ಪ್ರವಾದಿಯನ್ನು ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ: ಅಬ್ದುಸ್ಸಲಾಮ್ ಪುತ್ತಿಗೆ

Update: 2017-12-09 14:37 GMT

ಬೆಂಗಳೂರು, ಡಿ.9: ರಾಜ್ಯದ ಮುಸ್ಲಿಮರ ಒಂದು ಭಾಗವು ಬಹುಕಾಲ ಕನ್ನಡದಿಂದ ದೂರ ಉಳಿದು ತನಗೆ ತಾನೇ ಗಣನೀಯ ನಷ್ಟ ಉಂಟು ಮಾಡಿಕೊಂಡಿದೆ. ರಾಜ್ಯದ ಭಾಷೆಯನ್ನು ತಮ್ಮಿಂದ ದೂರ ಇಟ್ಟವರು ರಾಜ್ಯದ ಜನರಿಂದಲೂ ದೂರವಾಗಿ ಬಿಟ್ಟರು ಎಂದು 'ವಾರ್ತಾಭಾರತಿ' ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಹೇಳಿದರು.

ಶನಿವಾರ ನಗರದ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಆಬ್ಜೆಕ್ಟಿವ್ ಸ್ಟಡೀಸ್ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್ (ಸ)ರವರ ಜೀವನ ಚರಿತ್ರೆ ಕುರಿತು ಕನ್ನಡದಲ್ಲಿ ರಚಿಸಲಾಗಿರುವ ಪ್ರಮುಖ ಗ್ರಂಥಗಳು’ ಕುರಿತು ಅವರು ವಿಷಯ ಮಂಡನೆ ಮಾಡಿದರು.

ತಮ್ಮದೇ ನೆಲದಲ್ಲಿ ತಮ್ಮ ಅಕ್ಕ ಪಕ್ಕದಲ್ಲಿದ್ದ ತಮ್ಮವರ ಪಾಲಿಗೆ ಅಪರಿಚಿತರಾದರು. ಸಂವಹನದ ಬಾಗಿಲು ಮುಚ್ಚಿದಾಗ ಅವರು ಮಾತ್ರವಲ್ಲ, ಅವರು ನಂಬುವ ಧರ್ಮ, ಅವರು ಗೌರವಿಸುವ ವ್ಯಕ್ತಿಗಳು, ಸಂಕೇತಗಳು, ಆಚರಣೆಗಳು ಎಲ್ಲವೂ ಅಪರಿಚಿತವಾಗಿ ಬಿಟ್ಟವು. ಈ ಅಪರಿಚಿತತೆಯು ಅಪನಂಬಿಕೆ, ಅವಿಶ್ವಾಸ, ಸಂದೇಹ, ಅನ್ಯತೆ, ಅಸಹಿಷ್ಣುತೆ, ದ್ವೇಷ ಮತ್ತಿತರ ಹಲವು ದುರಂತಗಳಿಗೆ ಕಾರಣವಾಯಿತು ಎಂದು ಅವರು ಹೇಳಿದರು.

ಇದೀಗ ನಾವು ನಮ್ಮ ಸಮಾಜದಲ್ಲಿ ಎಲ್ಲರ ಪಾಲಿಗೆ ಪರಿಚಿತರಾಗಿ ಎಲ್ಲರ ಜೊತೆ ಆತ್ಮೀಯತೆ ಬೆಳೆಸಿಕೊಂಡು ಎಲ್ಲರ ವಿಶ್ವಾಸಪಾತ್ರ ಮಿತ್ರರಾಗಬೇಕಾದ ಅಗತ್ಯವಿದೆ. ನಾವು ನಂಬುವ ಮತ್ತು ನಮ್ಮ ಪಾಲಿನ ಮಾರ್ಗದರ್ಶಿ ಹಾಗೂ ಆದರ್ಶವೆಂದು ನಂಬಿರುವ ಮಾನ್ಯ ಪ್ರವಾದಿಯನ್ನು ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ ಎಂದು ಅಬ್ದುಸ್ಸಲಾಮ್ ಪುತ್ತಿಗೆ ಪ್ರತಿಪಾದಿಸಿದರು.

ಪ್ರವಾದಿಯ ಬದುಕು ಕೇವಲ ಇತಿಹಾಸ ಅಥವಾ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಅದು ನಿತ್ಯದ ಬದುಕು, ದೈನಂದಿನ ನೋವು ನಲಿವುಗಳು, ಸಂಬಂಧಗಳು, ಜೀವನ ಶೈಲಿ, ಸತ್ಯ, ನ್ಯಾಯ, ಮನಸ್ಸು, ಚಿತ್ತ, ಆತ್ಮ, ಅಧ್ಯಾತ್ಮ, ಸಂಸ್ಕೃತಿ, ಭಾವನೆಗಳು, ಶಿಕ್ಷಣ, ನೈತಿಕತೆ, ಆಡಳಿತ, ವಾಣಿಜ್ಯ, ರಾಜಕೀಯ ಹೀಗೆ ಬದುಕಿನ ಸರ್ವ ಆಯಾಮಗಳ ಜೊತೆ ಗಾಢ ನಂಟಿರುವ ಒಂದು ವಿಷಯ ಎಂದು ಅವರು ಹೇಳಿದರು.

