ಪೊಲೀಸರತ್ತ ಕಲ್ಲೆಸೆದ ಬಾಲಕಿ ಇದೀಗ ರಾಜ್ಯ ಫುಟ್ಬಾಲ್ ತಂಡದ ನಾಯಕಿ

Update: 2017-12-06 03:56 GMT

ಹೊಸದಿಲ್ಲಿ, ಡಿ.6: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಬಾಲಕಿಯೊಬ್ಬಳು ಕಲ್ಲೆಸೆಯುತ್ತಿದ್ದ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆ ಬಳಿಕ ಆಕೆ ಫುಟ್ಬಾಲ್ ಆಟಗಾರ್ತಿ ಅಫ್ಶಾನ್ ಆಶಿಕ್ ಎನ್ನುವುದು ಪತ್ತೆಯಾಗಿತ್ತು. "ಈ ಚಿತ್ರ ಕೇವಲ ನನ್ನ ಕ್ರೀಡಾವೃತ್ತಿಯನ್ನು ಬದಲಿಸಿದ್ದು ಮಾತ್ರವಲ್ಲದೇ, ಪುರುಷ ಪ್ರಧಾನ ಕ್ರೀಡೆಗೆ ಹಲವು ಮಂದಿ ಯುವತಿಯರನ್ನು ಆಕರ್ಷಿಸಲು ಕೂಡಾ ಕಾರಣವಾಗಿದೆ" ಎಂದು ಅವರು ಹೇಳಿದ್ದಾರೆ.

ಈ ಚಿತ್ರ ಆಕೆಯನ್ನು ಫುಟ್ಬಾಲ್ ಆಟಗಾರ್ತಿ ಎಂದು ಪರಿಚಯಿಸಿದ್ದು ಮಾತ್ರವಲ್ಲದೇ, ಬಳಿಕ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡುವ ಅವಕಾಶವೂ ಸಿಕ್ಕಿತ್ತು. ಅಫ್ಶಾನ್ ಹಾಗೂ ಮಹಿಳಾ ಫುಟ್ಬಾಲ್ ಕ್ರೀಡೆಯನ್ನು ಉತ್ತೇಜಿಸುವ ನಿರ್ಧಾರವನ್ನು ಮುಫ್ತಿ ಕೈಗೊಂಡಿದ್ದರು.

ಇದೀಗ ಅಫ್ಶಾನ್ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಹಿಳಾ ಫುಟ್ಬಾಲ್ ತಂಡದ ನಾಯಕಿ ಹಾಗೂ ಗೋಲ್‌ಕೀಪರ್. ಕಾಶ್ಮೀರ ಫುಟ್ಬಾಲ್ ತಂಡ ರಾಷ್ಟ್ರಮಟ್ಟದ ಸ್ಪರ್ಧೆಗೆ ತೆರೆದುಕೊಂಡಿದ್ದು, ಇಂಡಿಯನ್ ಮಹಿಳಾ ಲೀಗ್‌ನಲ್ಲೂ ಪಾಲ್ಗೊಳ್ಳುತ್ತಿದೆ. 23 ವರ್ಷದ ಈ ಅಪೂರ್ವ ಆಟಗಾರ್ತಿ ಮುಂಬೈ ಕ್ಲಬ್ ಪರ ಆಡುತ್ತಿದ್ದು, ಬಾಲಿವುಡ್ ಗಣ್ಯರನ್ನು ಕೂಡಾ ಆಕರ್ಷಿಸಿದ್ದಾರೆ. ಇವರ ಆತ್ಮಕಥೆಯ ಚಿತ್ರ ನಿರ್ಮಾಣವಾಗುತ್ತಿದೆ.

ಮಂಗಳವಾರ ಅಫ್ಶಾನ್ 22 ಮಂದಿಯ ಫುಟ್ಬಾಲ್ ತಂಡ, ಕೋಚ್ ಸತ್ಪಾಲ್ ಸಿಂಗ್ ಕಾಳ ಹಾಗೂ ವ್ಯವಸ್ಥಾಪಕ ಸೆರಿಂಗ್ ಆಂಗ್ಮೊ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಕಾಶ್ಮೀರದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರವನ್ನು ತೆರೆದು ಯುವ ಫುಟ್ಬಾಲ್ ಆಟಗಾರರಿಗೆ ತರಬೇತಿ ನೀಡಲು ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾಗಿ ಅಫ್ಶಾನ್ ಹೇಳಿದ್ದಾರೆ. "ನಾವು ಎತ್ತಿದ ಸಮಸ್ಯೆಗಳ ಬಗ್ಗೆ ಸಚಿವರು ಸ್ಪಂದಿಸಿದ ರೀತಿ ನಮಗೆ ಖುಷಿ ತಂದಿದೆ. ರಾಜ್ಯದಲ್ಲಿ ಉತ್ತಮ ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆ ಕೋರಿದ್ದೇವೆ. ನಮ್ಮೆದುರೇ ಮುಖ್ಯಮಂತ್ರಿಗೆ ಕರೆ ಮಾಡಿ, ಸೂಚನೆ ನೀಡಿದ್ದಾರೆ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News