ಭೋಪಾಲ್ ಅನಿಲ ದುರಂತ: ಜನರನ್ನು ಇನ್ನೂ ಕಾಡುತ್ತಿದೆ ವಿಷಾನಿಲ

Update: 2017-12-03 13:35 GMT

ಭೋಪಾಲ್, ಡಿ.3: ಜಗತ್ತಿನಲ್ಲಿ ನಡೆದಿರುವ ಭೀಕರ ಕೈಗಾರಿಕಾ ದುರಂತಗಳಲ್ಲಿ ಒಂದಾಗಿರುವ ಭೋಪಾಲ್ ಅನಿಲ ದುರಂತ ಸಂಭವಿಸಿ 33 ವರ್ಷಗಳೇ ಕಳೆದರೂ ಇನ್ನು ಕೂಡಾ ಸಂತ್ರಸ್ತರು ಸರಿಯಾದ ಪರಿಹಾರ ಮತ್ತು ವೈದ್ಯಕೀಯ ನೆರವಿಗಾಗಿ ಕಾಯುತ್ತಿದ್ದಾರೆ.

ಸಂತ್ರಸ್ತರಿಗೆ ಹೆಚ್ಚಿನ ಪರಿಹಾರವನ್ನು ಕೋರಿ ಸರಕಾರವು 2010ರ ಡಿಸೆಂಬರ್‌ನಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ಯೂರೇಟಿವ್ ಅರ್ಜಿಯ ವಿಚಾರಣೆಯನ್ನು ಆರಂಭಿಸುವಂತೆ ಕೋರಿ ಮನವಿ ಪತ್ರಕ್ಕೆ ಸಹಿ ಹಾಕುವ ಅಭಿಯಾನವನ್ನು ಭೋಪಾಲ್ ದುರಂತದಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬಸ್ಥರು ಮತ್ತು ಈ ಘಟನೆಯಲ್ಲಿ ದೈಹಿಕವಾಗಿ ಹಾನಿಗೀಡಾಗಿರುವವರು ಆರಂಭಿಸಿದ್ದಾರೆ.

ಅಂದು ಈ ಅನಿಲ ಕಾರ್ಖಾನೆಯ ಮಾಲಕತ್ವವನ್ನು ಹೊಂದಿದ್ದ ಅಮೆರಿಕಾ ಮೂಲದ ಕಂಪೆನಿಯು ಸಂತ್ರಸ್ತರಿಗೆ ಸರಿಯಾದ ಪರಿಹಾರವನ್ನು ನೀಡಿಲ್ಲ ಎಂದು ಮಧ್ಯಪ್ರದೇಶದ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಶ್ವಾಸ್ ಸಾರಂಗ್ ತಿಳಿಸುತ್ತಾರೆ.

 ಅಮೆರಿಕಾ ಮೂಲದ ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್ (ಯುಸಿಸಿ) ಜಗತ್ತಿನ ಅತ್ಯಂತ ಭೀಕರ ಅನಿಲ ದುರಂತದ ಸಂತ್ರಸ್ತರಿಗೆ ಸರಿಯಾದ ಪರಿಹಾರವನ್ನು ನೀಡಿಲ್ಲ ಎಂದು ವಿಶ್ವಾಸ್ ತಿಳಿಸಿದ್ದಾರೆ. ಈ ಅನಿಲ ಘಟಕವು ಸದ್ಯ ಡೊವ್ ಕೆಮಿಕಲ್ಸ್ ಒಡೆತನದಲ್ಲಿದೆ.

ಅಂದಿನ ಕಾಂಗ್ರೆಸ್ ಸರಕಾರ ಈ ದುರಂತಕ್ಕೆ ಜವಾಬ್ದಾರರಾದ ಬಹುರಾಷ್ಟ್ರೀಯ ಕಂಪೆನಿಯನ್ನು ಕಾನೂನು ಪ್ರಕಾರ ಶಿಕ್ಷೆಗೊಳಪಡಿಸುವ ಬದಲು ಅದರ ಸಹಾಯಕ್ಕೆ ನಿಂತಿತ್ತು ಎಂದು ವಿಶ್ವಾಸ್ ಆರೋಪಿಸಿದ್ದಾರೆ. ಘಟನೆಯ ನಂತರ ಭೋಪಾಲ್‌ಗೆ ಆಗಮಿಸಿದ್ದ ಯುಸಿಸಿ ಮುಖ್ಯಸ್ಥ ವಾರನ್ ಆ್ಯಂಡರ್ಸನ್ ಅಮೆರಿಕಾಗೆ ಪಲಾಯನ ಮಾಡಲು ಕಾಂಗ್ರೆಸ್ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೆರವಾಗಿದ್ದವು ಎಂದು ವಿಶ್ವಾಸ್ ಆರೋಪಿಸಿದ್ದಾರೆ. ಸಂತ್ರಸ್ತರಿಗೆ ಜವಾಬ್ದಾರ ಕಂಪೆನಿಯು ರೂ. 1,000 ಕೋಟಿಗೂ ಅಧಿಕ ಪರಿಹಾರವನ್ನು ನೀಡಬೇಕೆಂದು ಕ್ಯೂರೇಟಿವ್ ಅರ್ಜಿಯಲ್ಲಿ ಕೋರಲಾಗಿದೆ.

