಂತವಾಗಿ ಒಕ್ಕೂಟ ವ್ಯವಸ್ಥೆಯನ್ನು ನಿಯಂತ್ರಿಸಲು ಯತ್ನಿಸುತ್ತಿದೆ. ತನ್ನೆಲ್ಲ ಶಕ್ತಿಯನ್ನು ಬಳಸಿಕೊಂಡು ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿಯನ್ನು ಹೇರಲು ಹೊರಟಿದೆ. ತಮಿಳು, ಬಂಗಾಳಿ, ತೆಲುಗು ಮೊದಲಾದವುಗಳು ಇದನ್ನು ಅಷ್ಟೇ ತೀವ್ರವಾಗಿ ಪ್ರತಿರೋಧಿಸುತ್ತಿವೆ. ಒಂದು ರೀತಿಯಲ್ಲಿ ಕೇಂದ್ರ ಸರಕಾರ ಈ ರಾಜ್ಯಗಳಿಗೆ ಅಂಜುತ್ತಿದೆ. ಆದರೆ ಕನ್ನಡ ಮಾತ್ರ ಸುಲಭದಲ್ಲಿ ಹಿಂದಿಗೆ ತುತ್ತಾಗುವಂತಹ ಸ್ಥಿತಿಯಲ್ಲಿದೆ. ಕನ್ನಡದ ಮೇಲೆ ಕೇಂದ್ರಕ್ಕೆ ಈ ನಿಯಂತ್ರಣ ಯಾಕೆ ಸಾಧ್ಯವಾಗುತ್ತಿದೆ ಎನ್ನುವುದನ್ನು ಅವರು ರಾಜಕೀಯ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ.

ಕರ್ನಾಟಕವನ್ನು ನಿಯಂತ್ರಿಸಿದಂತೆ ತಮಿಳುನಾಡು, ಆಂಧ್ರ, ಪಶ್ಚಿಮಬಂಗಾಳ, ಬಿಹಾರ ಮೊದಲಾದ ರಾಜ್ಯಗಳನ್ನು ಕೇಂದ್ರಕ್ಕೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಬದಲಿಗೆ, ಇವುಗಳೇ ಕೇಂದ್ರವನ್ನು ನಿಯಂತ್ರಿಸುವ ಸ್ಥಿತಿಯಲ್ಲಿವೆ. ಎಲ್ಲೆಲ್ಲ ಪ್ರಾದೇಶಿಕ ಪಕ್ಷಗಳು ಪಾರಮ್ಯವನ್ನು ಸಾಧಿಸಿ, ಆಡಳಿತ ನಡೆಸುತ್ತಿವೆಯೋ ಆ ಎಲ್ಲ ರಾಜ್ಯಗಳು ತಮ್ಮ ಬಹುತೇಕ ಹಿತಾಸಕ್ತಿಗಳನ್ನು ಕಾಪಾಡಲು ಯಶಸ್ವಿಯಾಗುತ್ತಿವೆ. ಕೇಂದ್ರದಲ್ಲಿರುವ ಸರಕಾರಕ್ಕೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅತ್ಯಗತ್ಯವಾಗಿ ಬೇಕಾಗುತ್ತದೆ. ಆದುದರಿಂದ ಇವರ ಓಲೈಕೆ ಅನಿವಾರ್ಯವಾಗಿದೆ. ಯಾವೆಲ್ಲ ರಾಜ್ಯಗಳನ್ನು ಪ್ರಾದೇಶಿಕ ಪಕ್ಷಗಳು ಆಳುತ್ತಿವೆಯೋ ಅವರೆಲ್ಲ ತಮ್ಮ ತಮ್ಮ ರಾಜ್ಯ, ಭಾಷೆಯ ಹಿತಾಸಕ್ತಿಯನ್ನು ಕಾಪಾಡಲು ಹೆಚ್ಚು ಶಕ್ತರಾಗಿರುವುದು ಇದೇ ಕಾರಣಕ್ಕೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವಿದೆ. ಸಿದ್ದರಾಮಯ್ಯರು ಪ್ರಾದೇಶಿಕ ವ್ಯಕ್ತಿತ್ವವನ್ನು ಹೊಂದಿದವರಾಗಿರುವುದರಿಂದ, ವೈಯಕ್ತಿಕ ವರ್ಚಸ್ಸು ಇರುವುದರಿಂದ ಅವರು ಕನ್ನಡದ ಹಿತಾಸಕ್ತಿಯನ್ನು ಬಿಟ್ಟುಕೊಡಲಾರರು ನಿಜ.

