'ಮೃತ' ಎಂದು ಘೋಷಿಸಿದ ಅವಳಿ ಶಿಶುಗಳಲ್ಲಿ ಒಂದು ಜೀವಂತ!

Update: 2017-12-01 11:28 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಡಿ. 1: ರಾಜಧಾನಿಯ ಶಾಲಿಮಾರ್ ಬಾಘ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಮ್ಯಾಕ್ಸ್ ಆಸ್ಪತ್ರೆಯೊಂದು ‘ಮೃತ’ ಎಂದು ಘೋಷಿಸಿ ಅವಳಿ ನವಜಾತ ಶಿಶುಗಳನ್ನು ಅವುಗಳ ಕುಟುಂಬಕ್ಕೆ ಪ್ಲಾಸ್ಟಿಕ್ ಲಕೋಟೆಯಲ್ಲಿ ಹಾಕಿ ಹಸ್ತಾಂತರಿಸಿದ್ದರೆ, ಶಿಶುಗಳನ್ನು ಹೆತ್ತವರು ಹೂಳಬೇಕೆನ್ನುವಷ್ಟರಲ್ಲಿ ಅವುಗಳಲ್ಲಿ ಒಂದು ಮಗು ಜೀವಂತವಾಗಿರುವುದು ಪತ್ತೆಯಾಗಿದೆ.

ಮಗುವಿನ ಹೆತ್ತವರು ಕೂಡಲೇ ಹತ್ತಿರದ ಕಶ್ಮೀರಿ ಗೇಟ್ ಸಮೀಪದ ಆಸ್ಪತ್ರೆಗೆ ಧಾವಿಸಿದಾಗ ಅಲ್ಲಿನ ವೈದ್ಯರು ಮಗು ಇನ್ನೂ ಜೀವಂತವಾಗಿದೆ ಎಂಬ ಸಿಹಿ ಸುದ್ದಿಯನ್ನು ನೀಡಿದ್ದರು. ಆ ಶಿಶುವಿನ ಪರಿಸ್ಥಿತಿ ಇದೀಗ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಒಂದು ಮಗು ಹುಟ್ಟುವುದಕ್ಕಿಂತ ಮುಂಚೆಯೇ ಮೃತಪಟ್ಟಿದೆಯೆಂದು ವೈದ್ಯರು ಘೋಷಿಸಿದ್ದರೆ ಇನ್ನೊಂದು ಮಗುವಿನ ಪರಿಸ್ಥಿತಿ ಚಿಂತಾಜನಕವಾಗಿದ್ದು ಅದನ್ನು ಕೆಲ ದಿನಗಳ ಕಾಲನಿಗಾದಲ್ಲಿಡಬೇಕಾಗಿದೆಯೆಂದು ವೈದ್ಯರು ಹೇಳಿದ್ದರು. ಆದರೆ ಆ ಮಗುವನ್ನು ಕೂಡ ನಂತರ ‘ಮೃತ’ ಎಂದು ಆಸ್ಪತ್ರೆ ಘೋಷಿಸಿತ್ತು.

ಈ ಪ್ರಮಾದಕ್ಕೆ ಕಾರಣರಾದ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರನ್ನು ರಜೆ ಮೇಲೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆಗೂ ಆದೇಶಿಸಲಾಗಿದೆ. ದಿಲ್ಲಿ ಪೊಲೀಸರು ಕೂಡ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಕಳೆದ ತಿಂಗಳು ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆಯಲ್ಲಿ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದರೆ ಆಸ್ಪತ್ರೆಯ ರೂ 18 ಲಕ್ಷ ಬಿಲ್ ಪಾವತಿಸದೆ ಮೃತದೇಹವನ್ನು ಹಸ್ತಾಂತರಿಸಲು ನಿರಾಕರಿಸಿದ ಘಟನೆಯ ನಡುವೆಯೇ ಈ ಘಟನೆ ಬೆಳಕಿದೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News