ಮೂರು ಸಾವಿರ ಜನರನ್ನು ಬಲಿಪಡೆದು 1.02 ಲಕ್ಷ ಜನರನ್ನು ಭಾದಿಸಿದ 1984ರ ಡಿಸೆಂಬರ್ 2-3ರ ಮಧ್ಯರಾತ್ರಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ನಡೆದ ವಿಷಾನಿಲ ಸೋರಿಕೆ ಘಟನೆಗೆ ಸಂಬಂಧಪಟ್ಟಂತೆ ಕಾರ್ಖಾನೆಯ ಒಡೆತನವನ್ನು ಹೊಂದಿದ್ದ ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್ ರೂ. 715 ಕೋಟಿ ಪರಿಹಾರವನ್ನು ನೀಡಿರುವುದಾಗಿ ಕಳೆದ ಮೂರು ದಶಕಗಳಿಂದ ಸಂತ್ರಸ್ತರಿಗಾಗಿ ದುಡಿಯುತ್ತಿರುವ ಭೋಪಾಲ್ ಅನಿಲ ಪೀಡಿತ ಮಹಿಳಾ ಉದ್ಯೋಗ ಸಂಘಟನೆಯ ಸಂಚಾಲಕರಾದ ಅಬ್ದುಲ್ ಜಬ್ಬರ್ ತಿಳಿಸುತ್ತಾರೆ.

ಈ ಪರಿಹಾರ ಮೊತ್ತದ ವಿರುದ್ಧ ನಾವೆಲ್ಲರೂ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಘಟನೆಯ ಸಂತ್ರಸ್ತರ ಸಂಖ್ಯೆ ಬಹಳ ದೊಡ್ಡದಾಗಿದ್ದು ನೀಡಲಾಗಿರುವ ಪರಿಹಾರ ಮೊತ್ತು ಅತಿಕಡಿಮೆಯಾಗಿದೆ ಎಂದು ತಿಳಿಸಿದ್ದೇವೆ ಎಂದು ಅಬ್ದುಲ್ ಜಬ್ಬಾರ್ ಹೇಳುತ್ತಾರೆ. ನೀಡಲಾಗಿರುವ ರೂ. 715 ಕೋಟಿ ಪರಿಹಾರವನ್ನು ಘಟನೆಯಲ್ಲಿ ಮೃತಪಟ್ಟ 15,274 ಜನರ ಕುಟುಂಬಸ್ಥರಿಗೆ ಮತ್ತು 5.74 ಲಕ್ಷ ಪೀಡಿತರಿಗೆ ವಿತರಿಸಲಾಗಿದೆ ಎಂದು ತಿಳಿಸಿದ ಜಬ್ಬಾರ್ ಸಹಿ ಅಭಿಯಾನವನ್ನು ಈ ಅನಿಲ ಸೋರಿಕೆಯಿಂದ ಅನಾರೋಗ್ಯಪೀಡಿತರಾಗಿರುವವರು ಆರಂಭಿಸಿರುವುದಾಗಿ ತಿಳಿಸುತ್ತಾರೆ. ಘಟನೆಯ ಸಂತ್ರಸ್ತರ ಸಂಖ್ಯೆಯು ಐದು ಪಟ್ಟು ಹೆಚ್ಚಾಗಿರುವುದಾಗಿ ನಾವು 2005ರಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದ್ದೆವು ಎಂದು ಅವರು ಸೇರಿಸುತ್ತಾರೆ.

