ಎನ್‌ಐಎ ತಂಡದ ಮೇಲೆಯೇ ಗುಂಡು ಹಾರಾಟ

Update: 2017-12-04 03:45 GMT

ಗಾಝಿಯಾಬಾದ್/ ಮೀರತ್: ಹತ್ಯೆ ಪ್ರಕರಣವೊಂದರ ಸಂಬಂಧ ತನಿಖೆಗೆ ಆಗಮಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸದಸ್ಯರ ಮೇಲೆ ಸ್ಥಳೀಯರ ಗುಂಪೊಂದು ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ತೆಹಝೀಬ್ ಖಾನ್ ಎಂಬ ಪೊಲೀಸ್ ಪೇದೆ ಗಾಯಗೊಂಡಿದ್ದಾರೆ.

ಈ ವರ್ಷದ ಅಕ್ಟೋಬರ್ 17ರಂದು ಲೂಧಿಯಾನಾದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ರವೀಂದ್ರ ಗೋಶಿಯಾನ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಝಿಯಾಬಾದ್‌ನ ನಹಾಲಿ ಗ್ರಾಮದಲ್ಲಿ ಕಾರ್ಯಾಚರಣೆಗಾಗಿ ಎನ್‌ಐಎ ತಂಡ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಎಟಿಎಸ್ ನೆರವಿನೊಂದಿಗೆ ರವಿವಾರ ಶಸ್ತ್ರಾಸ್ತ್ರ ಸರಬರಾಜುದಾರರೊಬ್ಬರ ಮನೆಯ ಮೇಲೆ ದಾಳಿ ನಡೆಸಿದಾಗ ಸ್ಥಳೀಯರ ಗುಂಪು ಇದನ್ನು ವಿರೋಧಿಸಿ ಎನ್‌ಐಎ ತಂಡದತ್ತ ಗುಂಡು ಹಾರಿಸಿತು ಎಂದು ತಿಳಿದುಬಂದಿದೆ.

ಈ ಸಂಬಂಧ ದೊಂಬಿ, ಹತ್ಯೆ ಯತ್ನ ಪ್ರಕರಣವನ್ನು ಏಳು ಮಂದಿಯ ವಿರುದ್ಧ ದಾಖಲಿಸಲಾಗಿದೆ. ಇತರ 50 ಮಂದಿ ಗುರುತು ಪತ್ತೆಯಾಗದವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಸಂಬಂಧ ನಝೀಮ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಆಕಾಶ್ ಥೋಮರ್ ಸ್ಪಷ್ಟಪಡಿಸಿದ್ದಾರೆ.

ಉತ್ತರ ಪ್ರದೇಶದ ಡಿಜಿಪಿ ಹೇಳಿಕೆಯ ಪ್ರಕಾರ ಎನ್‌ಐಎ ಮತ್ತು ಎಟಿಎಸ್ ತಂಡ ಮೀರತ್ ನ ಏಳು ಕಡೆಗಳಲ್ಲಿ ದಾಳಿ ನಡೆಸಿದೆ. ಪಂಜಾಬ್‌ನಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪ ಎದುರಿಸುತ್ತಿರುವ ವ್ಯಕ್ತಿಗಾಗಿ ಈ ಶೋಧ ನಡೆದಿದೆ.

ಮುಖ್ಯ ಶಂಕಿತ ಆರೋಪಿ ಮಲೂಕ್ ಬಗ್ಗೆ ಮಾಹಿತಿ ನೀಡಿದ ಕೆಲ ಶಂಕಿತರನ್ನು ತಂಡ ವಶಕ್ಕೆ ಪಡೆದಿತ್ತು. ರವಿವಾರ ಮೀರತ್ ನಲ್ಲಿರುವ ಮಲೂಕ್ ನಿವಾಸದ ಮೇಲೆ ದಾಳಿ ಮಾಡಿದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಕಲ್ಲು ತೂರಾಟ ನಡೆಸಿದರು ಹಾಗೂ ಗುಂಡಿನ ದಾಳಿ ನಡೆಸಿದರು ಎಂದು ವಿವರಿಸಿದ್ದಾರೆ.

"ಪುರುಷರು ಹಾಗೂ ಮಹಿಳೆಯರನ್ನು ಹೊಂದಿದ್ದ ದೊಡ್ಡ ಗುಂಪು ದಾಳಿಗೆ ಪ್ರತಿರೋಧ ವ್ಯಕ್ತಪಡಿಸಿದೆ. ಹಲವು ಕಡೆ ರಸ್ತೆ ತಡೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದೆ ಎಂದು ಎನ್‌ಐಎ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News