ರಾಜಸ್ಥಾನದ ಹಾಸ್ಟೆಲ್‌ಗಳಲ್ಲೂ ರಾಷ್ಟ್ರಗೀತೆ ಕಡ್ಡಾಯ !

Update: 2017-11-28 03:49 GMT

ಹೊಸದಿಲ್ಲಿ, ನ. 28: ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯನ್ನು ಹೆಚ್ಚಿಸುವ ಸಲುವಾಗಿ ಪ್ರತಿ ದಿನ ಮುಂಜಾನೆ ರಾಜಸ್ಥಾನದ ಎಲ್ಲ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಈ ಸಂಬಂಧ ರಾಜ್ಯದ 789 ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯಗಳಿಗೆ ನಿದೇರ್ಶನ ನೀಡಲಾಗಿದೆ.

ಈಗಾಗಲೇ ಎಲ್ಲ ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕು. ಇದನ್ನು ಎಲ್ಲ ಹಾಸ್ಟೆಲ್‌ಗಳಲ್ಲೂ ಅನುಸರಿಸುವಂತೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

"ರಾಷ್ಟ್ರಗೀತೆಯನ್ನು ಹಾಡುವುದು ಹಾಸ್ಟೆಲ್‌ಗಳಲ್ಲಿ ದೈನಂದಿನ ಚಟುವಟಿಕೆಗಳ ಭಾಗ. ಪ್ರತಿ ಮುಂಜಾನೆ ಪ್ರಾರ್ಥನೆಗೆ ವಿದ್ಯಾರ್ಥಿಗಳು ಸೇರುತ್ತಾರೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ರಾಷ್ಟ್ರಗೀತೆ ಹಾಡುವ ನಿರ್ದೇಶ ಪಾಲಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದನ್ನೂ ಪ್ರತಿದಿನ ಹಾಡುವುದನ್ನು ಖಾತ್ರಿಪಡಿಸಲು ಹೊಸ ಸೂಚನೆ ನೀಡಲಾಗಿದೆ" ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಮಿತ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.

ಹಳೆಯ ನಿರ್ದೇಶನವನ್ನೇ ಮತ್ತೆ ಹೊಸದಾಗಿ ನೀಡಲಾಗಿದೆ. ಇತರ ಶಾಲೆಗಳಲ್ಲಿ ಹಾಡುವಂತೆ ಇಲ್ಲೂ ನಿರಂತರವಾಗಿ ರಾಷ್ಟ್ರಗೀತೆ ಹಾಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ 800ಕ್ಕೂ ಹೆಚ್ಚು ಹಾಸ್ಟೆಲ್‌ಗಳಲ್ಲಿ 40 ಸಾವಿರ ವಿದ್ಯಾರ್ಥಿಗಳಿದ್ದಾರೆ. ಇಲಾಖೆಯಡಿ 22 ವಸತಿ ಶಾಲೆಗಳೂ ಕಾರ್ಯ ನಿರ್ವಹಿಸುತ್ತಿವೆ. ಪ್ರತಿದಿನ ಮುಂಜಾನೆ 9 ಮತ್ತು ಸಂಜೆ 5ಕ್ಕೆ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಎಂದು ಜೈಪುರ ಮೇಯರ್ ಅಶೋಕ್ ಲೊಹಾಟಿ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಸೂಚನೆ ಎಲ್ಲ ಹಾಸ್ಟೆಲ್‌ಗಳಿಗೆ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News