ರೈಲ್ವೆಯಲ್ಲಿ ಡಿಜಿಟಲ್ ಪಾವತಿಗೆ ಕಳಪೆ ಪ್ರತಿಕ್ರಿಯೆ

Update: 2017-12-01 15:57 GMT

ಹೊಸದಿಲ್ಲಿ,ಡಿ.1: ನೋಟು ಅಮಾನ್ಯದ ಬಳಿಕ ರೈಲ್ವೆ ನಿಲ್ದಾಣಗಳ ಟಿಕೆಟ್ ಕೌಂಟರ್ ಗಳಲ್ಲಿ ನಗದು ರಹಿತ ವಹಿವಾಟು ಆರಂಭಗೊಂಡು ಒಂದು ವರ್ಷ ಕಳೆದಿದ್ದರೂ 23 ದಶಲಕ್ಷ ಪ್ರಯಾಣಿಕರ ಪೈಕಿ ಕೇವಲ ಶೇ.3ರಷ್ಟು ಜನರು ಟಿಕೆಟ್‌ಗಳ ಖರೀದಿಗಾಗಿ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ.

ರೈಲ್ವೆಯು ಒದಗಿಸಿರುವ ಮಾಹಿತಿಯಂತೆ ಪ್ರತಿದಿನ ಆನ್‌ಲೈನ್ ಬುಕಿಂಗ್ ವ್ಯವಸ್ಥೆಯ ಮೂಲಕ 80 ಕೋ.ರೂ.ವೌಲ್ಯದ ಟಿಕೆಟ್‌ಗಳು ಖರೀದಿಯಾಗುತ್ತಿದ್ದರೆ, ಪ್ರಯಾಣಿಕರು ಟಿಕೆಟ್ ಕೌಂಟರ್‌ಗಳಲ್ಲಿ 78 ಕೋ.ರೂ.ವೌಲ್ಯದ ಟಿಕೆಟ್‌ಗಳನ್ನು ನಗದು ಹಣದ ಮೂಲಕ ಖರೀದಿಸುತ್ತಿದ್ದಾರೆ. ಇವುಗಳಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳ ಪಾಲು 30 ಕೋ.ರೂ. ಮತ್ತು ಕಾಯ್ದಿರಿಸದ ಟಿಕೆಟ್‌ಗಳ ಪಾಲು 48 ಕೋ.ರೂ.ಗಳಾಗಿವೆ. 23 ದಶಲಕ್ಷ ಪ್ರಯಾಣಿಕರ ಪೈಕಿ ಶೇ.94ರಷ್ಟು ಜನರು ಮೀಸಲುರಹಿತ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುತ್ತಾರೆ.

ಕಳೆದ ವರ್ಷದ ನ.8ರಂದು ನೋಟು ಅಮಾನ್ಯ ಕ್ರಮದ ಬಳಿಕ ರೈಲ್ವೆಯು ಡಿಜಿಟಲ್ ಹಣ ಪಾವತಿಗಳನ್ನು ಉತ್ತೇಜಿಸಲು ದೇಶಾದ್ಯಂತ ರಿಜರ್ವೇಷನ್ ಕೌಂಟರ್‌ಗಳಲ್ಲಿ ಪಾಯಿಂಟ್ ಆಫ್ ಸೇಲ್(ಪಿಒಎಸ್) ಯಂತ್ರಗಳನ್ನು ಪರಿಚಯಿಸಿತ್ತು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಮೇಲಿನ ಸೇವಾ ಶುಲ್ಕಕ್ಕೆ ವಿನಾಯಿತಿಯನ್ನು ಐಆರ್‌ಸಿಟಿಸಿ ಮುಂದುವರಿಸಿದೆ.

ಮೀಸಲುರಹಿತ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವವರು ಟಿಕೆಟ್‌ಗಳ ಖರೀದಿಗಾಗಿ ನಗದು ಪಾವತಿಯನ್ನೇ ಇಷ್ಟಪಡುತ್ತಿದ್ದಾರೆ. ಉಪನಗರ ನಿಲ್ದಾಣಗಳಲ್ಲಿ ಪಿಒಎಸ್ ಯಂತ್ರಗಳು ಮತ್ತು ಪೇಮೆಂಟ್ ವ್ಯಾಲೆಟ್‌ಗಳು ಲಭ್ಯವಿದ್ದರೂ ಪ್ರಯಾಣಿಕರು ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಮೂಲಕ ಟಿಕೆಟ್ ಹಣವನ್ನು ಪಾವತಿಸುತ್ತಿಲ್ಲ ಎಂದು ರೈಲ್ವೆ ಮಂಡಳಿಯ ಸದಸ್ಯ(ಸಂಚಾರ) ಮುಹಮ್ಮದ್ ಜಂಷೆಡ್ ಅವರು ತಿಳಿಸಿದರು.

 ರೈಲ್ವೆಯ ಇ-ಟಿಕೆಟಿಂಗ್‌ನಲ್ಲಿ ಶೇ.12ರಷ್ಟು ಏರಿಕೆ ಕಂಡು ಬಂದಿದೆ. ಕಳೆದ ವರ್ಷ ಶೇ.58ರಷ್ಟು ಕಾಯ್ದಿರಿಸಿದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಆಗಿದ್ದರೆ, ನೋಟು ಅಮಾನ್ಯದ ಬಳಿಕ ಇದು ಶೇ.70ಕ್ಕೇರಿದೆ.

ಡಿ.1ರಿಂದ ಎಲ್ಲ ರಿಜರ್ವೇಷನ್ ಕೌಂಟರ್‌ಗಳಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್(ಯುಪಿಐ) ಅನ್ನು ನಾವು ಆರಂಭಿಸಿದ್ದೇವೆ. ಪ್ರಯಾಣಿಕರು ಕೌಂಟರ್‌ಗಳಲ್ಲಿ ತಮ್ಮ ಸೆಲ್ ಫೋನ್‌ಗಳ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು ಎಂದು ಜಂಷೆಡ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News