ಹಿಂದೂ ಧರ್ಮಕ್ಕೆ ಅಪಚಾರ ಎಸಗುತ್ತಿರುವ ಪರಿವಾರ!

Update: 2017-12-04 04:01 GMT

ಇತ್ತೀಚೆಗೆ ‘ಧಾರ್ಮಿಕ ಜಾಗೃತಿ’ ಎನ್ನುವ ಪದ ವಿಕೃತ ರೂಪವನ್ನು ಪಡೆಯುತ್ತಿದೆ. ಸಾಧಾರಣವಾಗಿ ನಮ್ಮಿಳಗಿನ ಅಧ್ಯಾತ್ಮ, ನಂಬಿಕೆ, ದೇವರು, ತತ್ವ, ಸದ್ವಿಚಾರಗಳನ್ನು ಜಾಗೃತಿಗೊಳಿಸುವುದನ್ನೇ ಧರ್ಮ ಜಾಗೃತಿಯೆಂದು ನಂಬಿಕೊಂಡು ಬಂದ ನೆಲ ನಮ್ಮದು. ಇದು ಶತ ಶತಮಾನಗಳಿಂದ ಅಂದರೆ ಋಷಿ ಮುನಿಗಳ ಕಾಲದಿಂದಲೇ ನಡೆದುಕೊಂಡು ಬಂದಿದೆ. ನಮ್ಮಿಳಗಿರುವ ದುಷ್ಟತನಗಳನ್ನು, ಕೆಡುಕುಗಳನ್ನು ಅಳಿಸಿ ಅಲ್ಲಿ ಒಳಿತನ್ನು, ಶಾಂತಿಯನ್ನು ಬಿತ್ತುವ ಕೆಲಸವೇ ಧರ್ಮ ಜಾಗೃತಿ. ಪ್ರತಿಯೊಂದು ಧರ್ಮ ತನ್ನದೇ ಆದ ತತ್ವ, ಸಿದ್ಧಾಂತಗಳನ್ನು, ಜೀವನ ವೌಲ್ಯಗಳನ್ನು ನೆಚ್ಚಿಕೊಂಡಿದೆ. ಅದರ ಮಾಗದರ್ಶನದಲ್ಲಿ ತಮ್ಮ ತಮ್ಮ ಧಾರ್ಮಿಕ ಅನುಯಾಯಿಗಳ ಎದೆಯೊಳಗೆ ಒಳಿತನ್ನು ಬಿತ್ತುವುದು ಧಾರ್ಮಿಕ ಮುಖಂಡರ ಕೆಲಸ. ಇದನ್ನೇ ಧರ್ಮ ಜಾಗೃತಿ ಎಂದು ಕರೆಯುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಧರ್ಮ ಜಾಗೃತಿ ವಿಕೃತ ಅರ್ಥವನ್ನು ಪಡೆದುಕೊಳ್ಳುತ್ತಿದೆ. ನಮ್ಮಿಳಗೆ ಧರ್ಮವನ್ನು ಜಾಗೃತಿಗೊಳಿಸುವುದೆಂದರೆ, ಇನ್ನೊಂದು ಧರ್ಮದ ವಿರುದ್ಧ ದ್ವೇಷವನ್ನು ಬಿತ್ತುವುದು ಎನ್ನುವಂತಾಗಿದೆ.