ಆದರೆ, ರಾಷ್ಟ್ರೀಯ ಪಕ್ಷಗಳು ಯಾವತ್ತೂ ದಿಲ್ಲಿಯ ನಿಯಂತ್ರಣದಲ್ಲಿರುತ್ತವೆ. ಇಂದು ರಾಜ್ಯವು ಅತ್ಯಧಿಕ ಬಿಜೆಪಿ ಸಂಸದರನ್ನು ಕೇಂದ್ರ ಸರಕಾರಕ್ಕೆ ನೀಡಿದೆಯಾದರೂ, ಮೋದಿ ನೇತೃತ್ವದ ಸರಕಾರದ ಮೇಲೆ ಕನ್ನಡದ ಹಿತಾಸಕ್ತಿಗೆ ಪೂರಕವಾಗಿ ಒತ್ತಡ ಹಾಕಲು ಅವರು ವಿಫಲರಾಗುತ್ತಿದ್ದಾರೆ. ಮಹಾದಾಯಿ, ಕಾವೇರಿ ಸೇರಿದಂತೆ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಹಿತಾಸಕ್ತಿಗಳಿಗೆ ಧಕ್ಕೆಯಾದಾಗ, ಕೇಂದ್ರ ಸರಕಾರದ ವಿರುದ್ಧ ಧ್ವನಿಯೆತ್ತಲು ಈ ಸಂಸದರು ಹಿಂದೇಟು ಹಾಕುತ್ತಾರೆ. ಬದಲಿಗೆ ಕೇಂದ್ರವನ್ನು ಸಮರ್ಥಿಸುವಂತಹ ಮಾತುಗಳನ್ನಾಡಿ, ಕನ್ನಡಕ್ಕೇ ವಂಚಿಸುತ್ತಾರೆ. ಇದು ಬಿಜೆಪಿಗೆ ಮಾತ್ರ ಸೀಮಿತ ಅಲ್ಲ, ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗಲೂ ಇಂತಹದೇ ಸಂಭವಿಸಿದೆ.

ಒಂದು ವೇಳೆ ಕರ್ನಾಟಕದಲ್ಲಿ ಸಮರ್ಥವಾದ ಪ್ರಾದೇಶಿಕ ಪಕ್ಷ ಆಡಳಿತ ನಡೆಸುತ್ತಿದ್ದರೆ, ಅವರ ಬೆಂಬಲದ ಆಸೆಯಿಂದಲಾದರೂ, ಕರ್ನಾಟಕದ ಪರವಾಗಿ ಕೇಂದ್ರ ಮಾತನಾಡುತ್ತಿತ್ತು. ಈ ಹಿನ್ನೆಲೆಯನ್ನಿಟ್ಟುಕೊಂಡು, ಕನ್ನಡದ ಹಿತಾಸಕ್ತಿಯನ್ನು ಕಾಪಾಡಲು ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ ಎಂದು ಚಂಪಾ ಆಗ್ರಹಿಸಿದ್ದಾರೆ. ಆದರೆ ಸದ್ಯಕ್ಕಂತೂ ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷ ಹುಟ್ಟಿ ರಾಜ್ಯಾದ್ಯಂತ ಹರಡುವ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿರುವ ಅವರು, ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ಒಲವುಳ್ಳ ಜಾತ್ಯತೀತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಕನ್ನಡಿಗರಿಗಿರುವ ಏಕೈಕ ದಾರಿ ಎಂದು ಹೇಳುತ್ತಾರೆ. ಚಂಪಾ ಅವರ ಮಾತುಗಳು, ಒಣ ಭಾಷಣವಾಗಿರದೆ, ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿದೆ.

