‘ಶೇ.90ರಷ್ಟು ಜಿಲ್ಲಾಡಳಿತದ ಅಂತರ್ಜಾಲ ಪುಟಗಳು ಕನ್ನಡದಲ್ಲಿಲ್ಲ’

Update: 2017-12-07 13:31 GMT

ಬೆಂಗಳೂರು, ಡಿ.7: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಸಕ್ತ ಸಾಲಿನಲ್ಲಿ 16 ಜಿಲ್ಲೆಗಳಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದಾಗ ಜಿಲ್ಲೆಯ ಅಂತರ್ಜಾಲ ಪುಟ ಆಂಗ್ಲ ಭಾಷೆಯಲ್ಲಿರುವುದನ್ನು ಗಮನಿಸಲಾಗಿದೆ ಎಂದು ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ.

ಜಿಲ್ಲಾಡಳಿತದ ಅಂತರ್ಜಾಲದ ಪ್ರಧಾನ ಪುಟ ಕನ್ನಡದಲ್ಲಿರುವಂತೆ ಮರು ವಿನ್ಯಾಸಗೊಳಿಸುವುದಲ್ಲದೆ ಎಲ್ಲ ಮಾಹಿತಿಗಳನ್ನೂ ಕನ್ನಡದಲ್ಲಿ ನೀಡಬೇಕು ಮತ್ತು ಆಯ್ಕೆ ಭಾಷೆಯಾಗಿ ಮಾತ್ರ ಇತರೆ ಭಾಷೆಯಲ್ಲಿ ಮಾಹಿತಿಯನ್ನು ಬಳಸಬೇಕು ಎಂದು ಸಷ್ಟ ಸೂಚನೆಗಳನ್ನು ನೀಡಲಾಗಿತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.