ಜಗತ್ತಿನ ಬಹುತೇಕ ಭಾಷೆಗಳಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರ ಕುರಿತು ಬರೆಯಲಾಗಿರುವಷ್ಟು ಗ್ರಂಥಗಳನ್ನು ಬಹುಶಃ ಬೇರೆ ಯಾವ ಮಾನವನ ಕುರಿತೂ ಬರೆಯಲಾಗಿಲ್ಲ. ಹತ್ತಾರು ಭಾಷೆಗಳಲ್ಲಿ ಪದ್ಯ, ಗದ್ಯ, ಮಹಾಕಾವ್ಯ, ಕಥೆ, ಕಾದಂಬರಿ, ಇತಿಹಾಸ ಹೀಗೆ ವಿಭಿನ್ನ ಪ್ರಕಾರಗಳಲ್ಲಿ ಪ್ರವಾದಿ ಕೇಂದ್ರಿತ ಬರಹಗಳು ಹಲವಾರು ಭಾಷೆಗಳಲ್ಲಿ ಕಂಡು ಬರುತ್ತವೆ ಎಂದು ಅವರು ತಿಳಿಸಿದರು.

ಕನ್ನಡ ಭಾಷೆಯ ಸಾಹಿತ್ಯಲೋಕ ಸಾಕಷ್ಟು ಸಂಪನ್ನವಾಗಿದೆ. ಮಾನವ ಸಮಾಜಕ್ಕೆ ಮಾರ್ಗದರ್ಶಿಯಾಗಿ ಬಂದ ಆದರ್ಶ ಪುರುಷ ಪ್ರವಾದಿ ಮುಹಮ್ಮದ್(ಸ ) ಅವರಿಗೆ ಸಂಬಂಧಿಸಿದ ಸಾಹಿತ್ಯವೂ ಕನ್ನಡದಲ್ಲಿದೆ. ಆದರೆ, ಇಲ್ಲಿ ಆ ನಿಟ್ಟಿನ ಪ್ರಯಾಣ ಸದ್ಯ ಆರಂಭವಾಗಿದೆಯಷ್ಟೆ. ಅವರ ಕುರಿತು ಕನ್ನಡದಲ್ಲಿರುವ ಕೃತಿಗಳ ಸಂಖ್ಯೆ ತೀರಾ ಸೀಮಿತ ಎಂದು ಅವರು ಹೇಳಿದರು.

ಮೂರು ದಶಕಗಳ ಹಿಂದೆ ಇದ್ದ ಸನ್ನಿವೇಶಕ್ಕೆ ಹೋಲಿಸಿದರೆ ಇಂದು ಪರಿಸ್ಥಿತಿಯು ಗಣನೀಯವಾಗಿ ಸುಧಾರಿಸಿದೆ. ಉರ್ದು ಗದ್ಯ ರೂಪದಲ್ಲಿರುವ ಮೌಲಾನಾ ಶಿಬಿಲಿ ನೋಮಾನಿ ಮತ್ತು ಮೌಲಾನಾ ಸುಲೈಮಾನ್ ನದ್ವಿ ಅವರ ಮೇರು ಕೃತಿ ‘ಸೀರತುನ್ನಬಿ’, ಇಮಾಮ್ ಶರ್ಫುದ್ದೀನ್ ಬಸೈರಿಯವರು ಅರಬಿ ಭಾಷೆಯಲ್ಲಿ ಕಾವ್ಯವಾಗಿ ಬರೆದ ‘ಖಸೀದಃ ಬುರ್ದಾ’, Martin Ling’s Muhammad: His Life Based on the Earliest Sources ಹೀಗೆ ಇತರ ಭಾಷೆಗಳ ಅದೆಷ್ಟೋ ಯಶಸ್ವಿ ಕೃತಿಗಳು ಕನ್ನಡಿಗರಿಗೆ ಅವರ ಭಾಷೆಯಲ್ಲಿ ಸಿಗಬೇಕಿದೆ ಎಂದು ಅವರು ತಿಳಿಸಿದರು.

ಪ್ರವಾದಿ(ಸ)ಯ ಕುರಿತಾಗಿ ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ ಕೃತಿಗಳು: 720 ಪುಟಗಳನ್ನು ಹೊಂದಿರುವ ‘ಮಾನವ ಕುಲದ ವಿಮೋಚಕ’ ಗ್ರಂಥ-ಇದು ಮೌಲಾನಾ ನಈಮ್ ಸಿದ್ದಿಕಿ ಅವರ ‘ಮುಹಸಿನೆ ಇನ್ಸಾನಿಯತ್’ ಎಂಬ ಉರ್ದು ಕೃತಿಯ ಕನ್ನಡಾನುವಾದ. ಸದ್ಯ ಕನ್ನಡ ಭಾಷೆಯಲ್ಲಿ ಪ್ರವಾದಿ ಕುರಿತಾದ ಅತ್ಯಂತ ದೊಡ್ಡ ಕೃತಿ ಎಂದು ಅವರು ಹೇಳಿದರು.

