ಜನವರಿಯೊಳಗೆ ವಿಜ್ಞಾನ ತಾರಾಲಯಕ್ಕೆ ಚಾಲನೆ: ಎಂ.ಆರ್.ಸೀತಾರಾಂ

Update: 2017-12-07 13:35 GMT

ಬೆಂಗಳೂರು, ಡಿ.7: ತುಮಕೂರಿನ ಪಿಲಕುಳದಲ್ಲಿ ವಿಜ್ಞಾನ ತಾರಾಲಯ ಕೇಂದ್ರ ಸ್ಥಾಪಿಸಲಾಗಿದ್ದು, ಜನವರಿ ಅಂತ್ಯಕ್ಕೆ ಚಾಲನೆ ದೊರೆಯಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ತಿಳಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಿಷನ್ ಗ್ರೂಪ್ ಆಫ್ ನ್ಯಾನೋ ಟೆಕ್ನಾಲಜಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 9ನೆ ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ನೆಹರು ತಾರಾಲಯ ಮಾದರಿಯಲ್ಲಿ ತುಮಕೂರಿನ ಪಿಲಕುಳದಲ್ಲಿ ವಿಜ್ಞಾನ ತಾರಾಲಯ ಕೇಂದ್ರ ಸ್ಥಾಪಿಸಲಾಗಿದ್ದು, ಜನವರಿ ಅಂತ್ಯಕ್ಕೆ ಚಾಲನೆ ದೊರೆಯಲಿದೆ. ವಿಜ್ಞಾನ ಸಂಬಂಧಿತ ಎಲ್ಲ ತಂತ್ರಜ್ಞಾನಗಳ ಕುರಿತ ಪ್ರದರ್ಶನ ಹಾಗೂ ಮಾಹಿತಿ ಇಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ನ್ಯಾನೋ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ವಿಷನ್ ಗ್ರೂಪ್ ಸಂಸ್ಥೆಯು ಹೆಚ್ಚು ಬೆಂಬಲ ನೀಡುತ್ತಿದೆ. ಮೆಡಿಸನ್, ಎಲೆಕ್ಟ್ರಾನಿಕ್ಸ್, ನ್ಯಾನೊ ಫ್ಯಾಬ್ರಿಕೇಷನ್ ಹಾಗೂ ನ್ಯಾನೊ ಫೋಟೊನಿಕ್ಸ್ ತಂತ್ರಜ್ಞಾನಗಳ ಆವಿಷ್ಕಾರ ನಡೆದಿದೆ. ಸ್ಟಾರ್ಟ್‌ಅಪ್ ಕಂಪೆನಿಗಳು ನ್ಯಾನೋ ತಂತ್ರಜ್ಞಾನಗಳ ಅಭಿವೃದ್ಧಿಗೆ ಹೆಚ್ಚಿನ ಒಲವು ತೋರುತ್ತಿವೆ. ಹಾಗೆಯೇ, ನ್ಯಾನೋ ತಂತ್ರಜ್ಞಾನಗಳ ಮೇಲೆ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದು ಬರುತ್ತಿದೆ ಎಂದು ತಿಳಿಸಿದರು.

ಹಿರಿಯ ವಿಜ್ಞಾನಿ, ವಿಷನ್ ಗ್ರೂಪ್‌ನ ಅಧ್ಯಕ್ಷ ಪ್ರೊ.ಸಿ.ಎನ್.ಆರ್.ರಾವ್ ಮಾತನಾಡಿ, ಬೆಂಗಳೂರು ಮತ್ತು ಛತ್ತೀಸ್‌ಗಡದಲ್ಲಿ ನ್ಯಾನೋ ತಂತ್ರಜ್ಞಾನಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಈಗಾಗಲೇ ಅನುಮತಿ ನೀಡಿದೆ. ಬೆಂಗಳೂರಿನಲ್ಲಿ ಕೂಡಲೇ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ನ್ಯಾನೋ ಸಂಬಂಧಿತ ತಂತ್ರಜ್ಞಾನಗಳ ಕುರಿತು ಆವಿಷ್ಕಾರ ಮತ್ತು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.
 ನಮ್ಮ ದೇಶದ ವಿಜ್ಞಾನ ರಾಜಧಾನಿಯಾಗಿ ಬೆಂಗಳೂರು ಪ್ರಖ್ಯಾತಿ ಪಡೆದಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನಗಳ ಆವಿಷ್ಕಾರದಿಂದ ತನ್ನದೆ ಆದ ಛಾಪನ್ನು ಮೂಡಿಸಿದೆ.

ನ್ಯಾನೊ ಅಪ್ಲಿಕೇಷನ್‌ಗಳ ಪ್ರದರ್ಶನಕ್ಕೆ ಇಂದೊಂದು ವೇದಿಕೆಯಾಗಿದೆ. ಸ್ವಚ್ಛ ನೀರು, ಆರೋಗ್ಯ, ಇಂಧನ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ನ್ಯಾನೊ ತಂತ್ರಜ್ಞಾನದ ವಿಶಿಷ್ಟತೆ ಕುರಿತು ಯುವ ಸಮುದಾಯಕ್ಕೆ ಮಾಹಿತಿ ರವಾನಿಸಲು ಇಂತಹ ಸಮಾವೇಶ ಅನುಕೂಲವಾಗಲಿದೆ ಎಂದು ಹೇಳಿದರು.

ಈಗಾಗಲೇ ಆರೋಗ್ಯ ಇಲಾಖೆ ಎರಡು ನ್ಯಾನೋ ತಂತ್ರಜ್ಞಾನ ಸಂಸ್ಥೆಗಳನ್ನು ತೆರೆದಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ನ್ಯಾನೋ ತಂತ್ರಜ್ಞಾನಗಳನ್ನು ಕಂಡು ಹಿಡಿಯಲಾಗುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದು ಪ್ರೊ.ಸಿ.ಎನ್.ಆರ್.ರಾವ್ ನುಡಿದರು.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮಾತನಾಡಿ, ಕರ್ನಾಟಕ ರಾಜ್ಯವು ಬಂಡವಾಳ ಹೂಡಿಕೆಗೆ ನೆಚ್ಚಿನ ತಾಣವಾಗಿ ಪರಿಣಮಿಸಿದೆ. ನಗರದಲ್ಲಿ ಮಾನವ ಸಂಪನ್ಮೂಲಗಳ ಸದ್ಭಳಕೆ, ಕಾನೂನು ಸುವ್ಯವಸ್ಥೆ ಸೂಕ್ತವಾಗಿ ನಡೆಯುತ್ತಿದೆ. ಪರಿಸರ ಸ್ನೇಹಿ ವಾತಾವರಣ ಸೃಷ್ಟಿ ಮಾಡಲು ನ್ಯಾನೋ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಮುಂದಾಗಿರುವುದು ಸಂತಸದ ಸಂಗತಿ ಎಂದರು.

ಸಮಾವೇಶದಲ್ಲಿ ಬೆಂಗಳೂರು ಇಂಡಿಯಾ ನ್ಯಾನೋ ವಿಜ್ಞಾನ 2017 ಪ್ರಶಸ್ತಿಯನ್ನು ಹೊಸದಿಲ್ಲಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಅಶೋಕ ಕೆ.ಗಂಗೂಲಿ ಅವರಿಗೆ ಪ್ರದಾನಿಸಲಾಯಿತು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಪೌಲ್ ಎಸ್.ವೈಸ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News