ಜಗತ್ತಿನಾದ್ಯಂತ ಮಾನವ ಹಕ್ಕು ಪ್ರತಿಪಾದಕರು ಅಪಾಯದಲ್ಲಿ: ಆಮ್ನೆಸ್ಟಿ ವರದಿ

Update: 2017-12-05 15:53 GMT

ಬೆಂಗಳೂರು, ಡಿ.5: ಜಗತ್ತಿನಾದ್ಯಂತ ಮಾನವ ಹಕ್ಕನ್ನು ಪ್ರತಿಪಾದಿಸುವ ಮತ್ತು ರಕ್ಷಿಸುವ ಜನರು ದೌರ್ಜನ್ಯ, ಹಿಂಸೆ, ಕಾನೂನುಬಾಹಿರ ಬಂಧನ ಮುಂತಾದ ಶೋಷಣೆಗಳಿಗೆ ಒಳಗಾಗುತ್ತಿದ್ದು ಅಪಾಯಕ್ಕೆ ಸಿಲುಕಿದ್ದಾರೆ ಎಂದು ಆಮ್ನೆಸ್ಟಿ ಅಂತಾರಾಷ್ಟ್ರೀಯ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

  1998ರಿಂದೀಚೆಗೆ ಜಗತ್ತಿನಾದ್ಯಂತ 3,500 ಮಾನವಹಕ್ಕು ಪ್ರತಿಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿರುವ ವರದಿಯಲ್ಲಿ 2014ರಲ್ಲಿ 136 ಮತ್ತು 2015ರಲ್ಲಿ 156ರಷ್ಟಿದ್ದ ಈ ಸಂಖ್ಯೆ 2016ರ ವೇಳೆಗೆ 281 ತಲುಪಿರುವುದಾಗಿ ತಿಳಿಸುತ್ತದೆ. ಪತ್ರಕರ್ತರ ರಕ್ಷಣಾ ಸಮಿತಿಯ ಪ್ರಕಾರ 2016ರಲ್ಲಿ ಜಾಗತಿಕವಾಗಿ 48 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಜಮೀನು ಮತ್ತು ಪರಿಸರಕ್ಕೆ ಸಂಬಂಧಪಟ್ಟಂತೆ ಭಾರತವು ಮಾನವಹಕ್ಕು ಪ್ರತಿಪಾದಕರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ ಎಂದು ವರದಿ ತಿಳಿಸುತ್ತದೆ.

 ಮಾನವಹಕ್ಕು ರಕ್ಷಕರು ಹಾಗೂ ಭಾರತ, ಅರ್ಜೆಂಟೀನಾ, ಬರೆಜಿಲ್, ಕೊಲಂಬಿಯಾ, ಕೊಂಗೊ ಗಣರಾಜ್ಯ, ಹೊಂಡುರಸ್, ಇಂಡೋನೇಷ್ಯಾ, ಕೆನ್ಯಾ, ವೌರಿಟಾನಿತಾ, ಮೆಕ್ಸಿಕೊ, ರಷ್ಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಸುಡಾನ್ ಮತ್ತು ಸಿರಿಯಾದಲ್ಲಿ ಹತ್ಯೆಗೀಡಾಗಿರುವ ಮಾನವಹಕ್ಕು ಕಾರ್ಯಕರ್ತರ ಸಂಬಂಧಿಕರು ಮತ್ತು ಸಹೋದ್ಯೋಗಿಗಳ ಹೇಳಿಕೆಗಳನ್ನು ಈ ವರದಿಯಲ್ಲಿ ದಾಖಲಿಸಲಾಗಿದೆ. ಈ ಮಾನವಹಕ್ಕು ಕಾರ್ಯಕರ್ತರು ರಕ್ಷಣೆಯನ್ನು ಕೋರಿ ಮಾಡುವ ಮನವಿಯನ್ನು ಸರಕಾರಗಳು ಹೇಗೆ ನಿರ್ಲಕ್ಷಿಸುತ್ತವೆ ಮತ್ತು ದಾಳಿಕೋರರು ಯಾವ ರೀತಿ ಕಾನೂನಿನಿಂದ ತಪ್ಪಿಸಿಕೊಳ್ಳುತ್ತಾರೆ ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಪತ್ರಕರ್ತರು, ಭೂಹಕ್ಕು ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತರ, ದಲಿತರ, ಆದಿವಾಸಿಗಳ ಜನಾಂಗೀಯ ಮತ್ತು ಧಾರ್ಮಿಕ ಹಕ್ಕುಗಳನ್ನು ಪ್ರತಿಪಾದಿಸುವವರು ಹೆಚ್ಚು ಅಪಾಯವನ್ನು ಎದುರಿಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಾನವಹಕ್ಕು ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸರಿಯಾದ ರಕ್ಷಣೆ ನೀಡಬೇಕಾದ ಸರಕಾರವೇ ಈ ಕಾರ್ಯಕರ್ತರನ್ನು ಅಪರಾಧಿಗಳು, ವಿದೇಶಿ ಏಜೆಂಟ್‌ಗಳು ಮತ್ತು ಭಯೋತ್ಪಾದಕರೆಂದು ಬಿಂಬಿಸಿ ಅಭಿವೃದ್ಧಿ ಮತ್ತು ಸಾಂಪ್ರದಾಯಿಕ ವೌಲ್ಯಗಳಿಗೆ ಅಪಾಯ ಉಂಟುಮಾಡುವವರು ಎಂದು ಆರೋಪಿಸುತ್ತದೆ. ಇಂತಹ ಹಣೆಪಟ್ಟಿಗಳನ್ನು ನೀಡುವುದು ಸಾಂವಿಧಾನಿಕ ಹಕ್ಕುಗಳಿಗೆ ವಿರುದ್ಧವಾಗಿದೆ ಮತ್ತು ಹೆಚ್ಚಿನ ಹಿಂಸೆಗೆ ಪ್ರೇರಣೆ ನೀಡುತ್ತದೆ ಎಂದು ಭಾರತದ ಆಮ್ನೆಸ್ಟಿ ಅಂತಾರಾಷ್ಟ್ರೀಯದ ಕಾರ್ಯಕ್ರಮ ನಿರ್ದೇಶಕರಾದ ಅಸ್ಮಿತಾ ಬಸು ವಿವರಿಸುತ್ತಾರೆ.

