ಡೆಂಗ್‌ಗೆ ಕಾರಣವಾಗುವ ಎಲ್ಲ ವೈರಸ್‌ಗಳಿಂದ ರಕ್ಷಣೆ ನೀಡುವ ಲಸಿಕೆ ಅಭಿವೃದ್ಧಿ

Update: 2017-11-28 16:05 GMT

ಹೊಸದಿಲ್ಲಿ,ನ.28: ಎರಡನೇ ಹಂತದ ಮಾರಣಾಂತಿಕ ಸೋಂಕನ್ನು ಹೆಚ್ಚಿಸದೆ, ಡೆಂಗ್ ಜ್ವರಕ್ಕೆ ಕಾರಣವಾಗುವ ಎಲ್ಲ ನಾಲ್ಕೂ ವಿಧದ ವೈರಸ್‌ಗಳ ವಿರುದ್ಧ ರಕ್ಷಣೆಯನ್ನು ನೀಡುವ ಲಸಿಕೆಯೊಂದನ್ನು ತನ್ನ ಸಂಶೋಧಕರ ತಂಡವು ಅಭಿವೃದ್ಧಿಗೊಳಿಸಿದೆ ಎಂದು ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಆ್ಯಂಡ್ ಬಯೊಟೆಕ್ನಾಲಜಿ(ಐಸಿಜಿಇಬಿ) ತಿಳಿಸಿದೆ.

ಈ ಲಸಿಕೆಯು ಡೆಂಗ್ ವಿರುದ್ಧದ ಹೋರಾಟದ ಚಿತ್ರಣವನ್ನೇ ಬದಲಿಸಲಿದೆ ಎಂದು ಐಸಿಜಿಇಬಿಯಲ್ಲಿ ಡೆಂಗ್ ಲಸಿಕೆ ಸಂಶೋಧನೆಯ ನೇತೃತ್ವ ವಹಿಸಿರುವ ನವೀನ್ ಖನ್ನಾ ವಿಶ್ವಾಸ ವ್ಯಕ್ತಪಡಿಸಿದರು.

ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಲಸಿಕೆ ಸಮ್ಮೇಳನದಲ್ಲಿ ಮಂಡಿಸಲಾಗಿರುವ ಸಂಶೋಧನಾ ವರದಿಯು ಇಲಿಗಳು ಮತ್ತು ಮಕಾಕೀ ಜಾತಿಯ ಮಂಗಗಳ ಮೇಲೆ ನಡೆಸಲಾದ ಅಧ್ಯಯನಗಳನ್ನು ಆಧರಿಸಿದೆ.

ಡೆಂಗ್ ವಿರುದ್ಧ ಪರಿಣಾಮಕಾರಿ ಲಸಿಕೆಗಾಗಿ ಸಂಶೋಧನೆ ಕಳೆದ ಹಲವಾರು ದಶಕಗಳಿಂದಲೂ ನಡೆಯುತ್ತಿದೆಯಾದರೂ, ಈ ರೋಗಕ್ಕೆ ಕಾರಣವಾಗುವ ಎಲ್ಲ ನಾಲ್ಕೂ ವಿಧಗಳ ವೈರಸ್‌ಗಳ ವಿರುದ್ಧ ಸಂಪೂರ್ಣ ರಕ್ಷಣೆಯನ್ನು ನೀಡಬಲ್ಲ ಲಸಿಕೆಯು ಕೈಗೂಡಿರಲಿಲ್ಲ.

ಲಸಿಕೆಗಳು ಶರೀರದ ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸುವ ಮೂಲಕ ಕಾರ್ಯ ನಿರ್ವಹಿಸುತ್ತವೆ. ಡೆಂಗ್ ಪ್ರಕರಣದಲ್ಲಿ ಮೊದಲ ಬಾರಿಗೆ ಡೆಂಗ್ ಪೀಡಿತನಾದ ವ್ಯಕ್ತಿಯ ಶರೀರವು ಉತ್ಪಾದಿಸಿದ ಕೆಲವು ಪ್ರತಿರೋಧಕಗಳು ಎರಡನೇ ಬಾರಿ ಡೆಂಗ್ ಬಾಧಿಸಿದಾಗ ಬೇರೆ ವಿಧದ ವೈರಸ್‌ಗೆ ತೆರೆದುಕೊಳ್ಳುವುದರಿಂದ ಇನ್ನಷ್ಟು ತೀವ್ರ ಸೋಂಕಿಗೆ ಕಾರಣವಾಗಬಲ್ಲವು. ಐಸಿಜಿಇಬಿಯು ಅಭಿವೃದ್ಧಿಗೊಳಿಸಿರುವ ಲಸಿಕೆಯು ರೋಗವನ್ನು ಇನ್ನಷ್ಟು ಹೆಚ್ಚಿಸುವ ಪ್ರತಿರೋಧಕಗಳ ಉತ್ಪಾದನೆಯನ್ನು ತಡೆಯುತ್ತದೆ ಎಂದು ಖನ್ನಾ ತಿಳಿಸಿದರು.

ಪ್ರಸ್ತುತ ಸ್ಯಾನೋಫಿ ಪಾಸ್ಚರ್ ಅಭಿವೃದ್ಧಿಗೊಳಿಸಿರುವ ಡೆಂಗ್‌ವ್ಯಾಕ್ಸಿಯಾ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ)ಯು ಶಿಫಾರಸು ಮಾಡಿರುವ ಏಕೈಕ ಡೆಂಗ್ ಲಸಿಕೆಯಾಗಿದೆ.

ಹಲವಾರು ಇತರ ಡೆಂಗ್ ಲಸಿಕೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಭಾರತವು ಈ ನಿಟ್ಟಿನಲ್ಲಿ ಹಿಂದುಳಿದಿಲ್ಲ. ಭಾರತಿಯ ಕಂಪನಿಯಾಗಿರುವ ಪನೇಸಿಯಾ ಬಯೊಟೆಕ್ ಮುಂದಿನ ವರ್ಷ ಮನುಷ್ಯರ ಮೇಲೆ ತನ್ನ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸಲು ಸಜ್ಜಾಗಿದೆ.

ಭಾರತದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಇಂಡೋ-ಯುಎಸ್ ವ್ಯಾಕ್ಸಿನ್ ಪ್ರೋಗ್ರಾಮ್‌ನ ವೆಲ್‌ಕಂ ಟ್ರಸ್ಟ್ ಐಸಿಜಿಇಬಿಯ ಬೆಂಬಲಕ್ಕೆ ನಿಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News