ಆದರೂ, 16 ಜಿಲ್ಲೆಗಳ (ಬೀದರ್, ರಾಯಚೂರು, ಬಳ್ಳಾರಿ, ರಾಮನಗರ, ಚಾಮರಾಜನಗರ, ಶಿವಮೊಗ್ಗ, ಬೆಂಗಳೂರು ನಗರ, ಮಂಡ್ಯ, ಚಿಕ್ಕಮಗಳೂರು, ಹಾಸನ, ವಿಜಯಪುರ, ಉತ್ತರ ಕನ್ನಡ, ಗದಗ, ಉಡುಪಿ, ಚಿತ್ರದುರ್ಗ, ದಕ್ಷಿಣ ಕನ್ನಡ) ಜಿಲ್ಲಾಡಳಿತದ ಅಂತರ್ಜಾಲ ಮುಖಪುಟವು ಈಗಲೂ ಆಂಗ್ಲ ಭಾಷೆಯಲ್ಲಿದ್ದು ಅಗತ್ಯ ಮಾಹಿತಿಗಳೂ ಆಂಗ್ಲ ಭಾಷೆಯಲ್ಲಿಯೇ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನುಳಿದಂತೆ 8 ಜಿಲ್ಲೆಗಳ (ಕೊಪ್ಪಳ, ತುಮಕೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಬಾಗಲಕೋಟೆ, ಕೊಡಗು, ಹಾವೇರಿ) ಜಿಲ್ಲಾಡಳಿತದ ಮುಖಪುಟ ಕನ್ನಡದಲ್ಲಿದ್ದು ಒಳ ಮಾಹಿತಿಗಳು ಆಂಗ್ಲ ಭಾಷೆಯಲ್ಲಿದೆ. ಕೇವಲ 6 ಜಿಲ್ಲೆಗಳು(ಬೆಳಗಾವಿ, ಧಾರವಾಡ, ದಾವಣಗೆರೆ, ಕಲಬುರಗಿ, ಯಾದಗಿರಿ, ಚಿಕ್ಕಬಳ್ಳಾಪುರ) ಮಾತ್ರ ತಮ್ಮ ಜಿಲ್ಲಾಡಳಿತದ ಅಂತರ್ಜಾಲ ತಾಣವನ್ನು ಸಂಪೂರ್ಣ ಕನ್ನಡದಲ್ಲಿ ರೂಪಿಸಿರುತ್ತವೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಲಾಖೆ, ಜಿಲ್ಲಾಡಳಿತದ ಅಂತರ್ಜಾಲ ತಾಣಗಳು ಸರಕಾರದ ಕಾರ್ಯದಕ್ಷತೆ, ಪಾರದರ್ಶಕತೆ, ನಾಗರಿಕ ಸ್ನೇಹಿತ್ವ ಮತ್ತು ಸಂವಹನಾಶೀಲತೆ ಇವೆಲ್ಲವನ್ನೂ ಬಿಂಬಿಸುತ್ತವೆ. ಸರಕಾರದ ಯೋಜನೆಗಳು ಯೋಜಿತ ಫಲಾನುಭವಿಗಳಿಗೆ ತಲುಪುವಲ್ಲಿ ಅಂತರ್ಜಾಲ ತಾಣಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಸರಕಾರವು ಎಲ್ಲ ಇಲಾಖೆ, ಜಿಲ್ಲಾಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಏಕರೂಪ ಜಾಲತಾಣ ನಿರ್ವಹಣೆ ಹಾಗು ಶಿಷ್ಟತೆ ಕುರಿತಂತೆ ಈಗಾಗಲೆ ಪ್ರಾಧಿಕಾರ ಸಲ್ಲಿಸಿರುವ ವರದಿಯನ್ನು ಅನುಷ್ಠಾನಗೊಳಿಸಲು ಮುಂದಾಗಿರುತ್ತದೆ. ರಾಜ್ಯ ಸರಕಾರದ ಎಲ್ಲ ಇಲಾಖೆ, ಜಿಲ್ಲಾಡಳಿತ ಎಲ್ಲ ಹಂತಗಳಲ್ಲೂ ಕನ್ನಡವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ 1983ರಲ್ಲಿ ರಾಜ್ಯ ಸರಕಾರ ಆದೇಶ ಹೊರಡಿಸಿ ಕಾಲಾನುಕ್ರಮದಲ್ಲಿ ಅದಕ್ಕೆ ಪೂರಕವಾದ ಆದೇಶ ಸುತ್ತೋಲೆಗಳನ್ನು ಹೊರಡಿಸಲಾಗಿದ್ದರೂ ಈವರೆಗೂ ಜಿಲ್ಲಾಡಳಿತಗಳು ತಮ್ಮ ಕಾರ್ಯತತ್ಪರತೆಯನ್ನು ತೋರದಿರುವುದು ವಿಾದನೀಯ ಎಂದು ಅವರು ಹೇಳಿದ್ದಾರೆ.

ಇದು ಕನ್ನಡ ವಿರೋಧಿ ಧೋರಣೆಯೆಂಬುದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಸ್ಪಷ್ಟ ಸೂಚನೆಯನ್ನು ಪ್ರಾಧಿಕಾರದ ವತಿಯಿಂದ ನೀಡಲಾಗಿದೆ. ಆದುದರಿಂದ, ಕೂಡಲೆ ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡು 15 ದಿನಗಳ ಗಡುವನ್ನು ವಿಧಿಸಿಕೊಂಡಂತೆ ಜಿಲ್ಲಾಡಳಿತಗಳ ಎಲ್ಲ ಅಂತರ್ಜಾಲ ತಾಣದ ಪ್ರಧಾನ ಪುಟ ಕನ್ನಡದಲ್ಲಿರುವಂತೆ ಹಾಗು ಒಳ ಮಾಹಿತಿಗಳು ಕನ್ನಡದಲ್ಲಿಯೆ ಇರುವಂತೆ ರೂಪಿಸಬೇಕು. ಇಲ್ಲದಿದ್ದಲ್ಲಿ ಅಂತಹ ಜಿಲ್ಲಾಡಳಿತದ ವಿರುದ್ಧ ಸರಕಾರಕ್ಕೆ ಶಿಸ್ತು ಕ್ರಮದ ಶಿಫಾರಸು ಮಾಡಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News