ಫೆಲೆಸ್ತೀನ್ ಬಗ್ಗೆ ಭಾರತ ಸ್ವತಂತ್ರ ನಿಲುವು: ವಿದೇಶಾಂಗ ವ್ಯವಹಾರಗಳ ವಕ್ತಾರ

Update: 2017-12-07 06:33 GMT

ಹೊಸದಿಲ್ಲಿ, ಡಿ.7: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ವಿವಾದಿತ ಜೆರುಸಲೆಂ ನಗರವನ್ನು ಇಸ್ರೇಲ್ ದೇಶದ ರಾಜಧಾನಿಯನ್ನಾಗಿ ಮಾನ್ಯ ಮಾಡಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಭಾರತ, ತಾನು ಫೆಲೆಸ್ತೀನ್ ವಿಚಾರದಲ್ಲಿ ಸ್ವತಂತ್ರ ನಿಲುವು ಹೊಂದಿರುವುದಾಗಿ ತಿಳಿಸಿದ್ದು, ಯಾವುದೇ ಮೂರನೇ ರಾಷ್ಟ್ರದ ನಿಲುವಿನಿಂದ ಪ್ರಭಾವಿತವಾಗುವುದಿಲ್ಲ ಎಂದಿದೆ.

‘‘ಫೆಲೆಸ್ತೀನ್ ಬಗ್ಗೆ ಭಾರತದ ನಿಲುವು ನಮ್ಮ ಅಭಿಪ್ರಾಯ ಹಾಗೂ ಹಿತಾಸಕ್ತಿಗಳನ್ನು ಅವಲಂಬಿಸಿದೆಯೇ ಹೊರಲು ಮೂರನೇ ರಾಷ್ಟ್ರದ ನಿಲುವಿನಿಂದಲ್ಲ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಅಮೆರಿಕ ಈಗಾಗಲೇ ತನ್ನ ರಾಯಭಾರ ಕಚೇರಿಯನ್ನು ಟೆಲ್ ಅವೀವ್ ನಿಂದ ಜೆರುಸಲೆಂಗೆ ಸ್ಥಳಾಂತರಿಸುವ ಕಾರ್ಯ ಆರಂಭಿಸಿದೆ. ಅರಬ್ ಹಾಗೂ ಮುಸ್ಲಿಂ ದೇಶಗಳು ಈ ಕ್ರಮವನ್ನು ಖಂಡಿಸಿವೆಯಲ್ಲದೆ ಅಮೆರಿಕ ಶಾಂತಿಯ ರಾಯಭಾರಿಯಾಗಬೇಕಿದ್ದ ತನ್ನ ಪಾತ್ರದಿಂದ ಹಿಂದೆ ಸರಿದಿದೆ ಎಂದು ಹೇಳಿವೆ.

ಅತ್ತ ಫೆಲೆಸ್ತೀನ್ ಹಾಗೂ ಇಸ್ರೇಲ್ ಎರಡರೊಂದಿಗೂ ಸ್ನೇಹದಿಂದಿರುವ ಭಾರತಕ್ಕೆ ಅಮೆರಿಕ ತಳೆದಿರುವ ಈ ನಿಲುವು ಒಂದು ರೀತಿಯ ಸಂದಿಗ್ಧ ಪರಿಸ್ಥಿತಿಯನ್ನೊಡ್ಡಿದೆ. ಭಾರತ ಯಾವತ್ತೂ ಫೆಲೆಸ್ತೀನ್ ಗೆ ಬೆಂಬಲವಾಗಿದ್ದು, ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರದ ರಾಜಧಾನಿಯನ್ನಾಗಿ ಅದು ಯಾವತ್ತೂ ಪೂರ್ವ ಜೆರುಸಲೆಂ ಎಂದೇ ತನ್ನ ಹೇಳಿಕೆಗಳನ್ನು ಉಲ್ಲೇಖಿಸುತ್ತದೆ.

ಈ ವರ್ಷ ಫೆಲೆಸ್ತೀನ್ ಅಧ್ಯಕ್ಷ ಮೊಹಮೌದ್ ಅಬ್ಬಾಸ್ ಅವರ ಭಾರತ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಬೆಂಬಲ ಘೋಷಿಸಿದ್ದರು. ಆದರೆ ಜಂಟಿ ಹೇಳಿಕೆಯಲ್ಲಿ ಪೂರ್ವ ಜೆರುಸಲೆಂ ಉಲ್ಲೇಖವಿರಲಿಲ್ಲ.

1992ರಿಂದ ಭಾರತ ಇಸ್ರೇಲ್ ಜತೆಗೆ ಉತ್ತಮ ಸಂಬಂಧ ಹೊಂದಿದ್ದು, ಪ್ರಧಾನಿ ಮೋದಿಯವರು ಇಸ್ರೇಲ್ ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News