ಇದೇ ಸಂದರ್ಭದಲ್ಲಿ ಭುವನೇಶ್ವರಿಯ ಪೂಜೆ ಮತ್ತು ಮೈಸೂರು ಪೇಟವನ್ನು ವಿರೋಧಿಸಿದ್ದೂ ಅರ್ಥಪೂರ್ಣವಾಗಿದೆ. ಕನ್ನಡ ಭಾಷೆ, ಸಂಸ್ಕೃತಿಗೆ ಧಾರ್ಮಿಕ ಸಂಕೇತಗಳನ್ನು ಅದರಲ್ಲೂ ಮುಖ್ಯವಾಗಿ ವೈದಿಕ ಸಂಕೇತಗಳನ್ನು ತುರುಕುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಕನ್ನಡ ಹಬ್ಬವೆನ್ನುವುದು ಎಲ್ಲ ಧರ್ಮ, ಆಚರಣೆಗಳಾಚೆಗೆ ಸಕಲ ಕನ್ನಡಿಗರನ್ನು ಕನ್ನಡತನದ ಹೆಸರಲ್ಲಿ ಒಂದು ಸೇರಿಸುವ ವೇದಿಕೆಯಾಗಿದೆ. ಅಲ್ಲಿ ವಿವಿಧ ಧರ್ಮೀಯರಷ್ಟೇ ಅಲ್ಲ, ನಾಸ್ತಿಕರೂ ನೆರೆಯುತ್ತಾರೆ. ಯಾವುದೋ ಒಂದು ಸಂಪ್ರದಾಯ, ಧರ್ಮ, ಆಚರಣೆಗಳನ್ನು ಅಲ್ಲಿ ಹೇರುವುದು ಕನ್ನಡತನಕ್ಕೆ ಮಾಡುವ ಅವಮಾನವಾಗಿದೆ. ಕರ್ನಾಟಕದ ಏಳಿಗೆಗಾಗಿ ದುಡಿಯುವುದೇ ಕನ್ನಡಕ್ಕೆ ನಾವು ಸಲ್ಲಿಸುವ ಪೂಜೆಯಾಗಿದೆ. ಹಾಗೆಯೇ, ಮೈಸೂರು ದೊರೆಗಳ ಪೇಟವನ್ನು ಕನ್ನಡ ಸಂಕೇತವಾಗಿಸುವುದು, ಗುಲಾಮಗಿರಿ ಮನಸ್ಥಿತಿಯನ್ನು ತೋರಿಸುತ್ತದೆ. ರಾಜಪ್ರಭುತ್ವ ಅಳಿದು ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದೆ. ಮೈಸೂರು ಪೇಟ ಮೇಲ್ವರ್ಗ, ಮೇಲ್ಜಾತಿಯ ಹಿರಿಮೆ ಗರಿಮೆಯಾಗಿದೆ. ಇಡೀ ಕರ್ನಾಟಕದ ಮೌಲ್ಯವನ್ನು ಸಂಕೇತಿಸುವ ಶಕ್ತಿ ಅದಕ್ಕಿಲ್ಲ. ಆದುದರಿಂದ ಅದನ್ನು ನಿರಾಕರಿಸಿದ ಸಮ್ಮೇಳನಾಧ್ಯಕ್ಷರ ನಿರ್ಧಾರ ಶ್ಲಾಘನಾರ್ಹ. ಒಟ್ಟಿನಲ್ಲಿ ಉಡುಪಿಯಲ್ಲಿ ಸಂಘಪರಿವಾರ ನಡೆಸುತ್ತಿರುವ ಧರ್ಮಸಂಸದ್‌ಗೆ ಅತ್ಯಂತ ಪರಿಣಾಮಕಾರಿ ಉತ್ತರವಾಗಿದೆ, ಕನ್ನಡ ನುಡಿ ಸಮ್ಮೇಳನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News