ಜನರಲ್ಲಿ ಈ ತಪ್ಪು ಕಲ್ಪನೆಯನ್ನು ಬಿತ್ತುವ ಕೆಲಸವನ್ನು ಕೆಲವು ಧಾರ್ಮಿಕ ಮುಖಂಡರೇ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಕೆಲವು ಸನ್ಯಾಸಿಗಳು ಅಲ್ಲಿ ಬಿತ್ತಿದ ಧಾರ್ಮಿಕ ಜಾಗೃತಿಯನ್ನು ನಾವೆಲ್ಲ ಮಾಧ್ಯಮಗಳ ಮೂಲಕ ಓದಿದ್ದೇವೆ. ‘‘ಯುವಕರು ತಲವಾರುಗಳನ್ನು ಹಿಡಿಯಿರಿ’’ ಎನ್ನುವ ಘೋಷಣೆಗಳಿಂದ ಹಿಡಿದು ಇತರ ಧರ್ಮಗಳನ್ನು ದ್ವೇಷಿಸುವ ಪುಂಖಾನುಪುಂಖ ಭಾಷಣಗಳು ಆ ಸಂಸದ್ ವೇದಿಕೆಯಿಂದ ಹೊರ ಬಿದ್ದವು. ಅಲ್ಲಿ ಹಿಂದೂಧರ್ಮದ ಯಾವ ತತ್ವಗಳನ್ನು ಜನರೊಳಗೆ ಬಿತ್ತಲಾಯಿತು ಎಂದು ಕೇಳಿದರೆ ಯಾರಲ್ಲೂ ಉತ್ತರವಿಲ್ಲ. ಇತರ ಧರ್ಮವನ್ನು ದ್ವೇಷಿಸುವುದೇ ತನ್ನ ಧರ್ಮವನ್ನು ಪ್ರೀತಿಸುವ ಕ್ರಮವೆ? ಈ ದೇಶದಲ್ಲಿ ದೇಶಭಕ್ತಿಯನ್ನು ಬಿತ್ತಲು ಬಿಜೆಪಿ ಮತ್ತು ಸಂಘಪರಿವಾರದಂತಹ ಪಕ್ಷ, ಸಂಘಟನೆಗಳು ಪಾಕಿಸ್ತಾನವನ್ನು ಮುಂದಿಡುತ್ತದೆ. ನಮ್ಮ ದೇಶಭಕ್ತಿ ಜಾಗೃತವಾಗಬೇಕಾದರೆ ಪಾಕಿಸ್ತಾನದ ಗಡಿಯಲ್ಲಿ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆಯಬೇಕು. ಸಾರ್ವಜನಿಕವಾಗಿ ಪಾಕಿಸ್ತಾನವನ್ನು ನಿಂದಿಸುದೇ ನಮ್ಮ ದೇಶಭಕ್ತಿಯನ್ನು ಪ್ರದರ್ಶಿಸುವ ಮಾರ್ಗ ಎಂದು ತಿಳಿದುಕೊಂಡಿದ್ದೇವೆ.

ಇದೇ ಸಂದರ್ಭದಲ್ಲಿ, ಈ ದೇಶದ ಕಾನೂನು ಸುವ್ಯವಸ್ಥೆಯನ್ನು ಗೌರವಿಸುವುದು, ಸಂವಿಧಾನಕ್ಕೆ ಬದ್ಧರಾಗುವುದು, ಭ್ರಷ್ಟಾಚಾರದ ಜೊತೆಗೆ ಕೈಜೋಡಿಸದೇ ಇರುವುದು ಇವೆಲ್ಲ ದೇಶಭಕ್ತಿಯ ಭಾಗ ಎನ್ನುವುದನ್ನು ಮರೆತಿದ್ದೇವೆ. ಧರ್ಮದ ವಿಷಯದಲ್ಲಂತೂ ಇದು ಅತಿರೇಕ ತಲುಪುತ್ತಿದೆ. ತಮ್ಮ ತಮ್ಮ ಧರ್ಮವನ್ನು ಉಳಿಸಲು ಅದರೊಳಗಿರುವ ತತ್ವ, ಸಿದ್ಧಾಂತಗಳು ವಿಫಲವಾಗಿವೆೆ ಎಂದು ನಂಬಿರುವ ಕೆಲವು ರಾಜಕೀಯ ಹಿನ್ನೆಲೆಯ ಧಾರ್ಮಿಕ ಮುಖಂಡರು, ಧರ್ಮ ಜಾಗೃತಿಯ ವ್ಯಾಖ್ಯಾನವನ್ನು