ಬಿಜೆಪಿ ಸಂಸದ, ಶಾಸಕರಿರುವ ವಾಟ್ಸ್ಯಾಪ್ ಗ್ರೂಪ್ ನಲ್ಲಿ ಹಂತಕನಿಗೆ ಮೆಚ್ಚುಗೆ!

Update: 2017-12-10 08:46 GMT

ಹೊಸದಿಲ್ಲಿ, ಡಿ.10: ಬಿಜೆಪಿ ಸಂಸದ ಹಾಗು ಶಾಸಕರಿರುವ ವಾಟ್ಸ್ಯಾಪ್ ಗ್ರೂಪೊಂದರಲ್ಲಿ ಲವ್ ಜಿಹಾದ್ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಜೀವಂತ ದಹಿಸಿದ ಆರೋಪಿ ಶಂಭುಲಾಲ್ ನನ್ನು ಹೊಗಳುವ ಸಂದೇಶವೊಂದು ಹರಿದಾಡಿದ ಬಗ್ಗೆ ವರದಿಯಾಗಿದೆ.

ಬಿಜೆಪಿ ಬೂತ್ ವಿಸ್ತಾರಕ ಎನ್ನಲಾದ ಪ್ರೇಮ್ ಮಾಲಿ ಎಂಬಾತ ಕ್ರಿಯೇಟ್ ಮಾಡಿದ ‘ಸ್ವಚ್ಛ್ ರಾಜ್ ಸಮಂದ್, ಸ್ವಚ್ಛ್ ಭಾರತ್” ಎಂಬ ವಾಟ್ಸ್ಯಾಪ್ ಗ್ರೂಪ್ ನಲ್ಲಿ ರಾಜ್ ಸಮಂದ್ ನ ಬಿಜೆಪಿ ಸಂಸದ ಹರಿ ಓಂ ಸಿಂಗ್ ರಾಥೋಡ್ ಹಾಗು ಬಿಜೆಪಿ ಶಾಸಕ ಕಿರಣ್ ಮಹೇಶ್ವರಿ ಎಂಬವರಿದ್ದು, ಇದೇ ಗ್ರೂಪ್ ನಲ್ಲಿ ಹಂತಕನನ್ನು ಹೊಗಳಲಾಗಿದೆ.

“ಲವ್ ಜಿಹಾದಿಗಳೇ ಎಚ್ಚರಿಕೆ, ಶಂಭುಲಾಲ್ ಎಚ್ಚೆತ್ತಿದ್ದಾನೆ, ಜೈ ಶ್ರೀ ರಾಮ್”, “ಶಂಭುಲಾಲ್ ನ ಪ್ರಕರಣದಲ್ಲಿ ಸುಖ್ ದೇವ್ ಹೋರಾಟ ನಡೆಸಲಿದ್ದು, ಅವನಿಗೆ ನ್ಯಾಯ ಒದಗಿಸಲಿದ್ದಾರೆ. ವಕೀಲರೆಂದರೆ ನಿಮ್ಮಂತೆ ಇರಬೇಕು. ಜೈ ಮೇವರ್, ಜೈ ಮಾವ್ಲಿ. ಅಡ್ವಕೇಟ್ ಸುಖ್ ದೇವ್ ಸಿಂಗ್ ಉಜ್ವಲ್ ಮಾವ್ಲಿ ಉಚಿತವಾಗಿ (ಶುಲ್ಕ ಪಡೆದುಕೊಳ್ಳದೆ) ಹೋರಾಟ ನಡೆಸಲಿದ್ದಾರೆ” ಎನ್ನುವ ಎನ್ನುವ ಸಂದೇಶಗಳು ಈ ಗ್ರೂಪ್ ನಲ್ಲಿ ಹರಿದಾಡುತ್ತಿದೆ.

ಉದಯ್ ಪುರ್ ಜಿಲ್ಲೆಯ ಮಾವ್ಲಿಯ ವಕೀಲರಾಗಿದ್ದಾರೆ ಸುಖ್ ದೇವ್ ಸಿಂಗ್ ಉಜ್ವಲ್, ಈ ಬಗ್ಗೆ ಅವರನ್ನು ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಿದ್ದು, ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವ ವಿಚಾರವನ್ನು ಅವರು ನಿರಾಕರಿಸಿದ್ದಾರೆ. “ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸಂದೇಶಗಳ ಬಗ್ಗೆ ನನಗೆ ಮಾಹಿತಿಯಿಲ್ಲ. ನನಗೆ ಈಗಾಗಲೇ ಸಾಕಷ್ಟು ಕೆಲಸಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂದೇಶ ಹೇಗೆ ಬಂದಿದೆ ಎನ್ನುವ ಬಗ್ಗೆ ನನಗ ಮಾಹಿತಿಯಿಲ್ಲ” ಎಂದಿದ್ದಾರೆ.

“ಶಂಭುಲಾಲ್ ನನ್ನು ಬೆಂಬಲಿಸಿದ ಸಂದೇಶದ ಬಗ್ಗೆ ನನಗೆ ಮಾಹಿತಿಯಿಲ್ಲ. ನಾನು ವಾಟ್ಸ್ಯಾಪ್ ನಲ್ಲಿ ಆ್ಯಕ್ಟಿವ್ ಆಗಿಲ್ಲ” ಎಂದು ಸಂಸದ ರಾಥೋಡ್ ಪ್ರತಿಕ್ರಿಯಿಸಿದ್ದಾರೆ.

“ವಾಟ್ಸ್ಯಾಪ್ ನಲ್ಲಿ ಸಾವಿರಾರು ಜನರಿರುತ್ತಾರೆ. ನಾನು ಈ ಬಗ್ಗೆ ಏನಾದರೂ ಹೇಳಿದ್ದೇನೆಯೇ?, ಈ ಪ್ರಕರಣದ ಆರೋಪಿ ವಿಕೃತ ಮನಸ್ಸಿನವನು ಹಾಗು ಮಾನಸಿಕ ಸಮಸ್ಯೆಯವನು ಎನ್ನುವುದು ಸ್ಪಷ್ಟವಾಗಿದೆ” ಎಂದು ಶಾಸಕ ಮಹೇಶ್ವರಿ ಹೇಳಿದ್ದಾರೆ.

ಈ ಬಗ್ಗೆ ವಾಟ್ಸ್ಯಾಪ್ ಗ್ರೂಪ್ ನ ಅಡ್ಮಿನ್, “ ಈ ಬಗ್ಗೆ ನಾನು ಏನು ಹೇಳಲಿ?, ಈ ಸಂದೇಶವನ್ನು ಶೇರ್ ಮಾಡಿದವರ ವೈಯಕ್ತಿಕ ಅಭಿಪ್ರಾಯವಾಗಿದೆ. ಪ್ರತಿಯೊಬ್ಬರಿಗೆ ವಿಭಿನ್ನ ನಂಬಿಕೆಗಳಿರುತ್ತದೆ” ಎಂದು ಪ್ರತಿಕ್ರಿಯಿಸಿದ್ದಾನೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News