ಕಪ್ಪುಬಣ್ಣಕ್ಕೆ ತಿರುಗಿದ ಅರುಣಾಚಲ ಪ್ರದೇಶದ ನದಿ

Update: 2017-12-09 13:45 GMT

ಇಟಾನಗರ, ಡಿ.9: ಚೀನಾದಲ್ಲಿ ಹುಟ್ಟಿ ಅರುಣಾಚಲ ಪ್ರದೇಶದಲ್ಲಿ ಹರಿಯುವ ಸಿಯಾಂಗ್ ನದಿಯ ನೀರು ಕಳೆದ ಅಕ್ಟೋಬರ್‌ನಿಂದ ಕೆಸರುಮಯವಾಗಿ ಕಪ್ಪುಬಣ್ಣಕ್ಕೆ ತಿರುಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

 ಚೀನಾದಲ್ಲಿ ಯಾರ್ಲಂಗ್ ಸಾಂಗ್‌ಪೊ ಎಂಬ ಹೆಸರಿನ ಈ ನದಿ ಶೌಮಟಾನ್ ನಲ್ಲಿ ಭಾರತವನ್ನು ಪ್ರವೇಶಿಸಿ ಸಿಯಾಂಗ್ ಎಂಬ ಹೆಸರು ಪಡೆದಿದೆ. ಪಸಿಘಾಟ್‌ನಲ್ಲಿ ಸಿಯಾಂಗ್ ನದಿ ಅಸ್ಸಾಂ ಕಡೆ ರಭಸದಿಂದ ಹರಿದು ಬ್ರಹ್ಮಪುತ್ರ ನದಿಯಾಗಿ ಪರಿವರ್ತಿತವಾಗುತ್ತದೆ.

 ಕಳೆದ ಅಕ್ಟೋಬರ್‌ನಿಂದ ಈ ನದಿ ನೀರಿನ ಬಣ್ಣ ಕ್ರಮೇಣ ಕಪ್ಪಾಗುತ್ತಿದೆ. ಚೀನಾ ಏನೋ ಕುಕೃತ್ಯ ಮಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಚೀನಾ ಸರಕಾರ ದಕ್ಷಿಣ ಟಿಬೆಟ್‌ನಲ್ಲಿ ಈ ನದಿಗೆ ಅಣೆಕಟ್ಟು ಕಟ್ಟಿ, ನೀರನ್ನು ಟಾಕ್ಲಮಕನ್ ಮರುಭೂಮಿಯತ್ತ ಸಾಗಿಸಲು ಉದ್ದೇಶಿಸಿದ್ದು ನದಿ ನೀರಿನ ಬಣ್ಣ ಬದಲಾಗಲು ಇದು ಕಾರಣವಾಗಿದೆ ಎಂದೂ ಹೇಳಲಾಗುತ್ತಿದೆ. ಟಿಬೆಟ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದ ಹೀಗಾಗಿರಬಹುದು ಎಂದೂ ಕೆಲವರು ಊಹಿಸಿದ್ದಾರೆ.

 ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳು ನಡೆಸಿರುವ ಪ್ರಾಥಮಿಕ ಪರೀಕ್ಷೆಯಲ್ಲಿ ನದಿ ನೀರು ಅಧಿಕ ಮಲಿನಗೊಂಡಿರುವುದು ಪತ್ತೆಯಾದ ಬಳಿಕ ನದಿ ನೀರು ಬಳಕೆದಾರರಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ. ಆದರೆ ಕೇಂದ್ರವು ಈ ಸಮಸ್ಯೆಯ ಬಗ್ಗೆ ಇನ್ನೂ ನಿರ್ಧಾರಕ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಅಸಮಾಧಾನವಿದೆ.

  ತಾವೇನೂ ಮಾಡಿಲ್ಲ ಎಂದು ಚೀನೀಯರು ಹೇಳುತ್ತಿದ್ದಾರೆ. ಆದರೆ 1962ರಲ್ಲೂ ‘ಹಿಂದಿ- ಚೀನಿ ಭಾಯಿ ಭಾಯಿ’ ಎಂದು ಬಾಯಿಯಲ್ಲಿ ಹೇಳುತ್ತಾ ಹಿಂದಿನಿಂದ ನಮ್ಮ ಮೇಲೆ ಅವರು ಆಕ್ರಮಣ ನಡೆಸಿದ್ದರು. ಇಲ್ಲೂ ಕೂಡಾ ಇದೇ ರೀತಿಯ ಘಟನೆ ನಡೆದಿದೆ. ಇಷ್ಟೆಲ್ಲಾ ನಡೆದರೂ ಕೇಂದ್ರ ಸರಕಾರ ಸುಮ್ಮನಿರುವುದನ್ನು ಕಂಡರೆ , ನಿಜವಾಗಿಯೂ ಕೇಂದ್ರ ಸರಕಾರಕ್ಕೆ ಈಶಾನ್ಯ ರಾಜ್ಯಗಳ ಬಗ್ಗೆ ಕಾಳಜಿಯಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಸ್ಥಳೀಯ ಸಂಸದ ನಿನೊಂಗ್ ಎರಿಂಗ್ ಹೇಳಿದ್ದಾರೆ. ಇಲ್ಲಿ ಇತ್ತೀಚಿನ ದಿನದಲ್ಲಿ ಯಾವುದೇ ಮೀನುಗಾರರನ್ನು ನಾವು ಕಂಡಿಲ್ಲ. ಜಲಚರಗಳು ಸಂಪೂರ್ಣ ನಾಶವಾಗಿವೆ. ಇಲ್ಲಿಂದ 3 ಕಿ.ಮೀ. ಕೆಳಭಾಗದಲ್ಲಿ ಒಂದು ವನ್ಯಜೀವಿ ಅಭಯಾರಣ್ಯವಿದೆ. ಪ್ರತೀವರ್ಷ ಅಲ್ಲಿಂದ ಹಕ್ಕಿಗಳು ವಲಸೆ ಬರುತ್ತವೆ. ಆದರೆ ಇನ್ನು ಮುಂದೆ ಈ ಹಕ್ಕಿಗಳು ಕಾಣಸಿಗಲಿಕ್ಕಿಲ್ಲ ಎಂದು ಎರಿಂಗ್ ಹೇಳಿದ್ದಾರೆ.

    ಕುಡಿಯುವ ನೀರಿನಲ್ಲಿ ಗರಿಷ್ಟ ಎನ್‌ಟಿಯು (ನೀರಿನ ಮಲಿನತೆಯ ಪ್ರಮಾಣ) ಪ್ರಮಾಣ 5ನ್ನು ಮೀರುವಂತಿಲ್ಲ . ಆದರೆ ನವೆಂಬರ್ 7ರಂದು ಇಲ್ಲಿ ನೀರಿನ ಸ್ಯಾಂಪಲ್ ಪ್ರಯೋಗ ನಡೆಸಿದಾಗ ಎನ್‌ಟಿಯು ಪ್ರಮಾಣ 425 ಎಂದು ತಿಳಿದುಬಂದಿರುವುದು ಈ ನದಿ ನೀರು ಎಷ್ಟೊಂದು ಮಲಿನವಾಗಿದೆ ಎಂಬುದನ್ನು ಸೂಚಿಸುತ್ತದೆ.

  ಇದೊಂದು ಸುಂದರ ನದಿಯಾಗಿದ್ದು ಚಳಿಗಾಲದಲ್ಲಿ ವಿಸ್ತಾರವಾಗಿ ಹರಿಯುತ್ತದೆ. ಆದರೆ ಇದುವರೆಗೂ ಈ ರೀತಿಯ ಕಪ್ಪುನೀರನ್ನು ನಾವು ಕಂಡಿಲ್ಲ ಎಂದು 82 ಹರೆಯದ ನಿವೃತ್ತ ಸರಕಾರಿ ಉದ್ಯೋಗಿ , ಈ ನದಿ ತೀರದ ನಿವಾಸಿ ಕಾಕುತ್ ತಯೆಂಗ್ ವಿಷಾದದಿಂದ ಹೇಳುತ್ತಾರೆ. ಈ ಗಂಭೀರ ಸಮಸ್ಯೆಯ ಕುರಿತು ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಅರುಣಾಚಲ ಪ್ರದೇಶದ ಜನತೆ ಅಸಮಾಧಾನಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News