ಯುಸಿಸಿಯು ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೋರಿ ರಾಜ್ಯ ಮತ್ತು ಕೇಂದ್ರ ಸರಕಾರಗಳು 2010ರ ಡಿಸೆಂಬರ್ 3ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಕ್ಯೂರೇಟಿವ್ ಅರ್ಜಿ ಸಲ್ಲಿಸಿದ್ದವು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಹಾಗಾಗಿ ಈಗ ಸಂತ್ರಸ್ತರೇ ಸಹಿ ಅಭಿಯಾನವನ್ನು ನಡೆಸಿ ಈ ಅರ್ಜಿಯ ವಿಚಾರಣೆಯನ್ನು ನಡೆಸಿ ಶೀಘ್ರ ತೀರ್ಪು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿರುವುದಾಗಿ ಅಬ್ದುಲ್ ತಿಳಿಸುತ್ತಾರೆ.

ಮೂರು ದಶಕಗಳ ಹಿಂದೆ ಉಸಿರಾಡಿದ್ದ ವಿಷಾನಿಲದ ಪರಿಣಾಮವಾಗಿ ಸಂತ್ರಸ್ತರು ಕ್ಯಾನ್ಸರ್, ಗಡ್ಡೆ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ ಹಣದ ಕೊರತೆಯಿಂದಾಗಿ ಇವರಿಗೆ ಸರಿಯಾದ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂದು ಅಬ್ದುಲ್ ತಿಳಿಸಿದ್ದಾರೆ.

  

ಕಾಂಗ್ರೆಸ್ ಸರಕಾರ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಆ್ಯಂಡರ್ಸನ್‌ನನ್ನು ಶಿಕ್ಷೆಗೊಳಪಡಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದ ಅಬ್ದುಲ್ 1984ರಲ್ಲಿ ಅಮೆರಿಕಾದ ಒತ್ತಡದಿಂದಾಗಿ ಕಾಂಗ್ರೆಸ್ ಸರಕಾರ ಆ್ಯಂಡರ್ಸನ್ ದೇಶದಿಂದ ಓಡಿಹೋಗಲು ಸಹಾಯ ಮಾಡಿತು. ಇನ್ನು 2002ರಲ್ಲಿ ಎನ್‌ಡಿಎ ಸರಕಾರದ ಅವಧಿಯಲ್ಲಿ ಸಿಬಿಐ ಆ್ಯಂಡರ್ಸನ್ ವಿರುದ್ಧದ ಆರೋಪಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ ಕಾರಣ ಅಮೆರಿಕಾ ಪ್ರಜೆಯಾಗಿರುವ ಆತನನ್ನು ಭಾರತಕ್ಕೆ ಹಸ್ತಾಂತರಗೊಳಿಸುವುದು ಕೂಡಾ ಕಷ್ಟಸಾಧ್ಯವಾಯಿತು ಎಂದು ವಿವರಿಸುತ್ತಾರೆ. ಘಟನೆಗೆ ಸಂಬಂಧಪಟ್ಟಂತೆ 2010ರ ಜೂನ್ 7ರಂದು ತೀರ್ಪು ಪ್ರಕಟಿಸಿದ ಭೋಪಾಲ್ ನ್ಯಾಯಾಲಯ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‌ನ (ಯುಸಿಐಎಲ್) ಏಳು ಅಧಿಕಾರಿಗಳಿಗೆ ತಲಾ ಎರಡು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಘೋಷಿಸಿತ್ತು. ಘಟನೆಯ ಪ್ರಮುಖ ಆರೋಪಿಯಾಗಿದ್ದ ಆ್ಯಂಡರ್ಸನ್ ವಿಚಾರಣೆಗೆ ಹಾಜರಾಗಲೇ ಇಲ್ಲ ಮತ್ತು 1992ರ ಫೆಬ್ರವರಿ 1ರಂದು ಭೋಪಾಲ್ ಸಿಜೆಎಂ ನ್ಯಾಯಾಲಯ ಆತನನ್ನು ತಲೆಮರೆಸಿಕೊಂಡ ಅಪರಾಧಿ ಎಂದು ಘೋಷಿಸಿತು. ಭೋಪಾಲ್ ನ್ಯಾಯಾಲಯವು 1992 ಮತ್ತು 2009ರಲ್ಲಿ ಆ್ಯಂಡರ್ಸನ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. 2014ರ ಸೆಪ್ಟೆಂಬರ್‌ನಲ್ಲಿ ಆ್ಯಂಡರ್ಸನ್ ಸಾವನ್ನಪ್ಪಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News