ವಿರೂಪಗೊಳಿಸಿದ್ದಾರೆ. ಜನರನ್ನು ಸಮಾಜೋತ್ಸವ, ಸಮಾಜ ಜಾಗೃತಿಯ ಹೆಸರಲ್ಲಿ ಒಟ್ಟು ಸೇರಿಸಿ ಅಲ್ಲಿ ಇತರ ಸಮುದಾಯದ ಜನರನ್ನು ನಿಂದಿಸಿ, ಅವರ ವಿರುದ್ಧ ದ್ವೇಷ ಭಾವನೆಗಳನ್ನು ಬಿತ್ತುವ ಮೂಲಕ ತಮ್ಮ ಧರ್ಮವನ್ನು ಜಾಗೃತಿಗೊಳಿಸಲು ಹೊರಟಿದ್ದಾರೆ. ವಿವಾದಿತ ಬಾಬರಿ ಮಸೀದಿ ಇಲ್ಲದೇ ಇದ್ದಿದ್ದರೆ ಅಯೋಧ್ಯೆಯ ಆ ಜಾಗದಲ್ಲಿ ಇವರು ದೇವಸ್ಥಾನವನ್ನು ನಿರ್ಮಿಸಲು ನಿಜಕ್ಕೂ ಮುಂದಾಗುತ್ತಿದ್ದರೇ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಇಂದು ಇವರಿಗೆ ದೇವಸ್ಥಾನಗಳು ನಿರ್ಮಾಣವಾಗಬೇಕಾಗಿರುವುದು ಆರಾಧನೆಯ ಕಾರಣಕ್ಕಾಗಿ, ತಮ್ಮಾಳಗಿನ ಭಕ್ತಿಯ ಅಭಿವ್ಯಕ್ತಿಯ ಕಾರಣಕ್ಕಾಗಿಯೂ ಅಲ್ಲ. ಬದಲಿಗೆ ಆ ಜಾಗದಲ್ಲಿ ಇಗರ್ಜಿ ಅಥವಾ ಮಸೀದಿ ಇವೆ ಎನ್ನುವ ಕಾರಣಕ್ಕಾಗಿ ಆ ಸ್ಥಳದಲ್ಲಿ ತಮ್ಮ ಮಂದಿರವನ್ನು ನಿರ್ಮಿಸಬೇಕಾಗಿದೆ. ಇದನ್ನು ನಾವು ಯಾವ ಅರ್ಥದಲ್ಲಿ ಧರ್ಮ ಜಾಗೃತಿ ಎಂದು ಕರೆಯಬೇಕು? ತಾಜ್‌ಮಹಲ್ ಸಮೀಪ ನಮಾಝ್ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಇತ್ತೀಚೆಗೆ ಕೆಲವು ಸಂಘಪರಿವಾರ ಮುಖಂಡರು, ಸನ್ಯಾಸಿಗಳು ಹೋಗಿ ಭಜನೆ ಮಾಡಿದರು.

ಭಜನೆಯನ್ನು ನಾವು ಮಾಡಬೇಕಾದುದು ನಮ್ಮ ದೇವರನ್ನು ಒಲಿಸುವುದಕ್ಕಾಗಿ. ನಮ್ಮ ಅಧ್ಯಾತ್ಮ ಅಗತ್ಯಕ್ಕಾಗಿ. ಆದರೆ ಇತರ ಧರ್ಮೀಯರು ಅಲ್ಲಿ ನಮಾಝ್ ನಿರ್ವಹಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಇನ್ನೊಂದು ಸಮುದಾಯಕ್ಕೆ ಭಜನೆ ಮಾಡುವ ಅಗತ್ಯ ಬೀಳುವುದನ್ನು ಭಕ್ತಿಯೆಂದು ಕರೆಯಲು ಸಾಧ್ಯವೇ? ಇಂತಹ ಭಕ್ತಿಯನ್ನು ದೇವರಾದರೂ ಸ್ವೀಕರಿಸಬಹುದೇ? ಇದೊಂದು ರೀತಿ ಹಿಂದೂ ಧರ್ಮಕ್ಕೆ ಕೆಲವು ನಿರ್ದಿಷ್ಟ ರಾಜಕೀಯ ಅಜೆಂಡಾಗಳಿರುವ ಶಕ್ತಿಗಳು ಮಾಡುತ್ತಿರುವ ಅಪಚಾರಗಳಲ್ಲವೇ? ಹಿಂದೂ ಧರ್ಮವನ್ನು