ರೊಹಿಂಗ್ಯಾ ದ್ವೀಪ ನಿರ್ಮಾಣಕ್ಕೆ ಬಾಂಗ್ಲಾ ಚಾಲನೆ

Update: 2017-11-28 17:20 GMT

ಢಾಕಾ, ನ. 28: ತನ್ನ ದಕ್ಷಿಣ ಕರಾವಳಿಯ ಆಚೆಗಿರುವ ನಿರ್ಜನ ದ್ವೀಪವನ್ನು ಒಂದು ಲಕ್ಷ ರೊಹಿಂಗ್ಯಾ ನಿರಾಶ್ರಿತರಿಗಾಗಿ ತಾತ್ಕಾಲಿಕ ಶಿಬಿರವನ್ನಾಗಿ ಪರಿವರ್ತಿಸುವ 1,800 ಕೋಟಿ ರೂಪಾಯಿ ವೆಚ್ಚದ ವಿವಾದಾತ್ಮಕ ಯೋಜನೆಗೆ ಬಾಂಗ್ಲಾದೇಶ ಮಂಗಳವಾರ ಅನುಮೋದನೆ ನೀಡಿದೆ.

ಆದರೆ, ಈ ದ್ವೀಪ ವಾಸಯೋಗ್ಯವಲ್ಲ ಎಂಬ ಎಚ್ಚರಿಕೆಯನ್ನು ಪರಿಣತರು ಈಗಾಗಲೇ ನೀಡಿದ್ದಾರೆ.

ಭಶನ್ ಚಾರ್ ದ್ವೀಪವನ್ನು ಮರುಅಭಿವೃದ್ಧಿಪಡಿಸುವ ಯೋಜನೆಗೆ ಪ್ರಧಾನಿ ಶೇಖ್ ಹಸೀನಾ ಅಧ್ಯಕ್ಷತೆಯಲ್ಲಿ ನಡೆದ ಸರಕಾರಿ ಹಣಕಾಸು ಮಂಡಳಿ ಹಸಿರು ನಿಶಾನೆ ನೀಡಿದೆ.

ಈ ಯೋಜನೆಯ ಬಗ್ಗೆ 2015ರಲ್ಲೇ ಪ್ರಸ್ತಾಪ ಮಾಡಲಾಗಿತ್ತಾದರೂ, ಅದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಕಳೆದ ಮೂರು ತಿಂಗಳ ಅವಧಿಯಲ್ಲಿ ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ 6.20 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರ ಪೈಕಿ ಕೆಲವರಿಗೆ ವಾಸ್ತವ್ಯ ಕಲ್ಪಿಸಲು ದ್ವೀಪವು ಮೇ ತಿಂಗಳಿನಲ್ಲಿ ಸಿದ್ಧವಾಗುತ್ತದೆ ಎಂಬ ವಿಶ್ವಾಸವನ್ನು ಯೋಜನಾ ಕಾರ್ಯದರ್ಶಿ ಝಿಯಾವುಲ್ ಇಸ್ಲಾಮ್ ವ್ಯಕ್ತಪಡಿಸಿದರು.

‘‘ಸದ್ಯಕ್ಕೆ ಸುಮಾರು 1 ಲಕ್ಷ ಮಂದಿಯನ್ನು ಅಲ್ಲಿಗೆ ವರ್ಗಾಯಿಸಲಾಗುವುದು. 2018ರ ವೇಳೆಗೆ ಯೋಜನೆ ಪೂರ್ಣಗೊಳ್ಳುವುದು ಎಂದು ನಾವು ನಿರೀಕ್ಷಿಸಿದ್ದೇವೆ’’ ಎಂದು ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಯೋಜನಾ ಕಾಮಗಾರಿಯನ್ನು ತ್ವರಿತವಾಗಿ ನಡೆಸುವ ಉದ್ದೇಶದಿಂದ ಯೋಜನೆಯ ಹೊಣೆಯನ್ನು ನೌಕಾಪಡೆಗೆ ವಹಿಸಲಾಗಿದೆ’’ ಎಂದರು.

ಶಿಬಿರಗಳನ್ನು ನಿರ್ಮಿಸುವ ಜೊತೆಗೆ, ದ್ವೀಪದ ತಗ್ಗು ಪ್ರದೇಶಗಳನ್ನು ತುಂಬಿಸಬೇಕಾಗಿದೆ ಹಾಗೂ ಉಬ್ಬರದ ಅವಧಿಯಲ್ಲಿ ಸಮುದ್ರದ ನೀರು, ಮಳೆಗಾಲದ ಬಿರುಗಾಳಿ ಮತ್ತು ಚಂಡಮಾರುತಗಳನ್ನು ತಡೆಯಲು ಸುತ್ತಲೂ ತಡೆಗೋಡೆಗಳನ್ನು ನಿರ್ಮಿಸಬೇಕಾಗಿದೆ ಎಂದರು.

ಹೂಳಿನಿಂದ ಕೂಡಿದ ದ್ವೀಪವು ಬಂಗಾಳ ಕೊಲ್ಲಿಯಲ್ಲಿ 2006ರಲ್ಲಿ ರೂಪುಗೊಂಡಿತ್ತು. ಅಲ್ಲಿಗೆ ಸಮೀಪದ ಜನವಸತಿ ದ್ವೀಪದಿಂದ ದೋಣಿಯಲ್ಲಿ ಒಂದು ಗಂಟೆಯ ಪ್ರಯಾಣವಿದೆ.

ಕಳೆದ ವರ್ಷ ಯೋಜನೆ ಕೈಬಿಟ್ಟಿದ್ದ ಬಾಂಗ್ಲಾ

ಈ ದ್ವೀಪವು ಪ್ರವಾಹದಿಂದ ಸಂಪೂರ್ಣವಾಗಿ ಆವರಿಸಲ್ಪಡುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ, ಅದನ್ನು ನಿರಾಶ್ರಿತರ ಶಿಬಿರವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಬಾಂಗ್ಲಾದೇಶ ಕಳೆದ ವರ್ಷ ಕೈಬಿಟ್ಟಿತ್ತು.

ಆದರೆ, ಈ ಆಗಸ್ಟ್‌ನಿಂದ ಹೊಸದಾಗಿ ಭಾರೀ ಸಂಖ್ಯೆಯಲ್ಲಿ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದು, ಕಾಕ್ಸ್ ಬಝಾರ್‌ನಲ್ಲಿರುವ ನಿರಾಶ್ರಿತ ಶಿಬಿರಗಳು ಮತ್ತು ಸಂಪನ್ಮೂಲಗಳ ಮೇಲೆ ಭಾರೀ ಒತ್ತಡ ಬಿದ್ದಿರುವ ಹಿನ್ನೆಲೆಯಲ್ಲಿ, ಯೋಜನೆಗೆ ಹೊಸದಾಗಿ ಚಾಲನೆ ನೀಡುವ ಅನಿವಾರ್ಯತೆಗೆ ಬಾಂಗ್ಲಾದೇಶ ಒಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News