ಪ್ರಧಾನಿಯನ್ನೇಕೆ ನೀವು ನಂಬುವುದಿಲ್ಲ?: ನ್ಯಾಯಾಂಗಕ್ಕೆ ಕಾನೂನು ಸಚಿವ ಪ್ರಶ್ನೆ

Update: 2017-11-27 05:00 GMT
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್

ಹೊಸದಿಲ್ಲಿ, ನ. 27: ರಾಷ್ಟ್ರಿಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕುರಿತ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹಳೆಯ ಕೊಲಾಜಿಯಂ ವ್ಯವಸ್ಥೆಯನ್ನೇ ಮುಂದುವರಿಸಲು ನಿರ್ಧರಿಸಿದ ಬಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ನ್ಯಾಯಾಂಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ಈ ತೀರ್ಪಿನ ತಿರುಳು ಎಂದರೆ, ನ್ಯಾಯಸಮ್ಮತ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕಾನೂನು ಸಚಿವರ ಹಾಗೂ ಪ್ರಧಾನಿಗಳ ಸಾಮರ್ಥ್ಯದ ಮೇಲೆ ನ್ಯಾಯಾಂಗಕ್ಕೆ ಇರುವ ಅಪನಂಬಿಕೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

"ದೇಶದ ಜನತೆ ಸುಭದ್ರ, ಏಕತೆ ಮತ್ತು ಸಮಗ್ರ ಭಾರತದ ವಿಚಾರದಲ್ಲಿ ಪ್ರಧಾನಿಯ ಮೇಲೆ ವಿಶ್ವಾಸ ಇರಿಸಿದ್ದಾರೆ. ಪ್ರಧಾನಿ ಅಣ್ವಸ್ತ್ರದ ಬಟನ್ ಕೂಡಾ ಹೊಂದಿದ್ದಾರೆ. ಅಷ್ಟರಮಟ್ಟಿಗೆ ಜನ ಅವರ ಮೇಲೆ ವಿಶ್ವಾಸ ಹೊಂದಿದ್ದಾರೆ. ಪ್ರಧಾನಿ ತಮ್ಮ ಸಚಿವರ ಮೂಲಕ ಇಷ್ಟು ಕೆಲಸ ಮಾಡುತ್ತಿರುವಾಗ, ನ್ಯಾಯಸಮ್ಮತ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವಲ್ಲಿ ಕಾನೂನು ಸಚಿವರು ಹಾಗೂ ಪ್ರಧಾನಿ ಬಗ್ಗೆ ನೀಮಗೇಕೆ ನಂಬಿಕೆ ಇಲ್ಲ ಎನ್ನುವುದು ಪ್ರಶ್ನೆ.

ನಾವು ನ್ಯಾಯಾಂಗದಲ್ಲಿ ನಂಬಿಕೆ ಇಟ್ಟಿದ್ದೇವೆ. ಇದನ್ನು ಜನ ನೋಡುತ್ತಿದ್ದಾರೆ" ಎಂದು ಪ್ರಸಾದ್ ಕಾನೂನು ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ವಿವರಿಸಿದರು.

ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಮೂರು ಸೇನೆಗಳ ಮುಖ್ಯಸ್ಥರ ನೇಮಕಾತಿ, ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಕೂಡಾ ಪ್ರಮುಖ ಹೊಣೆ ಯನ್ನು ಪ್ರಧಾನಿಗೆ ವಹಿಸಿರುವಾಗ ನ್ಯಾಯಾಂಗ ವ್ಯವಸ್ಥೆ ಏಕೆ ಅವರ ಮೇಲೆ ವಿಶ್ವಾಸ ಹೊಂದಿಲ್ಲ ಎಂದು ರವಿಶಂಕರ್ ಪ್ರಶ್ನಿಸಿದರು.

ಇದಕ್ಕೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, "ಸಾರ್ವಜನಿಕರು ಪ್ರಧಾನಿ ಬಗ್ಗೆ ಇರಿಸಿರುವಷ್ಟೇ ವಿಶ್ವಾಸವನ್ನು ನ್ಯಾಯಾಂಗ ಕೂಡಾ ಹೊಂದಿದೆ. ಪ್ರಧಾನಿ ಸಂವಿಧಾನಾತ್ಮಕ ವಿಶ್ವಾಸದ ಖಜಾನೆ. ವಿಶ್ವಾಸ ಎನ್ನುವುದು ಪ್ರಧಾನಿಯ ಪ್ರತಿರೂಪ" ಎಂದು ಹೇಳಿದರು.

"ಹಲವು ಅಂಶಗಳನ್ನು ನಾವು ಪರಸ್ಪರ ಗೌರವದಿಂದ ಒಪ್ಪಿಕೊಂಡಿದ್ದೇವೆ. ಎಲ್ಲಿ ಹಸ್ತಕ್ಷೇಪ ಮಾಡಬೇಕು ಹಾಗೂ ಎಲ್ಲಿ ಮಾಡಬಾರದು ಎಂಬ ಪ್ರಜ್ಞೆಯೂ ನಮಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಅಂಗ ಮತ್ತೊಂದರ ಮೇಲೆ ಸವಾರಿ ಮಾಡುವಂತಿಲ್ಲ" ಎಂದು ಮಿಶ್ರಾ ತಿರುಗೇಟು ನೀಡಿದರು. ಇದಕ್ಕೆ ವೇದಿಕೆಯಲ್ಲಿದ್ದ ಪ್ರಧಾನಿ ಮೋದಿ ಮೂಕ ಸಾಕ್ಷಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News