ಈ ರೀತಿಯಾಗಿ ರಾಜಕೀಯಕ್ಕೆ ಬಳಸಿ ಅದರ ವೌಲ್ಯಗಳಿಗೆ ಧಕ್ಕೆ ತರುವುದರಿಂದ, ಅದರ ನಿಜವಾದ ಜೀವನ ವೌಲ್ಯಗಳನ್ನು ಅಪಹಾಸ್ಯ ಮಾಡಿದಂತೆ ಆಗುವುದಿಲ್ಲವೇ? ಬಾಬಾ ಬುಡಾನ್‌ಗಿರಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನೇ ಗಮನಿಸೋಣ. ಕಳೆದ ಕೆಲವು ವರ್ಷಗಳಿಂದ ಸಂಘಪರಿವಾರದ ನಿರ್ದಿಷ್ಟ ಮಂದಿ ಮಾಲಾಧಾರಿಗಳಾಗಿ ದತ್ತಪೀಠವೆಂದು ಕರೆಯಲಾಗುತ್ತಿರುವ ಬಾಬಾಬುಡಾನ್ ಗಿರಿಯ ಕಡೆಗೆ ಹೋಗುತ್ತಿದ್ದಾರೆ. ಸುಮಾರು ಎರಡು ದಶಕಗಳ ಹಿಂದೆ ಆ ಕ್ಷೇತ್ರ ಅವರಿಗೆ ಇಷ್ಟು ಮಹತ್ವದ್ದೆನಿಸಿರಲಿಲ್ಲ. ಆ ಪೀಠದ ಕುರಿತಂತೆ ಅವರಿಗೆ ಭಕ್ತಿ ಸ್ಫುರಿಸಲು ಮುಖ್ಯ ಕಾರಣವೇ ಅಲ್ಲಿ ದರ್ಗಾ ಇರುವುದು. ಇಷ್ಟಕ್ಕೂ ದರ್ಗಾಗಳನ್ನು ಮುಸ್ಲಿಮರೊಳಗಿರುವ ಕೆಲವು ಗುಂಪುಗಳೂ ಒಪ್ಪುವುದಿಲ್ಲ ಎನ್ನುವುದು ಇವರಿಗೆ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸೂಫಿ ಸಂತರ ಸಭೆಯಲ್ಲಿ ಭಾಗವಹಿಸಿದ್ದರು ಮಾತ್ರವಲ್ಲ, ಸೂಫಿ ಚಿಂತನೆ ದೇಶಾದ್ಯಂತ ಹರಡಬೇಕು ಎಂದು ಈ ಹಿಂದೆ ಕರೆ ನೀಡಿದ್ದರು.

ಸೂಫಿ ಚಿಂತನೆಗಳಿರುವ ಇಂತಹ ಕ್ಷೇತ್ರಗಳಲ್ಲಿ ಧಾರ್ಮಿಕ ಭಾವೈಕ್ಯಗಳಿರುತ್ತವೆ. ಇಲ್ಲಿ ಧರ್ಮ ಮುಖ್ಯವಾಗದೇ ಸ್ಥಳೀಯ ಸಾಂಸ್ಕೃತಿಕ ಭಾವೈಕ್ಯ ಮುಂಚೂಣಿಯನ್ನು ಪಡೆದಿರುತ್ತದೆ. ಬಾಬಾಬುಡಾನ್‌ಗಿರಿಯಲ್ಲಿ ಈ ಹಿಂದೆಯೂ ಮುಸ್ಲಿಮೇತರರು ತೆಂಗಿನ ಕಾಯಿ ಒಡೆಯುತ್ತಾ ಬಂದಿದ್ದಾರೆ. ಆಗ ಈಗಿನಂತೆ ದತ್ತಮಾಲೆಯಂತಹ ಪದ್ಧತಿಗಳು ಇರಲಿಲ್ಲ. ಆದರೆ ಅವರು ಅಲ್ಲಿ ಧರ್ಮ ಭೇದಗಳನ್ನು ನೋಡದೆ ಬರೇ ಭಕ್ತಿಯನ್ನಷ್ಟೇ ಹೊತ್ತುಕೊಂಡು ಬರುತ್ತಿದ್ದರು. ಹರಕೆಗಳನ್ನು ಹೊರುವಾಗ ಹಿಂದೂ ದೇವರು, ಮುಸ್ಲಿಮರ ದರ್ಗಾ ಎಂಬ ಭಾವನೆಗಳು ಇದ್ದಿರಲಿಲ್ಲ. ಆದರೆ ಸಂಘಪರಿವಾರ ತಮ್ಮ ಕಪಟ ಭಕ್ತಿಯನ್ನು ಅಲ್ಲಿಗೆ ತರುವ ಮೂಲಕ ಹಿಂದೂ ಧರ್ಮವನ್ನು ಮತ್ತೆ ಬಾಬಾಬುಡಾನ್‌ಗಿರಿಯಲ್ಲಿ ನಗೆಪಾಟಲಿಗೀಡು ಮಾಡಿದೆ. ದತ್ತಮಾಲಾಧಾರಿಗಳು ಭಕ್ತಿಯ ಕಾರಣಕ್ಕಾಗಿ ಆ ಪ್ರದೇಶಕ್ಕೆ ಹೋಗಿರುವುದು ನಿಜವೇ ಆಗಿದ್ದರೆ ಅವರು ಅಲ್ಲಿ ದಾಂಧಲೆ ನಡೆಸುವ ಅಗತ್ಯವಿತ್ತೇ? ದ್ವೇಷವನ್ನು ಒಡಲೊಳಗೆ ಇಟ್ಟುಕೊಂಡು ಅದು ಯಾವ ಮಾಲೆಯನ್ನು ಧರಿಸಿದರೂ ಅವರು ದೇವರನ್ನು ಒಲಿಸಿಕೊಳ್ಳಲು ಸಾಧ್ಯವೇ? ಒಂದು ವೇಳೆ ಅಲ್ಲಿ ದರ್ಗಾ ಇಲದೇ ಇದ್ದಿದ್ದರೆ ಇವರು ಹೀಗೆ ಮಾಲೆ ಧರಿಸಿ ಮೆರವಣಿಗೆ ಸಾಗುತ್ತಿದ್ದರೇ? ಅಂದರೆ ಇನ್ನೊಂದು ಧರ್ಮವನ್ನು ದ್ವೇಷಿಸುವ ಮೂಲಕವಲ್ಲದೆ ತಮ್ಮ ಧರ್ಮದ ಜಾಗೃತಿ ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ಈ ಸಂಘಪರಿವಾರ ದೇಶಕ್ಕೆ ನೀಡುತ್ತಿದೆಯೇ? ಇದರಿಂದ ಧರ್ಮಕ್ಕೆ ಯಾವ ಪ್ರಯೋಜನವಿದೆ? ಪರೋಕ್ಷವಾಗಿ ಹಿಂದೂ ಧರ್ಮದ ತತ್ವ, ಸಿದ್ಧಾಂತಗಳಿಗೆ ಇವರು ಅವಮಾನ ಮಾಡುತ್ತಿದ್ದಾರೆ. ಹಿಂದೂ ಧರ್ಮದ ದೇವರು, ನಂಬಿಕೆಯನ್ನು ತಮ್ಮ ರಾಜಕೀಯಕ್ಕೆ ಬಳಸಿ ಅವುಗಳನ್ನು ಅಪಹಾಸ್ಯಕ್ಕೀಡು ಮಾಡುತ್ತಿದ್ದಾರೆ. ನಿಜವಾದ ಭಕ್ತಿ, ಅಧ್ಯಾತ್ಮದ ದಾಹ ಇರುವವರು ಇವರ ಈ ವಿಕೃತಿಗೆ ಹೇಸಿ ಹಿಂದೂ ಧರ್ಮದ ತಾತ್ವಿಕ ನೆಲೆಗಟ್ಟನ್ನೇ ಸಂಶಯಿಸಿದರೆ ಅಚ್ಚರಿಯೇನೂ ಇಲ್ಲ. ದತ್ತಪೀಠವಿರಲಿ, ರಾಮಜನ್ಮಭೂಮಿಯಿರಲಿ, ಅಲ್ಲಿ ದರ್ಗಾ ಅಥವಾ ಮಸೀದಿ ಇದೆ ಎನ್ನುವ ಕಾರಣಕ್ಕಾಗಿ ತಮ್ಮ ಧರ್ಮ ನೆನಪಾದರೆ ಅದನ್ನು ಧರ್ಮ ಜಾಗೃತಿಯೆಂದು ಕರೆಯುವುದು ಹಿಂದೂ ಧರ್ಮಕ್ಕೆ ಮಾಡುವ ಅವಮಾನವಾಗಿದೆ. ಸಂಘಪರಿವಾರದ ದುಷ್ಕರ್ಮಿಗಳಿಂದ ಹಿಂದೂ ಧರ್ಮವನ್ನು ರಕ್ಷಿಸುವ ಕೆಲಸಕ್ಕೆ, ನಿಜವಾದ ಭಕ್ತಿವಾದಿಗಳು, ಅಧ್ಯಾತ್ಮವಾದಿಗಳು ಹಿಂದೂ ಧರ್ಮದಿಂದಲೇ ಹುಟ್ಟಿ ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News