'ಟೈಮ್' ಮುಖಪುಟದಲ್ಲಿ ಮುಖ ತೋರಿಸದ ವರ್ಷದ ವ್ಯಕ್ತಿ ಯಾರು ?

Update: 2017-12-08 05:48 GMT

ವಾಷಿಂಗ್ಟನ್,ಡಿ.8 : ಪ್ರತಿಷ್ಠಿತ ಟೈಮ್ ಮ್ಯಾಗಝಿನ್ ನ ವಾರ್ಷಿಕ 'ವರ್ಷದ ವ್ಯಕ್ತಿ' (ಪರ್ಸನ್ ಆಫ್ ದಿ ಇಯರ್) ಸಂಚಿಕೆ ಬುಧವಾರ ಬಿಡುಗಡೆಗೊಂಡಾಗ ಅದರ ಮುಖಪುಟದಲ್ಲಿ ಅಚ್ಚರಿಯ ಛಾಯಾಚಿತ್ರವಿತ್ತಲ್ಲದೆ ಅದು ಮೌನವಾಗಿ ಒಂದು ಪರಿಣಾಮಕಾರಿ ಸಂದೇಶ ರವಾನಿಸಿದೆ.

ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು  ಸಾರ್ವಜನಿಕರ ಮುಂದಿಡುವ 'ಸೈಲೆನ್ಸ್ ಬ್ರೇಕರ್ಸ್' ಎಂದೇ ಖ್ಯಾತವಾಗಿರುವ #ಮೀಟೂ ಅಭಿಯಾನದ ಹಿಂದಿರುವ ಪ್ರೇರಕ ಶಕ್ತಿಗಳು ಟೈಮ್ ಮ್ಯಾಗಜೀನ್ ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೇ ಸಾಮಾಜಿಕ ಕಾರ್ಯಕರ್ತೆ ಅದಾಮ ಇವು, ನಟಿ ಆಶ್ಲೇ ಜುಡ್ಡ್, ಗಾಯಕಿ ಟೇಲರ್ ಸ್ವಿಫ್ಟ್, ಮೆಕ್ಸಿಕನ್ ಸ್ಟ್ರಾಬೆರ್ರಿ ಹೆಕ್ಕುವಾಕೆಯಾಗಿರುವ ಇಸಾಬೆಲ್ ಪಾಸ್ಕುವಲ್ ಹಾಗೂ ಮಾಜಿ ಉಬರ್ ಇಂಜಿನಿಯರ್ ಸೂಸನ್ ಫೌಲರ್. ಇನ್ನೊಬ್ಬಾಕೆಯ ಮುಖವನ್ನು ಉದ್ದೇಶಪೂರ್ವಕವಾಗಿ ತೋರಿಸಲಾಗಿಲ್ಲ.

ಈ ಆರನೇ ಯುವತಿ ಲೈಂಗಿಕ ಕಿರುಕುಳ ಸಂತ್ರಸ್ತೆಯಾಗಿದ್ದು ಟೆಕ್ಸಾಸ್ ನ ಆಸ್ಪತ್ರೆಯೊಂದರ ಸಿಬ್ಬಂದಿಯಾಗಿದ್ದಾಳೆ ಎಂದು ಟೈಮ್ ಮ್ಯಾಗಜೀನ್ ಮುಖ್ಯ ಸಂಪಾದಕಿ ಎಡ್ವರ್ಡ್  ಫೆಲ್ಸೆಂಥಲ್ ಹೇಳಿದ್ದಾರೆ. ಆಕೆಯ ಮುಖವನ್ನು ಬಹಿರಂಗಪಡಿಸಿದರೆ ತನ್ನ ಜೀವನಾಧಾರಕ್ಕೆ ತೊಂದರೆಯಾಗಬಹುದೆಂದು ಆಕೆ ಹೇಳಿದ್ದಾಳೆಂದು ಎಡ್ವರ್ಡ್ ವಿವರಿಸಿದ್ದಾರೆ.

ಸಮಾಜದ ಎಲ್ಲಾ ಸ್ತರಗಳ ಮಹಿಳೆಯರೂ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾರೆಂಬುದನ್ನು ಸೂಚಿಸಲು ಮ್ಯಾಗಜೀನ್ ಈ ರೀತಿಯ ಮುಖಪುಟ ಪ್ರಕಟಿಸಿ ಅದ್ಭುತವಾದ ಸಂದೇಶವೊಂದನ್ನು ರವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News