‘ಮುಹಸಿನೆ ಇನ್ಸಾನಿಯತ್’ನ ಆಂಗ್ಲ ಅನುವಾದವು ‘Muhammad the Benefactor of Humanity’ ಎಂಬ ಹೆಸರಲ್ಲಿ ಬಹಳ ಹಿಂದೆಯೇ ಪ್ರಕಟವಾಗಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಇದರಲ್ಲಿ ಪ್ರವಾದಿವರ್ಯರ ಬದುಕು ಮತ್ತು ಸಂದೇಶದ ಕ್ರಾಂತಿಕಾರಿ ಆಯಾಮಗಳನ್ನು ಬಹಳ ಪರಿಣಾಮಕಾರಿಯಾಗಿ ವಿಶ್ಲೇಷಿಸಲಾಗಿದೆ ಎಂದು ಅವರು ತಿಳಿಸಿದರು.

360 ಪುಟಗಳ ‘ಪ್ರವಾದಿ ಮುಹಮ್ಮದ್(ಸ)-ಜೀವನ ಮತ್ತು ಸಂದೇಶ’, 302 ಪುಟಗಳ ‘ಓದಿರಿ’-ಇದು ಕನ್ನಡದ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದು ಅಬ್ದುಸ್ಸಲಾಮ್ ಪುತ್ತಿಗೆ ಹೇಳಿದರು.

ಆನ್‌ಲೈನ್ ಕೃತಿಗಳು: ಪ್ರವಾದಿ ಮುಹಮ್ಮದ್(ಸ)ರಿಗೆ ಸಂಬಂಧಿಸಿದ ಕೆಲವು ಕನ್ನಡ ಕೃತಿಗಳು ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿವೆ. ಉದಾ: ‘ಪ್ರವಾದಿಯನ್ನು ಅರಿಯಿರಿ’, ‘ಕಲ್ಕಿ ಅವತಾರ ಮತ್ತು ಪ್ರವಾದಿ ಮುಹಮ್ಮದ್’, ‘ನರಾಶಂಸ’ ಈ ಎರಡೂ ಕೃತಿಗಳಲ್ಲಿ ವೈದಿಕ ಧರ್ಮ ಗ್ರಂಥಗಳ ಹಿನ್ನೆಲೆಯಲ್ಲಿ ಪ್ರವಾದಿ ಮುಹಮ್ಮದ್(ಸ) ಅವರ ಸಾಂಗತ್ಯವನ್ನು ವಿವರಿಸುವ ಮೂಲಕ ವೈದಿಕ ವಿಚಾರಧಾರೆಯವರ ಪಾಲಿಗೆ ಪ್ರವಾದಿಯನ್ನು ಪರಿಚಯಿಸುವ ಶ್ರಮ ನಡೆಸಲಾಗಿದೆ ಎಂದು ಅವರು ಹೇಳಿದರು.

ಇದಲ್ಲದೆ, ಇನ್ನು ಅನೇಕ ಕೃತಿಗಳು, ಪುಸ್ತಕಗಳನ್ನು ಮಂಗಳೂರಿನ ಶಾಂತಿ ಪ್ರಕಾಶನ, ಸಲಾಂ ಸೆಂಟರ್, ನವ ಕರ್ನಾಟಕ ಪ್ರಕಾಶಕ ಸಂಸ್ಥೆ, ಭಟ್ಕಳದ ಮೌಲಾನಾ ಅಬುಲ್ ಹಸನ್ ಅಲಿ ನದ್ವಿ ಅಕಾಡೆಮಿ, ಧರ್ಮ ಪ್ರಕಾಶನ, ಸಲಫಿ ಪ್ರಕಾಶನ, ಮರ್ಸಿನ್ ಪಬ್ಲಿಕೇಷನ್ಸ್, ಅಲ್ ಮದೀನಾ ಪಬ್ಲಿಕೇಷನ್ಸ್, ಅಲ್ ಅಮೀನ್ ಪಬ್ಲಿಕೇಷನ್ಸ್, ಕಲಂ ಪಬ್ಲಿಕೇಷನ್ಸ್, ಸಮರಾತ್ ಪಬ್ಲಿಕೇಷನ್ಸ್ ಕುತ್ತಾರ್, ಜಂಇಯ್ಯುತು ರಿಫ್ ಅತುದ್ದೀನ್-ದಮಾಮ್, ಕೆಸಿಎಫ್ ಸೇರಿದಂತೆ ಇನ್ನಿತರರು ಪ್ರಕಟಿಸಿರುವ ಮಾಹಿತಿಯನ್ನು ಅಬ್ದುಸ್ಸಲಾಮ್ ಪುತ್ತಿಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News