ಕಾಂಗ್ರೆಸ್ ನಲ್ಲಿ ಜಾತ್ಯಾತೀತತೆ ದುರ್ಬಲವಾಗಿದೆ: ಪ್ರಕಾಶ್ ಕಾರಟ್

Update: 2017-12-11 03:56 GMT

ಹೊಸದಿಲ್ಲಿ, ಡಿ. 11: ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸವನ್ನು ತಡೆಯದಿರಲು ಪಿ.ಪಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿತ್ತು ಎಂದು ಹಿರಿಯ ಸಿಪಿಐ(ಎಂ) ಮುಖಂಡ ಪ್ರಕಾಶ್ ಕಾರಟ್ ಆಪಾದಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ಆ ಪಕ್ಷದಲ್ಲಿ ಜಾತ್ಯತೀತತೆ ದುರ್ಬಲವಾಗಿದೆ ಎಂದು ಟೀಕಿಸಿದ್ದಾರೆ. "ಕಾಂಗ್ರೆಸ್ ಪಕ್ಷವನ್ನು ಜಾತ್ಯತೀತ ಪಕ್ಷ ಎಂದು ಕರೆಯಲಾಗದು. ಅದು ಜಾತ್ಯತೀತ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ ಅದರ ಜಾತ್ಯತೀತತೆ ದುರ್ಬಲವಾಗಿದೆ. ಅದು ಚಂಚಲವಾಗಿದ್ದು, ಸಂಧಾನದ ಉದ್ದೇಶ ಹೊಂದಿದೆ. ಅಂದು ನಿರ್ದಿಷ್ಟವಾಗಿ ಏನು ನಡೆಯಿತು ಎನ್ನುವುದು ನನಗೆ ಗೊತ್ತು. ಪಿವಿಎನ್ ಸರ್ಕಾರ ಈ ದಾಂಧಲೆಯನ್ನು ತಡೆಯದಿರಲು ನಿರ್ಧರಿಸಿತ್ತು ಎಂದು ದೂರಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಯನ್ನು ಎಡಪಕ್ಷಗಳು ಏಕೆ ಪ್ರಸ್ತಾವಿಸುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ, "ಅದೊಂದು ದೊಡ್ಡ ಹೋರಾಟ. ಬಜೆಪಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತದೆ ಎಂಬ ನಿರೀಕ್ಷೆ ಇದೆ" ಎಂದು ಉತ್ತರಿಸಿದರು.

"ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಧ್ವನಿ ಎತ್ತಲು ಸಾಧ್ಯವಾಗಿಲ್ಲ ಎಂದ ಮಾತ್ರಕ್ಕೆ ನಮಗೆ ಅದನ್ನು ಸಾಧಿಸಲು ಸಾಧ್ಯವಾಗಿಲ್ಲ ಎಂಬ ಅರ್ಥವಲ್ಲ, ಮೀಸಲಾತಿಯನ್ನು ನಾವೂ ಬಯಸುತ್ತೇವೆ. ಆದರೆ ಮಹಿಳೆಯರಿಗೆ ನಮ್ಮ ಪಕ್ಷವೂ ಸೇರಿದಂತೆ ಯಾವ ಪಕ್ಷಗಳಲ್ಲಿ ಕೂಡಾ ಸೂಕ್ತ ಪ್ರಾತಿನಿಧ್ಯ ಖಾತ್ರಿಪಡಿಸುವುದು ಸುಲಭ ಸಾಧ್ಯವಲ್ಲ. ಇದೊಂದು ದೊಡ್ಡ ಸಂಘರ್ಷ. ಅದನ್ನು ಸಾಧಿಸುವ ಪ್ರಯತ್ನದಲ್ಲಿದ್ದೇವೆ. ಆದರೆ ಈ ನಿಟ್ಟಿನಲ್ಲಿ ಆಗಿರುವ ಪ್ರಗತಿ ಸೀಮಿತ ಎಂದು ಅವರು ಒಪ್ಪಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News