ಈ ವರದಿಯಲ್ಲಿ 2017ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ತಮ್ಮ ನಿವಾಸದ ಮುಂದೆಯೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಮಾನವಹಕ್ಕು ಪ್ರತಿಪಾದಕಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಬಗ್ಗೆಯೂ ವಿವರಿಸಲಾಗಿದೆ. ಗೌರಿ ಲಂಕೇಶ್ ಅಭಿವ್ಯಕ್ತಿ ಸ್ವಾತಂತ್ರದ ಪ್ರತಿಪಾದಕಿಯಾಗಿದ್ದು ಮೂಲಭೂತ ಹಿಂದೂ ಸಂಘಟನೆಗಳ ವಿರುದ್ಧ ಹೋರಾಟ ಸಂಘಟಿಸಿದ್ದರು ಹಾಗಾಗಿ ಆಕೆಯ ಹಲವು ಬಾರಿ ಬೆದರಿಕೆಗಳನ್ನು ಎದುರಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಛತ್ತೀಸ್‌ಘಡದ ಆದಿವಾಸಿ ಸಮುದಾಯದ ನಾಯಕ ಜೈಲಾಲ್ ರತಿಯಾ ಆದಿವಾಸಿ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅವರು 2017ರಲ್ಲಿ ವಿಷಾಹಾರ ಸೇವನೆಯಿಂದ ಮೃತಪಟ್ಟರು. ಅವರ ಆಹಾರಕ್ಕೆ ಯಾರೋ ಕಿಡಿಗೇಡಿಗಳು ವಿಷ ಬೆರೆಸಿದ್ದಾರೆ ಎಂದು ರತಿಯಾ ಕುಟುಂಬ ಆರೋಪಿಸಿತ್ತು. ಸ್ಥಳೀಯ ಭೂಮಾಫಿಯಾ ಮತ್ತು ಪೊಲೀಸರು ನ್ಯಾಯಾಲಯದಲ್ಲಿ ಹಾಕಿರುವ ದಾವೆಯನ್ನು ಹಿಂಪಡೆಯುವಂತೆ ರತಿಯಾ ಮೇಲೆ ಒತ್ತಡ ಹೇರಿದ್ದವು ಮತ್ತು ಬೆದರಿಕೆಯನ್ನು ಕೂಡಾ ಹಾಕಿದ್ದವು.

 ಮಹಾರಾಷ್ಟ್ರದ ದಲಿತ ಮಾನವಹಕ್ಕುಗಳ ಕಾರ್ಯಕರ್ತ ಚಂದ್ರಕಾಂತ್ ಗಾಯಕ್ವಾಡ್‌ರನ್ನು 2013ರಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಅವರು ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ಕಾರಣಕ್ಕೆ ಸಿಟ್ಟೆದ್ದ ಆ ವ್ಯಕ್ತಿ ಚಂದ್ರಕಾಂತ್‌ರನ್ನು ಗುಂಡಿಟ್ಟು ಸಾಯಿಸಿದ್ದ ಎಂದು ವರದಿ ತಿಳಿಸುತ್ತದೆ.

ಅನೇಕ ಪ್ರಕರಣಗಳಲ್ಲಿ ಹತ್ಯೆಗೂ ಮುನ್ನ ಮಾನವಹಕ್ಕು ಕಾರ್ಯಕರ್ತರಿಗೆ ಹಲವು ಬೆದರಿಕೆ ಕರೆಗಳು ಬಂದಿರುತ್ತವೆ. ಆದರೆ ಈ ಬಗ್ಗೆ ಸರಕಾರ ಮಾತ್ರ ನಿರ್ಲಕ್ಷ ಧೋರಣೆ ಅನುಸರಿಸುತ್ತದೆ. ಇವರ ಮನವಿಯನ್ನು ಪುರಸ್ಕರಿಸಿ ಬೆದರಿಕೆ ಕರೆಗಳ ಬಗ್ಗೆ ಸರಕಾರಗಳು ಗಂಭೀರವಾಗಿ ಪರಿಗಣಿಸಿದ್ದರೆ ಹಲವು ಜೀವಗಳು ಉಳಿಯುತ್ತಿದ್ದವು ಎಂದು ಅಸ್ಮಿತಾ ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News