ಅಗತ್ಯ ಮಾಹಿತಿ-ಪುರಾವೆಗಳನ್ನೆ ನೀಡಿಲ್ಲ: ಉಗ್ರಪ್ಪ

Update: 2017-12-05 12:54 GMT

ಬೆಂಗಳೂರು, ಡಿ. 5: ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ವಿರುದ್ಧದ ಲೈಂಗಿಕ ಕಿರುಕುಳದ ದೂರಿಗೆ ಸಂಬಂಧಿಸಿದಂತೆ ದೂರುದಾರರು ಅಗತ್ಯ ಮತ್ತು ಸಮರ್ಪಕ ಮಾಹಿತಿ, ಅಗತ್ಯ ಪುರಾವೆ ಹಾಗೂ ಸಾಂದರ್ಭಿಕ ಸಾಕ್ಷಗಳನ್ನೆ ಒದಗಿಸಿಲ್ಲ ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲ್ಕಂಡ ಪ್ರಕರಣ ಸಂಬಂಧ ಎರಡು ದೂರು ನೀಡಿದ್ದು, ವೈಯಕ್ತಿಕ ದೂರಿಗೆ ಸಂಬಂಧಿಸಿದಂತೆ ದಿನಾಂಕ, ಸಮಯ, ಸ್ಥಳ ಮತ್ತು ಸಾಂದರ್ಭಿಕ ಸಾಕ್ಷಗಳೇ ಇಲ್ಲ. ಈ ಬಗ್ಗೆ ಮಾಹಿತಿ ನೀಡಲು ಕೋರಿದರೂ ಅವರು ನೀಡಿಲ್ಲ ಎಂದರು.

ಈ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ತಾನೇ ಖುದ್ದು ಎಸ್.ಮೂರ್ತಿ ಅವರಿಗೆ ಕರೆ ಮಾಡಿ ವಿಚಾರಣೆ ನಡೆಸಿದ್ದೇನೆ. ಈ ವೇಳೆ ಅವರು ತಾನು ಯಾವುದೇ ಮಹಿಳೆಯರನ್ನು ವೈಯಕ್ತಿಕವಾಗಿ ಭೇಟಿ ಮಾಡುವುದಿಲ್ಲ. ಸಚಿವಾಲಯದಲ್ಲಿ ಶೇ60ರಷ್ಟು ಮಂದಿ ಮಹಿಳಾ ಸಿಬ್ಬಂದಿ ಇದ್ದಾರೆ.

ತಾನು ಪರಿಶಿಷ್ಟ ಜಾತಿಗೆ ಸೇರಿದ್ದು, ಉನ್ನತ ಹುದ್ದೆಯಲ್ಲಿದ್ದೇನೆಂಬ ಏಕೈಕ ಕಾರಣಕ್ಕೆ ತನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ತನಗೂ ತಾಯಿ, ಪತ್ನಿ, ಹೆಣ್ಣು ಮಕ್ಕಳಿದ್ದು, ಯಾವುದೇ ಹೆಣ್ಣು ಮಕ್ಕಳಿಗೂ ತಾನು ಕಿರುಕುಳ ನೀಡಿಲ್ಲ. ಈ ಸಂಬಂಧ ಯಾವುದೇ ವಿಚಾರಣೆಗೆ ಸಿದ್ಧ ಎಂದು ಹೇಳಿದ್ದಾರೆಂದು ವಿವರಿಸಿದರು.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಗಮನಕ್ಕೂ ತಂದಿದ್ದೇನೆ. ಮೂರ್ತಿ ವಿರುದ್ಧ ಆರೋಪ ಮಾಡುತ್ತಿರುವ ಮಹಿಳೆ ಸಚಿವಾಲಯದ ಆಂತರಿಕ ಸಮಿತಿಗೂ ದೂರು ನೀಡಿಲ್ಲ. ಅವರು ಈ ಸಂಬಂಧ ಸೂಕ್ತ ಮಾಹಿತಿ ನೀಡಿದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News