ಎಸ್.ನಿಜಲಿಂಗಪ್ಪ ಅವರಿಗೆ ಭಾರತರತ್ನ ಪ್ರಶಸ್ತಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ: ಸಿಎಂ ಸಿದ್ದರಾಮಯ್ಯ

Update: 2017-12-10 08:34 GMT

ಬೆಂಗಳೂರು, ಡಿ. 10: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಮತ್ತು ದೆಹಲಿ ಪಾರ್ಲಿಮೆಂಟ್ ಆವರಣದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರ 115ನೆ ಜನ್ಮದಿನಾಚರಣೆಯ ಅಂಗವಾಗಿ ವಿಧಾನ ಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ವಾಟಾಳ್ ನಾಗರಾಜ್ ಅವರು ಸಲ್ಲಿಸಿದ ಮನವಿಗೆ ಮೇಲ್ಕಂಡಂತೆ ಭರವಸೆ ನೀಡಿದರು.

ನಿಜಲಿಂಗಪ್ಪ ಅವರ ಪ್ರತಿಮೆ ಅವರ ತರಹ ಹೋಲಿಕೆ ಬರುತ್ತಿಲ್ಲ. ಅವರು ಹೆಚ್ಚಾಗಿ ಕಚ್ಚೆ ಪಂಚೆಯನ್ನು ಧರಿಸುತ್ತಿದ್ದರು. ಅದರಂತೆ ಪ್ರತಿಮೆಯನ್ನು ಬದಲಾವಣೆ ಮಾಡುವಂತೆ ಕೂಡ ವಾಟಾಳ್ ಅವರು ಮನವಿ ಮಾಡಲಾಗಿ, ಮುಖ್ಯಮಂತ್ರಿ ಅವರು ಅದಕ್ಕೆ ಸಮ್ಮತಿ ಸೂಚಿಸಿ ಪ್ಯಾಂಟ್ ಧರಿಸಿರುವಂತಿರುವ ನಿಜಲಿಂಗಪ್ಪ ಅವರ ಪ್ರತಿಮೆ ಯನ್ನು ಕಚ್ಚೆ ಪಂಚೆಗೆ ಬದಲಾಯಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ನಿಜಲಿಂಗಪ್ಪ ಅವರು ದೇಶ ಕಂಡ ಒಬ್ಬ ಅಪ್ರತಿಮ ನಾಯಕ. ರಾಜಕೀಯ ಜೀವನದಲ್ಲಿ ಕೈ ಮತ್ತು ಬಾಯಿಯನ್ನು ಶುದ್ಧವಾಗಿಟ್ಟುಕೊಂಡು ಅತ್ಯಂತ ಪ್ರಮಾಣಿಕವಾಗಿ  ರಾಜಕಾರಣ ಮಾಡಿದವರು. ರಾಜ್ಯದಲ್ಲಿ ಅವರು ನೀರಾವರಿಗೆ ನೀಡಿರುವ ಕೊಡುಗೆ ಅಪಾರವಾದುದು. ರಾಜ್ಯದ ಪ್ರಜೆಗಳ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದರು. ಅವರು ಬರೀ ರಾಜ್ಯಕ್ಕೆ ಮಾತ್ರ ನಾಯಕರಾಗಿರದೆ ರಾಷ್ಟ್ರಮಟ್ಟದ ನಾಯಕರು ಕೂಡ ಆಗಿದ್ದರು. ಅವತ್ತಿನ ಆಲ್ ಇಂಡಿಯಾ ಕಮಿಟಿಯ ಅಧ್ಯಕ್ಷರಾಗಿದ್ದರು. ಹಾಗಾಗಿ ಅವರಿಗೆ ದೇಶದಲ್ಲಿ ಇನ್ನೂ ಉನ್ನತ ಸ್ಥಾನ ಸಿಗಬೇಕು. ಅಂತಹ ಉನ್ನತ ವ್ಯಕ್ತಿತ್ವವನ್ನು ಅವರು ಹೊಂದಿದ್ದರು ಎಂದು ತಿಳಿಸಿದರು.

ತುಮಕೂರಿನ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮುಂಬೈಯಲ್ಲಿ ನಲೆಸಿರುವ ಮಂಡ್ಯದ ಕನ್ನಡಿಗರು ಆಚರಣೆ ಮೋಡುತ್ತಿರುವ ಕನಕ ಜಯಂತಿ ಯಲ್ಲಿ ಭಾಗವಹಿಸಲು ಇಂದು ಮಧ್ಯಾಹ್ನ ಮುಂಬೈಗೆ ತೆರಳುತ್ತಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಈ ಸಂದರ್ಭ ಹಿರಿಯ ರಾಜಕಾರಣಿ ಎಂ.ವಿ.ರಾಜಶೇಖರನ್ , ಮೇಯರ್ ಸಂಪತ್ ರಾಜ್, ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಝಾ ಅವರು ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News